ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಕಟ್ಟಡಗಳಿಗೆ ಎನ್‌ಒಸಿ: ನೆಲ ಅಂತಸ್ತಿನ ಶಾಲೆಗಳಿಗೆ ವಿನಾಯಿತಿ

14 ಶಿಫಾರಸುಗಳು
Last Updated 1 ಸೆಪ್ಟೆಂಬರ್ 2021, 19:45 IST
ಅಕ್ಷರ ಗಾತ್ರ

ಬೆಂಗಳೂರು: ನೆಲ ಮಹಡಿ ಮಾತ್ರ ಇರುವ ಶಾಲೆಗಳಿಗೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯುವುದರಿಂದ ವಿನಾಯಿತಿ ನೀಡಿದ್ದು, 15 ಮೀಟರ್‌ಗಿಂತ ಕಡಿಮೆ ಎತ್ತರದ ಶಾಲಾ ಕಟ್ಟಡಗಳಿಗೆ ಅಗ್ನಿ ಸುರಕ್ಷತಾ ಎನ್‌ಒಸಿ ನೀಡುವ ಅಧಿಕಾರ ಆಯಾ ಜಿಲ್ಲೆಗಳ ಅಗ್ನಿ ಸುರಕ್ಷತಾ ಅಧಿಕಾರಿಗಳಿಗೆ ನೀಡಲು ಶಿಫಾರಸು ಮಾಡಲಾಗಿದೆ.

ಖಾಸಗಿ ಅನುದಾನಿತ, ಅನುದಾನರಹಿತ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳ ಕಟ್ಟಡ ಸುರಕ್ಷತಾ ಪ್ರಮಾಣಪತ್ರದ ಅಗತ್ಯತೆ ಕುರಿತು ವಿಧಾನಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಅಧ್ಯಕ್ಷತೆಯಲ್ಲಿ ಪರಿಶೀಲನೆಗಾಗಿ ರಚಿಸಿದ ಪರಿಷತ್ತಿನ ಪರಿಶೀಲನಾ ಸಮಿತಿಯು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರಿಗೆ ಬುಧವಾರ ಸಲ್ಲಿಸಿರುವ ವರದಿಯಲ್ಲಿ 14 ಶಿಫಾರಸುಗಳನ್ನು ನೀಡಲಾಗಿದೆ.

ಪ್ರಮುಖ ಶಿಫಾರಸುಗಳು:

* ನೆಲ ಮಹಡಿ ಹೊಂದಿದ ಶಾಲಾ– ಕಾಲೇಜುಗಳಿಗೆ ನಿಗದಿಪಡಿಸಿರುವ ಓವರ್‌ ಹೆಡ್‌ ಟ್ಯಾಂಕಿನ ಸಾಮರ್ಥ್ಯ ಕಡಿಮೆಗೊಳಿಸಿ, 2,000 ದಿಂದ 5,000 ಲೀಟರ್‌ಗಳ ಸಾಮರ್ಥ್ಯದ ಟ್ಯಾಂಕ್‌ ಅಳವಡಿಸಿಕೊಳ್ಳಬಹುದು.

* ಶಾಲಾ ಕಟ್ಟಡಗಳ ಸ್ಥಿರತೆ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ವಿಕೇಂದ್ರೀಕರಿಸಬೇಕು. ನೆಲಮಹಡಿ ಮತ್ತು ಎಲ್ಲ ಅಂತಸ್ತುಗಳ ಶಾಲಾ ಕಟ್ಟಡಗಳಿಗೆ ಸ್ಥಿರತೆ ಪ್ರಮಾಣ ನೀಡುವ ಅಧಿಕಾರವನ್ನು (15 ಮೀಟರ್‌ಗಳಿಗಿಂತ ಕಡಿಮೆ ಎತ್ತರವಿರುವ ಶಾಲೆಗಳಿಗೆ) ಎಕ್ಸಿಕ್ಯುಟಿವ್‌ ಎಂಜಿನಿಯರ್‌ ಬದಲಿಗೆ ಸಹಾಯಕ ಎಕ್ಸಿಕ್ಯುಟಿವ್ ಎಂಜಿನಿಯರ್‌ ಅವರಿಗೆ ನೀಡುವುದು.

* ಸುವರ್ಣ ಮಹೋತ್ಸವ, ವಜ್ರ ಮಹೋತ್ಸವ ಹಾಗೂ ಶತಮಾನೋತ್ಸವ ಕಂಡ ಶಾಲಾ– ಕಾಲೇಜುಗಳ ಶಿಕ್ಷಣ ಸಂಸ್ಥೆಯವರು ಕಟ್ಟಡದ ನೀಲನಕ್ಷೆ, ಕಟ್ಟಡ ನಿರ್ಮಾಣ ಮತ್ತು ಮೇಲ್ವಿಚಾರಣೆ ಮಾಡಿದವರಿಂದ ಪ್ರಮಾಣ ಪತ್ರ ಒದಗಿಸುವುದು ಕಷ್ಟವಾಗಿರುವುದರಿಂದ ಇವುಗಳಿಗೆ ವಿನಾಯಿತಿ ನೀಡಬೇಕು.

* ನೂತನವಾಗಿ ಕಟ್ಟಿಸಿದ ಮತ್ತು 30 ವರ್ಷದೊಳಗಿನ ಆರ್‌ಸಿಸಿ ಶಾಲಾ– ಕಾಲೇಜು ಕಟ್ಟಡಗಳಿಗೆ ಸುರಕ್ಷತಾ ಪ್ರಮಾಣ ಪತ್ರ ನವೀಕರಿಸುವ ಅವಧಿಯನ್ನು 5 ವರ್ಷಗಳ ಬದಲಿಗೆ 10 ವರ್ಷಕ್ಕೊಮ್ಮೆ ಮಾಡುವುದು. 30 ವರ್ಷ ಮೇಲ್ಪಟ್ಟ ಕಟ್ಟಡಗಳಿಗೆ ಈಗಿರುವ ನಿಯಮದ ಅನ್ವಯ 5 ವರ್ಷಕ್ಕೊಮ್ಮೆ ನವೀಕರಿಸುವ ಪದ್ಧತಿ ಮುಂದುವರಿಸಬೇಕು.

* ಸುಪ್ರೀಂಕೋರ್ಟ್‌ ತೀರ್ಪಿನ ಅನ್ವಯ ಮತ್ತು ನ್ಯಾಷನಲ್‌ ಬಿಲ್ಡಿಂಗ್ ಕೋಡ್‌ ನಿಯಮಗಳ ಅನ್ವಯ ಶಾಲಾ–ಕಾಲೇಜು ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ನಿಯಮಗಳನ್ನು ಅಳವಡಿಸಬೇಕು. ಇದಕ್ಕಾಗಿ ಮುಂದಿನ ಬಜೆಟ್‌ನಲ್ಲಿ ಹಣ ನಿಗದಿ ಮಾಡಬೇಕು.

* ಗ್ರಾಮಾಂತರ, ಹೋಬಳಿ, ಪಟ್ಟಣ ಪಂಚಾಯಿತಿ, ತಾಲ್ಲೂಕು ಮಟ್ಟದಲ್ಲಿರುವ ಶಾಲೆ ಕಾಲೇಜುಗಳು ಆರ್ಥಿಕವಾಗಿ ಸಬಲರಾಗಿರುವುದಿಲ್ಲ. ಆದ್ದರಿಂದ ಈ ಪ್ರದೇಶಗಳಲ್ಲಿ ಇರುವ ಶಾಲೆ ಕಾಲೇಜುಗಳಿಗೆ ಪ್ರಮಾಣ ಪತ್ರ ಪಡೆಯಲು ನಿಗದಿ ಪಡಿಸಿರುವ ಶುಲ್ಕ ₹20 ಸಾವಿರದಿಂದ ₹5 ಸಾವಿರಕ್ಕೆ, ಜಿಲ್ಲಾ ಮಟ್ಟದಲ್ಲಿರುವ ಶಾಲೆಗಳಿಗೆ ₹10 ಸಾವಿರಕ್ಕೆ ಕಡಿಮೆಗೊಳಿಸಲು ಕ್ರಮ ತೆಗೆದುಕೊಳ್ಳಬೇಕು.

ಚರ್ಚಿಸಿ ಕ್ರಮ
‘ಸಮಿತಿ ಸಲ್ಲಿಸಿರುವ ವರದಿಯ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಶಿಫಾರಸ್ಸು ಜಾರಿ ತರಲಾಗುವುದು. ಶಾಲಾ ಕಟ್ಟಡಗಳ ಸುರಕ್ಷತೆಯ ಬಗ್ಗೆ ಗಮನಹರಿಸಲಾಗುವುದು. ಹಿಂದೆ ಅಧಿಕಾರಿಗಳು ಕೊಟ್ಟ ವರದಿಯನ್ನು ಅವಲೋಕಿಸಲಾಗುವುದು. ಸರ್ಕಾರಿ ಶಾಲೆಗಳಿಗೂ ಅನ್ವಯಿಸಲಾಗುವುದು’ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT