ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ದೇಶದ್ರೋಹಿಗಳ ಪರವೇ?: ನಿಲುವು ಸ್ಪಷ್ಟಪಡಿಸಿ ಎಂದ ಬಿಜೆಪಿ

ಅಕ್ಷರ ಗಾತ್ರ

ಬೆಂಗಳೂರು: ಕಾರ್ಕಳದ ಕಾಂಗ್ರೆಸ್‌ ಕಾರ್ಯಕರ್ತ ರಾಧಾಕೃಷ್ಣ ನಾಯಕ್‌ ಮೇಲೆ ನಡೆದ ಪೊಲೀಸ್‌ ದೌರ್ಜನ್ಯವನ್ನು ಖಂಡಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ದೇಶದ್ರೋಹಿಗಳ ಪರ ಇದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಬಿಜೆಪಿ ಆಗ್ರಹಿಸಿದೆ.

ರಾಧಾಕೃಷ್ಣ ನಾಯಕ್‌ ಅವರ ಅನಾರೋಗ್ಯವನ್ನೂ ಲೆಕ್ಕಿಸದೆ, ಹಳೆ ಸುಳ್ಳು ಕೇಸ್‌ ಆಧರಿಸಿ, ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಈ ಬಗ್ಗೆ ಉಡುಪಿ ಪೊಲೀಸ್‌ ವರಿಷ್ಠಾಧಿಕಾರಿಗಳು ತನಿಖೆ ನಡೆಸಿ ನೊಂದ ಯುವಕನಿಗೆ ನ್ಯಾಯ ಒದಗಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದರು.

ರಾಧಾಕೃಷ್ಣ ನಾಯಕ್‌ ಹಿರ್ಗಾನ ಎಂಬ ವ್ಯಕ್ತಿಯು ಮಾಡಿದ್ದಾರೆ ಎನ್ನಲಾದ ಪೋಸ್ಟ್‌ ಒಂದನ್ನು ರಾಜ್ಯ ಬಿಜೆಪಿ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಸಿದ್ದರಾಮಯ್ಯ ಅವರೇ ನಿಮ್ಮ ನಿಲುವು ಸ್ಪಷ್ಟಪಡಿಸಿ. ನೀವು ದೇಶದ್ರೋಹಿಗಳ ಪರವೇ? ಎಂದು ಕೇಳಿದೆ.

ಪಾಕಿಸ್ತಾನ ಸೈನಿಕರಿಂದ ಭಾರತೀಯ ಸೈನಿಕರ ಸಾವು ಬಯಸುವ ವ್ಯಕ್ತಿಗಳನ್ನು ಬೆಂಬಲಿಸುತ್ತಿರುವುದು ಎಷ್ಟು ಸರಿ? ಕಾಂಗ್ರೆಸ್‌ ಕಾರ್ಯಕರ್ತರಾಗಲು ದೇಶ, ಸೈನಿಕರ ವಿರುದ್ಧದ ನಿಲುವು ಹೊಂದಿರುವುದು ಕಡ್ಡಾಯವೇ? ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.

ಪಾಕಿಸ್ತಾನ ಸೈನಿಕರು ನಮ್ಮ ಸೈನಿಕರನ್ನು ಕೊಲ್ಲಲಿ ಎಂದ ಕಾಂಗ್ರೆಸ್‌ ಕಾರ್ಯಕರ್ತನ ಮೇಲಿನ ಕಾನೂನು ಕ್ರಮವನ್ನು ಕಾಂಗ್ರೆಸ್‌ ಖಂಡಿಸುತ್ತಿದೆ. ಈ ಮೂಲಕ ಪಾಕ್‌ ಮೇಲಿನ ತಮ್ಮ ನಿಷ್ಠೆಯನ್ನು ಕಾಂಗ್ರೆಸ್‌ ನಾಯಕರು ಸಾಬೀತುಪಡಿಸಿದ್ದಾರೆ. ಪಾಕಿಸ್ಥಾನ ಬೆಂಬಲಿಸಿದ ವ್ಯಕ್ತಿಯ ಮೇಲಿನ ಕಾನೂನು ಕ್ರಮ ಸಿದ್ದರಾಮಯ್ಯ ಅವರಿಗೇಕೆ ನೋವು ತರುತ್ತಿದೆ? ಎಂದು ಬಿಜೆಪಿ ಪ್ರಶ್ನಿಸಿದೆ.

ಸರಣಿ ಟ್ವೀಟ್‌ ಮುಂದುವರಿಸಿದ ಬಿಜೆಪಿ,ಸಿದ್ದರಾಮಯ್ಯ ಅವರ ಪಾಕಿಸ್ತಾನ ಪ್ರೇಮ ಈ ಹಿಂದೆಯೇ ಪ್ರಕಟವಾಗಿತ್ತು. ಪಾಕಿಸ್ತಾನವನ್ನು ಪ್ರೇಮಿಸುವುವ ಸಮಾಜಘಾತುಕ ಸಂಘಟನೆಗಳ ಕೇಸ್‌ ಹಿಂಪಡೆದಿದ್ದರು. ಈಗ ಶತ್ರುರಾಷ್ಟ್ರ ಪಾಕಿಸ್ತಾನದ ಪರವಾಗಿ ಬರೆದ ವ್ಯಕ್ತಿಯ ವಿರುದ್ಧ ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್‌ ಪಕ್ಷದ ನಾಯಕರು ತೋರ್ಪಡಿಸುತ್ತಿರುವ ಕಾಳಜಿ ದೇಶದ ಹಿತಾಸಕ್ತಿಗೆ ಮಾರಕವಾದದ್ದು ಎಂದಿದೆ.

ಈ ಹಿಂದೆ ಗೋ ಕಳ್ಳರ ಬಗ್ಗೆ ಸಹಾನುಭೂತಿ ವ್ಯಕ್ತ ಪಡಿಸಿದ್ದ ಸಿದ್ದರಾಮಯ್ಯ ಅವರು ಈಗ ಪಾಕಿಸ್ತಾನದ ಪ್ರೇಮಿಯ ಪರ ನಿಂತಿದ್ದಾರೆ. ಕಾಂಗ್ರೆಸ್‌ ನಾಯಕರ ನಿಲುವುಗಳೆಲ್ಲ ದೇಶದ ವಿರುದ್ಧವಾಗಿರುವವರ ಪರವಾಗಿರುತ್ತದೆ. ಸೈನಿಕರ ಸಾವು ಬಯಸುವ ವ್ಯಕ್ತಿಯನ್ನು ಅಮಾಯಕ ಎಂದು ಬಿಂಬಿಸುವ ಏಕೈಕ ಪಕ್ಷವೊಂದಿದ್ದರೆ ಅದು ಕಾಂಗ್ರೆಸ್‌ ಮಾತ್ರ ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT