ಬೆಂಗಳೂರು: ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಪ್ರಾಥಮಿಕ ಹಂತದ ಕಸರತ್ತು ಆರಂಭಿಸಿದೆ. ಕ್ಷೇತ್ರವಾರು ಜಿಲ್ಲಾ ಮಟ್ಟದಲ್ಲಿ ಹೆಸರುಗಳನ್ನು ಸೂಚಿಸಲು ಸೋಮವಾರ ರಾತ್ರಿ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಅಭ್ಯರ್ಥಿಗಳ ಆಯ್ಕೆಗೆ ಅನುಸರಿಸಬೇಕಾದ ಮಾನದಂಡ ಏನಿರಬೇಕು ಎಂದು ಸೂಚಿಸಲಾಗಿದೆ. ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮತ್ತು ಪದಾಧಿಕಾರಿ ಹಾಗೂ ಕೇಂದ್ರ ನಾಯಕರು ಈ ಸಂಬಂಧ ಸುದೀರ್ಘ ಸಮಾಲೋಚನೆ ನಡೆಸಿದರು.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪ್ರಮುಖರ ಸಮಿತಿ ಸಭೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚಿಸಿ 2–3 ಹೆಸರು ಕಳಿಸಬೇಕು. ರಾಜ್ಯ ಪ್ರಮುಖ ನಾಯಕರ ಸಭೆ ಪಟ್ಟಿಯನ್ನು ಅಂತಿಮಗೊಳಿಸಿ ಪಕ್ಷದ ರಾಷ್ಟ್ರೀಯ ಸಮಿತಿಗೆ ಕಳುಹಿಸಲಿದೆ.
ಅಲ್ಲದೇ, ಚುನಾವಣೆಯಲ್ಲಿ ಗೆಲ್ಲಬಲ್ಲ ಹಾಲಿ ಶಾಸಕರು ಮತ್ತು ಟಿಕೆಟ್‌ಗಾಗಿ ಹೆಚ್ಚಿನ ಸ್ಪರ್ಧೆ ಇಲ್ಲದ ಕ್ಷೇತ್ರಗಳ ಸುಮಾರು 130 ಕ್ಕೂ ಹೆಚ್ಚು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯೊಂದನ್ನು ಈಗಾಗಲೇ ಸಿದ್ಧಪಡಿಸಿದ್ದು, ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ ಆದ ಬಳಿಕ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
‘ಭಾನುವಾರ ಅಮಿತ್ ಶಾ ಅವರು ಭಾಗವಹಿಸಿದ್ದ ಸಭೆಯಲ್ಲಿ ಟಿಕೆಟ್ ಹಂಚಿಕೆ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿಲ್ಲ. ‘ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಕಳಿಸಿಕೊಡಿ. ನಾವೇ ಅಂತಿಮಗೊಳಿಸುತ್ತೇವೆ. ಪ್ರತಿಕೂಲ ಸನ್ನಿವೇಶ ಇದ್ದ ರಾಜ್ಯಗಳಲ್ಲೂ ಮತದಾರರ ಮನಗೆದ್ದು ಮತ್ತೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ. ಕರ್ನಾಟಕದಲ್ಲೂ ಮತ್ತೆ ಅಧಿಕಾರ ಹಿಡಿಯುವುದು ನಿಶ್ಚಿತ. ಈ ಬಗ್ಗೆ ಯಾವುದೇ ಸಂಶಯ ಬೇಡ. ಹೀಗಾಗಿ ಧೈರ್ಯದಿಂದ ಚುನಾವಣೆ ಎದುರಿಸಿ’ ಎಂದು ರಾಜ್ಯ ನಾಯಕರಿಗೆ ಸಲಹೆ ನೀಡಿದ್ದಾಗಿ ಮೂಲಗಳು ತಿಳಿಸಿವೆ.
ಈ ಬಾರಿ ಒಟ್ಟು ಸೀಟುಗಳಲ್ಲಿ ಶೇ 20 ರಷ್ಟು ಹೊಸಬರಿಗೆ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ. ಬೆಂಗಳೂರು ನಗರದಲ್ಲಿ ಪಕ್ಷ ಗೆಲ್ಲಬಹುದಾದ ಕಡೆಗಳಲ್ಲಿ ಪ್ರಭಾವಿ ಅಭ್ಯರ್ಥಿಗಳಿಲ್ಲದೇ ನಿರಂತರವಾಗಿ ಸೋಲುತ್ತಾ ಬಂದಿರುವ ಆಯ್ದ ಕ್ಷೇತ್ರಗಳಲ್ಲಿ ಈ ಬಾರಿ ಹೊಸಬರು ಮತ್ತು ಯುವಕರಿಗೆ ನೀಡುವ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.