ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಸಿಎಂ ಟೀ ಶರ್ಟ್ ಧರಿಸಿದ್ದ ವ್ಯಕ್ತಿ ಮೇಲೆ ಪೊಲೀಸರ ಹಲ್ಲೆ: ಸಿದ್ದರಾಮಯ್ಯ ಆಕ್ರೋಶ

Last Updated 1 ಅಕ್ಟೋಬರ್ 2022, 13:21 IST
ಅಕ್ಷರ ಗಾತ್ರ

ಬೆಂಗಳೂರು: ಪೇಸಿಎಂ ಟೀ ಶರ್ಟ್ ಧರಿಸಿದ್ದ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ವಿಡಿಯೊ ಟ್ವೀಟ್‌ ಮಾಡಿರುವ ಅವರು, ‘ಪೇಸಿಎಂ ಟೀ ಶರ್ಟ್ ಧರಿಸಿದ್ದ ನಮ್ಮ ಪಕ್ಷದ ಕಾರ್ಯಕರ್ತನ ಮೇಲೆ ಬೀದಿ ಗೂಂಡಾ ರೀತಿ ಹಲ್ಲೆಗೈದ ಪೊಲೀಸ್ ಅಧಿಕಾರಿಯ ಕೃತ್ಯ ಖಂಡನೀಯ. ಈ‌ ಪುಂಡ ಪೋಲಿಸನನ್ನು ಈ ಕೂಡಲೇ ಅಮಾನತು ಮಾಡಬೇಕು ಎಂದು ಮುಖ್ಯಮಂತ್ರಿ ಅವರನ್ನು ಆಗ್ರಹಿಸುತ್ತೇನೆ’ ಎಂದು ಒತ್ತಾಯಿಸಿದ್ದಾರೆ.

‘ಯಥಾ ಮುಖ್ಯಮಂತ್ರಿ, ತಥಾ‌ ಪೊಲೀಸ್. ಕರ್ನಾಟಕದಲ್ಲಿ ಯುಪಿ ಮಾದರಿ ಆಡಳಿತ ತರುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಪೊಲೀಸರು ಅದನ್ನು ಅನುಷ್ಠಾನಗೊಳಿಸಲು ಹೊರಟಂತಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘40 ಪರ್ಸೆಂಟ್‌ ಕಮಿಷನ್ ಭ್ರಷ್ಟಾಚಾರದ ವಿರುದ್ಧದ ನಮ್ಮ ಪಕ್ಷದ ಅಭಿಯಾನವನ್ನು ಎದುರಿಸುವ ಧಮ್ಮು-ತಾಕತ್ ಬಿಜೆಪಿ ಪಕ್ಷಕ್ಕೆ ಇಲ್ಲ. ರಾಜಕೀಯವಾಗಿ ನಮ್ಮನ್ನು ಎದುರಿಸಲಾಗದೆ ಬಿಜೆಪಿ ಪೊಲೀಸರ ಮೂಲಕ ದಮನಿಸುವ ಹೇಡಿತನಕ್ಕೆ ಇಳಿದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಭ್ರಷ್ಟಾಚಾರದ ವಿರುದ್ಧದ ಅಭಿಯಾನ ಅಪರಾಧ ಎಂದು ಯಾವ ಕಾನೂನಿನಲ್ಲಿ ಹೇಳಿದೆ? ಮುಖ್ಯಮಂತ್ರಿ ಅವರೇ, ನಮ್ಮ ವಿರುದ್ಧ ಕೊಳಕು ಭಾಷೆಯ ಜಾಹೀರಾತು ನೀಡಿದ್ದೀರಿ, ಅದನ್ನು ನಾವು ಹರಿದುಹಾಕಲು ಹೋಗುವುದಿಲ್ಲ. ರಾಜಕೀಯವಾಗಿಯೇ ಎದುರಿಸುತ್ತೇವೆ’ ಎಂದು ಟ್ವೀಟಿಸಿದ್ದಾರೆ.

‘ಕಳೆದ ಕೆಲವು ದಿನಗಳಿಂದ ರಾಜ್ಯದ ಪೊಲೀಸರು ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ದೌರ್ಜನ್ಯ ಶುರುಮಾಡಿದ್ದಾರೆ. ಇದು ವಿಕೋಪಕ್ಕೆ ಹೋಗಿ ಜನರೇ ಪೊಲೀಸರ ವಿರುದ್ಧ ತಿರುಗಿ ಬೀಳುವಂತಹ ಪರಿಸ್ಥಿತಿಯನ್ನು ದಯವಿಟ್ಟು ಸೃಷ್ಟಿ ಮಾಡಬೇಡಿ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಕರ್ನಾಟಕ ಶಾಂತಿಪ್ರಿಯರ ನಾಡು, ಇದನ್ನು ಪೊಲೀಸ್ ರಾಜ್ಯ ಮಾಡಲು ಹೋಗಬೇಡಿ. ಯಾವ ಸರ್ಕಾರವೂ ಶಾಶ್ವತ ಅಲ್ಲ, ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಪಾಪಕ್ಕೆ ತಕ್ಕ ಶಿಕ್ಷೆ ಅನುಭವಿಸಬೇಕಾದೀತು’ ಎಂದು ತಿಳಿಸಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT