ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ್ನಣೆ ಪಡೆದ ‘ಭೀಮ ಸಲಗ’ ಯಂತ್ರದ ಮಾದರಿ

ಬೆಳಗಾವಿ ವಿಭಾಗಕ್ಕೆ ರಾಷ್ಟ್ರಮಟ್ಟದ ಇಸ್ಪೈರ್ ಪ್ರಶಸ್ತಿ
Last Updated 20 ಸೆಪ್ಟೆಂಬರ್ 2021, 16:20 IST
ಅಕ್ಷರ ಗಾತ್ರ

ಧಾರವಾಡ: ‘ಪ್ರೌಢಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಅನ್ವೇಷಣೆಗೆ ಪೂರಕವಾಗಿ ನಡೆಸಲಾಗುವ ರಾಷ್ಟ್ರಮಟ್ಟದ ಇನ್‌ಸ್ಪೈರ್ ಸ್ಪರ್ಧೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ವಿಭಾಗದ ವಿಜಯಪುರ ಜಿಲ್ಲೆಯ ಕೆ.ಡಿ. ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಲಭಿಸಿದೆ.

ಇಂಡಿ ತಾಲ್ಲೂಕಿನ ಕೆ.ಡಿ. ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಾದ ದೇವೇಂದ್ರ ಬಿರಾದಾರ ಹಾಗೂ ಕಾರ್ತಿಕ್ ನೇರಳೆ ಸಿದ್ಧಪಡಿಸಿದ ಕೃಷಿ ಯಂತ್ರಕ್ಕೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ದೊರೆತಿದೆ.

ಶಾಲೆಯ ವಿಜ್ಞಾನ ಶಿಕ್ಷಕಿ ಶಶಿಕಲಾ ಬಡಿಗೇರ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಿದ ಬೆಳೆ ಕಟಾವು ಯಂತ್ರ ‘ಭೀಮ ಸಲಗ’ ರೈತರಿಗೆ ಬಹೂಪಯೋಗಿ ಉಪಕರಣವಾಗಿ ಸಿದ್ಧಪಡಿಸಲು ಪ್ರೇರಣೆಯಾಗಿದೆ. ಈ ಯಂತ್ರವನ್ನು ಗಳೆ ಹೊಡೆಯಲು, ಕಳೆ ತೆಗೆಯಲು, ಬೀಜ ಬಿತ್ತನೆ, ನೀರು ಮತ್ತು ಕೀಟನಾಶಕ ಸಿಂಪರಣೆ, ಬೆಳೆ ಕಟಾವು, ಹುಲ್ಲು ಕತ್ತರಿಸುವುದು, ಹೂದೋಟದ ಅಂಚಿನಲ್ಲಿರುವ ಸಸಿಗಳನ್ನು ಚೌಕಾಕಾರದಲ್ಲಿ ಕತ್ತರಿಸಲು, ಮರದ ರೆಂಬೆ, ಕೊಂಬೆಗಳನ್ನು ಕತ್ತರಿಸಲು, ಲಿಂಬೆ ಸಸಿಯಂತ ಸಣ್ಣ ಸಸಿಗಳನ್ನು ನೆಡಲು, ನೆಲ ಅಗೆಯಲು ಸೇರಿದಂತೆ ಹಲವು ರೀತಿಯಲ್ಲಿ ಉಪಯೋಗಿಸುವಂತೆ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ್ದರು.

ಇನ್‌ಸ್ಪೈರ್ ಪ್ರಶಸ್ತಿಗೆ ದೇಶದ ಒಟ್ಟು 60 ವಿಜ್ಞಾನ ಮಾದರಿಗಳು ಆಯ್ಕೆಯಾಗಿದ್ದವು. ಇದರಲ್ಲಿ ಕರ್ನಾಟಕದ ವಿಜಯಪುರ, ಬೀದರ್, ದಾವಣಗೆರೆ, ರಾಮನಗರ ಹಾಗೂ ಬೆಂಗಳೂರು ಜಿಲ್ಎಲಯ 5 ಶಾಲೆಗಳ ಮಾದರಿಗಳು ಸ್ಥಾನ ಪಡೆದಿದ್ದವು.

ಈ ಕುರಿತು ಪ್ರತಿಕ್ರಿಯಿಸಿರುವ ಇಲಾಖೆಯ ಹೆಚ್ಚುವರಿ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ, ‘ನಮ್ಮ ವಿಭಾಗದ ಪ್ರೌಢ ಶಾಲಾ ವಿದ್ಯಾರ್ಥಿಗಳ ಈ ಸಾಧನೆಯು ಭವಿಷ್ಯದಲ್ಲಿ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಹಾಗೂ ಕೃಷಿಯ ಹಲವಾರು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲದು. ಜೊತೆಗೆ ಅವರ ಈ ಸಾಧನೆ ಇತರೇ ಜಿಲ್ಲೆಗಳ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಫೂರ್ತಿದಾಯಕವಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT