ಗುರುವಾರ , ಜೂನ್ 30, 2022
24 °C

ಬಸವಣ್ಣನವರ ಭಾವಚಿತ್ರಕ್ಕೆ ಅವಮಾನ: ನೀಚರಿಗೆ ಶಿಕ್ಷಿಸುವ ಕಾಲ ಬಂದಿದೆ– ನಾರಾಯಣಗೌಡ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಖಾನಾಪುರ ತಾಲ್ಲೂಕಿನ ಹಲಸಿ ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಸಗಣಿ ಮೆತ್ತಿ ಅವಮಾನ ಮಾಡಿರುವ ಪ್ರಕರಣದ ವಿರುದ್ಧ ಕರವೇ ಅಧ್ಯಕ್ಷ ನಾರಾಯಣಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಸೋಮವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ಜಗತ್ತಿನ ಶ್ರೇಷ್ಠ ಕ್ರಾಂತಿಕಾರಿ ಬಸವ, ಯಾರನ್ನೂ ದ್ವೇಷಿಸದೇ, ದಯವೇ ಧರ್ಮದ ಮೂಲವಯ್ಯ ಎಂದು ಸಕಲರನ್ನು ಬಿಗಿದಪ್ಪಿದ ಮಹಾನ್ ಚೇತನಕ್ಕೆ ಮಸಿ ಬಳಿದ ಜನರ ಸಂಸ್ಕೃತಿ ಎಂತದ್ದೆನ್ನುವುದು ಸಮಾಜ ಅರ್ಥಮಾಡಿಕೊಳ್ಳಬೇಕಿದೆ. ಬಸವಣ್ಣ ಬದುಕಿದ್ದಿದ್ದರೆ ಇವರ ದ್ವೇಷ, ಅಸಹನೆ ಕಂಡು ಅನುಕಂಪ ಪಡುತ್ತಿದ್ದರು, ಮರುಗುತ್ತಿದ್ದರು‘ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಖಾನಾಪುರದ ಹಲಸಿ ಹಿಂದೊಮ್ಮೆ ಕನ್ನಡಿಗರ ಬೃಹತ್ ಕದಂಬ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಅಂತಹ ಕನ್ನಡಿಗರ ಪವಿತ್ರ ಭೂಮಿಯಲ್ಲಿ ವಿಶ್ವಗುರು ಬಸವಣ್ಣನವರಿಗಾದ ಅವಮಾನ ಸಹಿಸಲು ಅಸಾಧ್ಯ. ಮಹಾನ್ ಮಾನವತಾವಾದಿಗೆ ಅವಮಾನ ಮಾಡಿದ ನೀಚರಿಗೆ ಎಂತಹ ಘೋರ ಶಿಕ್ಷೆ ನೀಡಿದರೂ ಕಡಿಮೆಯೆ. ಸರ್ಕಾರ ಇವರನ್ನು ಶಿಕ್ಷಿಸದಿದ್ದರೆ, ಜನರೇ ಶಿಕ್ಷಿಸುವ ಕಾಲ ಬಂದಿದೆ‘ ಎಂದು ನಾರಾಯಣಗೌಡ ಟ್ವೀಟಿಸಿದ್ದಾರೆ.

‘ಮಾತನಾಡಿದ್ದು ಸಾಕು, ಹೇಳಿಕೆಗಳನ್ನು ಕೇಳಿ ಸಾಕಾಗಿದೆ. ಸರ್ಕಾರ ಈಗಲಾದರೂ ಕಾರ್ಯೋನ್ಮುಕವಾಗಬೇಕು. ಮುಂದಿನ 24 ಗಂಟೆಯಲ್ಲಿ ಈ ದುಷ್ಕೃತ್ಯ ಎಸಗಿದ ಅಪರಾಧಿಗಳನ್ನು ಸರ್ಕಾರ ಬಂಧಿಸಿ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರನ್ನು ಗಡಿಪಾರು ಮಾಡಬೇಕು. ಬಸವಣ್ಣನವರ ಮೇಲೆ ಈ ಸರ್ಕಾರಕ್ಕೆ ಕಿಂಚಿತ್ತು ಗೌರವ ಇದ್ದರೆ ಈ ಕೆಲಸ ತುರ್ತಾಗಿ ಮಾಡಲಿ.‘ಎಂದು ಕರವೇ ಅಧ್ಯಕ್ಷ ಒತ್ತಾಯಿಸಿದ್ದಾರೆ.

‘ಸಾಮಾಜಿಕ ಕ್ರಾಂತಿ, ಧಾರ್ಮಿಕ ಕ್ರಾಂತಿ, ಸಮತಾವಾದದ ಹರಿಕಾರ ವಿಶ್ವ ಗುರು ಬಸವಣ್ಣನವರಿಗೆ ಬೆಳಗಾವಿಯ ಜಿಲ್ಲೆಯ ಖಾನಾಪುರದ ಹಲಸಿಯಲ್ಲಿ ನೀಚ ಎಂಇಎಸ್‌ ಮತ್ತು ಶಿವಸೇನೆ ಭಯೋತ್ಪಾದಕರು ಮಸಿ ಬಳಿದು ಸಮಸ್ತ ಮಾನವ ಕುಲಕ್ಕೆ ಅವಮಾನ ಎಸೆಗಿದ್ದಾರೆ. ಈ ಕೃತ್ಯವನ್ನ ಎಲ್ಲ ಕನ್ನಡಿಗರು ಖಂಡಿಸಬೇಕು. ಇದನ್ನು ನಾವು ಯಾರೂ ಕ್ಷಮಿಸಲು ಸಾಧ್ಯವಿಲ್ಲ‘ ಎಂದೂ ನಾರಾಯಣಗೌಡ ಟ್ವೀಟ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು