ಲಾಡ್ಜ್‌ನಲ್ಲಿ ಬೆಂಗಳೂರಿನ ಉದ್ಯೋಗಿ ಅನುಮಾನಾಸ್ಪದ ಸಾವು
ಮೈಸೂರು: ಬೆಂಗಳೂರಿನ ಹಣಕಾಸು ಸಂಸ್ಥೆಯೊಂದರ ಉದ್ಯೋಗಿಯು ಮೈಸೂರು ನಗರದ ಲಾಡ್ಜ್‌ವೊಂದರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಜೊತೆಯಲ್ಲಿದ್ದ ಪತ್ನಿ ನಾಪತ್ತೆಯಾಗಿದ್ದಾರೆ.
ಯಶವಂತಪುರದ ನಿವಾಸಿ ಉಮಾಶಂಕರ್ (45) ಮೃತಪಟ್ಟವರು. ನಗರದ ಮಂಡಿ ಠಾಣೆ ಪೊಲೀಸರು ಕೊಠಡಿ ಪರಿಶೀಲಿಸಿದಾಗ ಇನ್ಸುಲಿನ್ ಬಾಟಲಿ ಮತ್ತು ಸಿರಿಂಜ್ ಲಭಿಸಿದೆ. ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಬರೆದ ಡೆತ್ ನೋಟ್ ಕೂಡ ಸಿಕ್ಕಿದೆ. ಡೆತ್ ನೋಟ್ ಬರೆದ ನಂತರ ಪತಿ ಮೃತಪಟ್ಟು, ಪತ್ನಿ ನಾಪತ್ತೆಯಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ.
‘ಕೆಲ ವ್ಯಕ್ತಿಗಳು ಸಾಲ ಮರುಪಾವತಿಗೆ ಒತ್ತಾಯಿಸಿ ನಿಂದಿಸಿದ್ದು, ಅವಮಾನ ತಾಳಲಾರದೆ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ’ ಎಂಬ ಅಂಶ ಡೆತ್ ನೋಟ್‌ನಲ್ಲಿ ಇದ್ದು, ಅದಕ್ಕೆ ದಂಪತಿ ಸಹಿ ಹಾಕಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎನಿಸಿದ್ದು, ಪತ್ನಿಯನ್ನು ತನಿಖೆಗೆ ಒಳಪಡಿಸಿದ ಬಳಿಕ ನಿಜವಾದ ವಿಚಾರ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಮಾಶಂಕರ್ ಅವರು ಪತ್ನಿ ಕವಿತಾ ಮತ್ತು ಪುತ್ರಿ ಜೊತೆ ಜ.1ರಂದು ಮೈಸೂರಿಗೆ ಬಂದಿದ್ದಾರೆ. ಬಳಿಕ ಇಲ್ಲಿನ ಜಯನಗರದ ಅತ್ತೆ ಮನೆಯಲ್ಲಿ (ಕವಿತಾ ತವರು ಮನೆ) ಪುತ್ರಿಯನ್ನು ಬಿಟ್ಟು ಬೆಂಗಳೂರಿಗೆ ಹಿಂದಿರುಗುವುದಾಗಿ ಹೇಳಿ ಹೊರಟಿದ್ದಾರೆ. ಆದರೆ, ಬೆಂಗಳೂರಿಗೆ ತೆರಳದೆ ಮಂಡಿ ಠಾಣಾ ವ್ಯಾಪ್ತಿಯ ಲಾಡ್ಜ್‌ವೊಂದರಲ್ಲಿ ಶುಕ್ರವಾರ ರಾತ್ರಿ (ಜ.1) ಉಳಿದುಕೊಂಡಿದ್ದಾರೆ.
ಕೊಠಡಿಗೆ ಊಟ ತರಿಸಿಕೊಂಡ ಈ ದಂಪತಿ, ಮರುದಿನ ಮಧ್ಯಾಹ್ನ 2 ಗಂಟೆಯಾದರೂ ಹೊರಗೆ ಬಂದಿಲ್ಲ. ಸಿಬ್ಬಂದಿ ಹೋಗಿ ಕೊಠಡಿ ಪರಿಶೀಲಿಸಿದಾಗ ಉಮಾಶಂಕರ್ ಮೃತಪಟ್ಟಿರುವುದು ಗೊತ್ತಾಗಿದೆ. ಬೆಂಗಳೂರಿನಲ್ಲಿ ನರ್ಸ್ ಆಗಿರುವ ಕವಿತಾ, ಲಾಡ್ಜ್‌ನಿಂದ ಶನಿವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಹೊರ ಹೋಗಿರುವುದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಂಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.