ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್‌ ಜೋಡೊ ಪಾದಯಾತ್ರೆ: ರಾಹುಲ್‌ಗೆ ಉತ್ಸಾಹ ತುಂಬಿದ ಸೋನಿಯಾ ಗಾಂಧಿ

20 ನಿಮಿಷ ನಡೆದ ಕಾಂಗ್ರೆಸ್‌ ನಾಯಕಿ, ಹರಿದು ಬಂದ ಜನಸಾಗರ
Last Updated 6 ಅಕ್ಟೋಬರ್ 2022, 12:42 IST
ಅಕ್ಷರ ಗಾತ್ರ

ಮಂಡ್ಯ: ಆಯುಧ ಪೂಜೆ, ವಿಜಯದಶಮಿಯ ಬಿಡುವಿನ ನಂತರ ಪುನಾರಂಭಗೊಂಡ ಭಾರತ್‌ ಜೋಡೊ ಪಾದಯಾತ್ರೆಗೆ ಗುರುವಾರ ಹೊಸ ಹುರುಪು ಬಂದಿತ್ತು, ರಾಹುಲ್‌ ಗಾಂಧಿ ಮೊದಲಿಗಿಂತ ಉತ್ಸಾಹದಿಂದ ಹೆಜ್ಜೆ ಹಾಕುತ್ತಿದ್ದರು. ಅದಕ್ಕೆ ಕಾರಣ; ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು.

ಭಾರತ್‌ ಜೋಡೊ ಯಾತ್ರೆ ಆರಂಭಗೊಂಡ ನಂತರ ಸೋನಿಯಾ ಗಾಂಧಿ ಇದೇ ಮೊದಲ ಬಾರಿಗೆ ಪಾಲ್ಗೊಂಡರು. ಪಾಂಡವಪುರ ತಾಲ್ಲೂಕು ಬೆಳ್ಳಾಳೆ ಗ್ರಾಮದಿಂದ ಪಾದಯಾತ್ರೆ ಆರಂಭಗೊಂಡಿತು. ಸೋನಿಯಾ ಗಾಂಧಿ ಅವರು ಮಾಣಿಕ್ಯನಹಳ್ಳಿ ಗೇಟ್‌ ಬಳಿ ಬೆಳಿಗ್ಗೆ 8.30ರಲ್ಲಿ ಸೇರಿಕೊಂಡರು. 15 ನಿಮಿಷಗಳ ಕಾಲ ರಾಹುಲ್‌ಗಾಂಧಿ, ಕಾಂಗ್ರೆಸ್ ಮುಖಂಡರು ಹಾಗೂ ಸಾವಿರಾರು ಕಾಂಗ್ರೆಸ್‌ ಕಾರ್ಯಕರ್ತರೊಂದಿಗೆ ನಡೆದರು.

ಜಿಲ್ಲೆ, ಹೊರಜಿಲ್ಲೆ, ಹೊರರಾಜ್ಯಗಳಿಂದ ಬಂದಿದ್ದ 30 ಸಾವಿರಕ್ಕೂ ಹೆಚ್ಚು ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಹಲವು ಹಳ್ಳಿಗಳ ಮಹಿಳೆಯರು ಸೋನಿಯಾ ಗಾಂಧಿ ಅವರಿಗೆ ಆರತಿ ಬೆಳಗಿದರು, ಪೂರ್ಣಕುಂಭ ಸ್ವಾಗತ ಕೋರಿದರು. ಹತ್ತಿರಕ್ಕೆ ತೆರಳಿ ಮಹಿಳೆಯರ ಜೊತೆ ಅವರು ಭಾವಚಿತ್ರ ತೆಗೆಸಿಕೊಂಡರು. ವಿದ್ಯಾರ್ಥಿಗಳು, ಮಕ್ಕಳಿಗೆ ಚಾಕೊಲೇಟ್‌ ಕೊಟ್ಟರು.

ಅಮೃತಿ ಗ್ರಾಮದವರೆಗೆ ನಡೆದ ಸೋನಿಯಾ ಗಾಂಧಿ ಪುತ್ರನ ಸೂಚನೆ ಮೇರೆಗೆ ಕಾರು ಹತ್ತಿದರು. ನಂತರ ಜಕ್ಕನಹಳ್ಳಿ ಗೇಟ್‌ ಬಳಿ ಇಳಿದು ಅಮ್ಮಾಸ್‌ ಕೆಫೆಯಲ್ಲಿ ಪುತ್ರನೊಂದಿಗೆ ಕಾಫಿ ಸೇವಿಸಿದರು. 10 ನಿಮಿಷ ವಿಶ್ರಾಂತಿ ನಂತರ ಸೋನಿಯಾ ಗಾಂಧಿ ಮತ್ತೆ 5 ನಿಮಿಷ ಹೆಜ್ಜೆ ಹಾಕಿದರು.

ಬಿದ್ದ ಬಾಲಕಿಯನ್ನು ಸಂತೈಸಿದರು: ಪಾದಯಾತ್ರೆಗೆ ಸ್ವಾಗತ ಕೋರಲು ರಸ್ತೆ ಬದಿ ನಿಂತಿದ್ದ ಬಾಲಕಿಯೊಬ್ಬರು ಜನಜಂಗುಳಿಯ ತಳ್ಳಾಟದಲ್ಲಿ ಕೆಳಗೆ ಬಿದ್ದರು. ಬಾಲಕಿಯ ಹತ್ತಿರ ತೆರಳಿದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಬಾಲಕಿಯನ್ನು ಮೇಲೆತ್ತಿದರು. ಸೋನಿಯಾ ಗಾಂಧಿ ಬಾಲಕಿಯ ಬೆನ್ನು ಉಜ್ಜಿ ಸೈಂತಿಸಿ, ಚಾಕೊಲೇಟ್‌ ನೀಡಿ ಕಳುಹಿಸಿದರು.

ಶೂ ಲೇಸ್‌ ಕಟ್ಟಿದ ರಾಹುಲ್‌: ಜಕ್ಕನಹಳ್ಳಿ ಬಳಿ ಹೆಜ್ಜೆ ಹಾಕುತ್ತಿದ್ದ ವೇಳೆ ಸೋನಿಯಾ ಗಾಂಧಿ ಅವರ ಎಡಗಾಲಿನ ಶೂ ಲೇಸ್‌ ಕಳಚಿತು. ಕಾರ್ಯಕರ್ತರೊಬ್ಬರು ಅವರ ಲೇಸ್‌ ಕಟ್ಟಲು ಮುಂದಾದರು. ಆದರೆ ರಾಹುಲ್‌ ಗಾಂಧಿ ಅವರನ್ನು ತಡೆದು ತಾವೇ ಶೂ ಲೇಸ್‌ ಕಟ್ಟಿದರು. ಪಾದಯಾತ್ರೆ ನಾಗಮಂಗಲ ತಾಲ್ಲೂಕು ಖರಡ್ಯ ತಲುಪಿದ ನಂತರ ಸೋನಿಯಾ ಗಾಂಧಿ ತೆರಳಿದರು.

ಪಾದಯಾತ್ರೆಗೆ ಅಂಗವಿಕಲರು ಕೂಡ ಬೆಂಬಲ ನೀಡಿದರು, ವ್ಹೀಲ್‌ಚೇರ್‌ ಮೂಲಕವೇ ರಾಹುಲ್‌ ಗಾಂಧಿ ಅವರಿಗೆ ಪಾದಯಾತ್ರೆಗೆ ಜೊತೆಯಾದರು. ಎಐಸಿಸಿ ಕರ್ನಾಟಕ ಉಸ್ತುವಾರ ರಣದೀಪ್‌ ಸಿಂಗ್‌ ಸುರ್ಜೇವಾಲ, ಮುಖಂಡರಾದ ಕೆ.ಸಿ.ವೇಣುಗೋಪಾಲ್‌, ಜೈರಾಮ್‌ ರಮೇಶ್‌, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ,ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ ಯೋಗೇಂದ್ರ ಇದ್ದರು.

ರಾಹುಲ್‌ ಗಾಂಧಿ ನಾಗಮಂಗಲ ತಾಲ್ಲೂಕು ಮಡಿಕೆಹೊಸೂರು ಬಳಿಯ ವಿಸ್ಡಂ ಶಾಲೆಯಲ್ಲಿ ವಾಸ್ತವ್ಯ ಹೂಡಿದರು. ಶುಕ್ರವಾರ ನಾಗಮಂಗಲ, ಬೆಳ್ಳೂರು ಕ್ರಾಸ್‌ ಮೂಲಕ ಪಾದಯಾತ್ರೆ ಆದಿಚುಂಚನಗಿರಿ ತಲುಪಲಿದ್ದು ರಾಹುಲ್‌ ಗಾಂಧಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT