ಶನಿವಾರ, ಆಗಸ್ಟ್ 13, 2022
26 °C
ಬೇಡಜಂಗಮ ‘ಸತ್ಯ ಪ್ರತಿಪಾದನಾ ಸತ್ಯಾಗ್ರಹ’

ಪ್ರಮಾಣಪತ್ರ ನೀಡಲು ಆಗ್ರಹ: ಬೇಡಜಂಗಮ ‘ಸತ್ಯ ಪ್ರತಿಪಾದನಾ ಸತ್ಯಾಗ್ರಹ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ಬೇಡಜಂಗಮ ಸಂಘಟನೆಗಳ ಒಕ್ಕೂಟದ ವತಿಯಿಂದ ಗುರುವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ‘ಸತ್ಯ ಪ್ರತಿಪಾದನಾ ಸತ್ಯಾಗ್ರಹ’ ನಡೆಯಿತು.

‘ಬೇಡಜಂಗಮ ಸಮುದಾಯದ ಸಾಂವಿಧಾನಿಕ ಹಾಗೂ ಕಾನೂನುಬದ್ಧ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ. ನಮ್ಮ ಕುಲವನ್ನೇ ನಾಶಪಡಿಸಲು ವಿಧಾನಮಂಡಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳ ಕಲ್ಯಾಣ ಸಮಿತಿಯ ಕೆಲವರು ಶಾಸಕರು ಪ್ರಯತ್ನಿಸಿದ್ದಾರೆ. ಹೀಗಾಗಿ, ಸತ್ಯ ಪ್ರತಿಪಾದನೆಗಾಗಿ ಈ ಹೋರಾಟ ಮಾಡಲಾಗುತ್ತಿದೆ’ ಎಂದು ಒಕ್ಕೂಟದ ಅಧ್ಯಕ್ಷ ಬಿ.ಡಿ. ಹಿರೇಮಠ ತಿಳಿಸಿದರು.

‘ಬೇಡ ಜಂಗಮ ಪ್ರಮಾಣಪತ್ರ ಪಡೆಯುವುದು ಕಾನೂನು ಬದ್ಧ ಹಕ್ಕು. ಆದರೆ, ಕಲ್ಯಾಣ ಸಮಿತಿಗೆ ಅಧಿಕಾರ ಇಲ್ಲದಿದ್ದರೂ ಪ್ರಮಾಣಪತ್ರದ ಬಗ್ಗೆ ನಿರ್ಧಾರಗಳನ್ನು ಕೈಗೊಂಡು ನಮ್ಮ ಸಮುದಾಯವನ್ನು ಸರ್ಕಾರದ ಸೌಲಭ್ಯ
ಗಳಿಂದ ವಂಚಿತರನ್ನಾಗಿ ಮಾಡುತ್ತಿದೆ. ಬೇಡ ಜಂಗಮಕ್ಕೆ ಸಂಬಂಧಿಸಿದಂತೆ ಸುಳ್ಳು ಪ್ರಮಾಣಪತ್ರ ಪಡೆಯಲಾಗುತ್ತಿದೆ ಎಂದು ಸಮಿತಿ ಪ್ರತಿಪಾದಿಸುತ್ತಿದೆ. ಪ್ರಮಾಣಪತ್ರ ಪಡೆದವರು ಮತ್ತು ನೀಡಿದವರ ಮೇಲೆ ಮೊಕದ್ದಮೆಗಳನ್ನು ಹಾಕುವ ಮೂಲಕ ಸರ್ಕಾರದ ಸುತ್ತೋಲೆ ಮತ್ತು ನ್ಯಾಯಾಲಯದ ತೀರ್ಪುಗಳನ್ನು ಉಲ್ಲಂಘಿಸಲಾಗುತ್ತಿದೆ’ ಎಂದು ದೂರಿದರು.

‘ಸಮುದಾಯವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದಿದೆ. ನಮ್ಮ ಹಕ್ಕುಗಳನ್ನು ಮೊಟಕುಗೊಳಿಸುವ ಅಧಿಕಾರ ಜನಪ್ರತಿನಿಧಿಗಳಿಗೆ ಇಲ್ಲ. ಜಾತಿ ಪ್ರಮಾಣಪತ್ರಗಳನ್ನು ನಿಯಮಾನುಸಾರ ಸಂಬಂಧಪಟ್ಟ ತಾಲ್ಲೂಕು ತಹಶೀಲ್ದಾರ್‌ ಅವರ ಮೂಲಕವೇ ವಿಚಾರಣೆಗೆ ಒಳಪಟ್ಟು ಕ್ರಮಬದ್ಧವಾಗಿ ಪಡೆಯಲಾಗುತ್ತಿದೆ. ನಾವು ಇನ್ನೊಬ್ಬರ ಹಕ್ಕುಗಳನ್ನು ಕಸಿಯುತ್ತಿಲ್ಲ.’ ಎಂದು ದೂರಿದರು.

‘ಹೋರಾಟಗಾರರಿಗೆ ತಡೆ’: ‘ಬೇಡ ಜಂಗಮ ಸಮಾವೇಶಕ್ಕೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಮಂದಿ ಬೆಂಗಳೂರಿಗೆ ಆಗಮಿಸುತ್ತಿದ್ದರು. ಆದರೆ,  ತುಮಕೂರಿನ ಶಿರಾ ಸೇರಿದಂತೆ ಎಲ್ಲ ಟೋಲ್‌ಗಳಲ್ಲಿ ಬಸ್‌ಗಳನ್ನು ತಡೆಹಿಡಿಯಲಾಯಿತು. ಈ ಮೂಲಕ ಸರ್ಕಾರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದೆ. ಆದರೆ, ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ’ ಅವರು ದೂರಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು