ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸರ್ಕಾರ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ವಿರೋಧಿ: ಡಿ.ಕೆ. ಶಿವಕುಮಾರ್

Last Updated 9 ಡಿಸೆಂಬರ್ 2020, 11:58 IST
ಅಕ್ಷರ ಗಾತ್ರ

ಬೆಂಗಳೂರು: ‘ಪರಿಶಿಷ್ಟ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ರಾಜ್ಯ ಸರ್ಕಾರ ಫ್ಲೈಓವರ್ ಕಾಮಗಾರಿಗೆ ಬಳಸಿರುವುದು ಈ ಸಮುದಾಯದ ಬಗ್ಗೆ ಬಿಜೆಪಿ ಸರ್ಕಾರಕ್ಕಿರುವ ಬದ್ಧತೆಯನ್ನು ತೋರಿಸುತ್ತದೆ. ಇದು ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿರೋಧಿ ಸರ್ಕಾರವಾಗಿದ್ದು, ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮತ್ತು ಸಚಿವ ಶ್ರೀರಾಮುಲು ತಕ್ಷಣ ರಾಜೀನಾಮೆ ನೀಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ದೇಶದ ಇತಿಹಾಸದಲ್ಲಿ ಬೆಳಗಾವಿ ಅಧಿವೇಶನದಲ್ಲಿ ನಮ್ಮ ಸರ್ಕಾರ ಸಂವಿಧಾನಾತ್ಮಕವಾಗಿ ಕಾನೂನು ಜಾರಿಗೆ ತಂದಿದ್ದೆವು. ₹ 30 ಸಾವಿರ ಕೋಟಿಯನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಅಭಿವೃದ್ಧಿಗೆ ಮೀಸಲಿಟ್ಟು ಆ ಹಣವನ್ನು ಆ ವರ್ಗಕ್ಕೆ ಖರ್ಚು ಮಾಡಲು ಕಾನೂನು ರೂಪಿಸಿದ್ದೆವು’ ಎಂದರು.

‘ಕಳೆದ ಬಜೆಟ್ ನಲ್ಲಿ ಇದು ₹ 17 ಸಾವಿರ ಕೋಟಿಗೆ ಇಳಿದಿತ್ತು. ಆರ್ಥಿಕ ಸಂಪನ್ಮೂಲ ಕೊರತೆ ಪರಿಸ್ಥಿತಿ ಅರಿತು ನಾವು ಈ ಬಗ್ಗೆ ಮಾತನಾಡಿರಲಿಲ್ಲ. ಈಗ ₹ 10 ಸಾವಿರ ಕೋಟಿಗೆ ಬಂದಿದ್ದು, ಜತೆಗೆ ಆ ಹಣವನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಿದೆ. ಬಿಜೆಪಿಯು ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರ ವಿಚಾರವಾಗಿ ಬದ್ಧತೆ ಹೊಂದಿಲ್ಲ ಎಂಬುದಕ್ಕೆ ಇದು ಸಾಕ್ಷಿ’ ಎಂದು ಟೀಕಿಸಿದರು.

‘ಕಾರಜೋಳ ಮತ್ತು ಶ್ರೀರಾಮುಲು ಅವರಿಗೆ ಸ್ವಾಭಿಮಾನ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು. ಕಾರಜೋಳ ಅವರು ಉಪಮುಖ್ಯಮಂತ್ರಿಯಾಗಿ ಧ್ವನಿ ಕಳೆದುಕೊಂಡಿದ್ದಾರೆ. ಬಿಜೆಪಿಯ ದಲಿತ ವಿರೋಧಿ ನೀತಿಯನ್ನು ಅವರಿಂದ ತಡೆಯಲು ಸಾಧ್ಯವಾಗಿಲ್ಲ. ಈ ಇಬ್ಬರ ಸಮ್ಮತಿ ಇಲ್ಲದೆ ಈ ಇಲಾಖೆ ಹಣವನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಇದು ದಲಿತ ವಿರೋಧಿ ಸರ್ಕಾರವಾಗಿದ್ದು, ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ’ ಎಂದರು.

ಕಲ್ಯಾಣ ಕರ್ನಾಟಕದ ನಿರ್ಲಕ್ಷ್ಯ: ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಶಾಸಕರು ಹೆಚ್ಚಿದ್ದಾರೆ. ಹೀಗಾಗಿ, ಕಲ್ಯಾಣ ಕರ್ನಾಟಕಕ್ಕೆ ನಿಗದಿ ಮಾಡಿರುವ ₹ 1,500 ಕೋಟಿ ಬಿಡುಗಡೆ ಮಾಡಿದರೆ ನಮ್ಮ ಶಾಸಕರಿಗೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಬಿಜೆಪಿ ಸರ್ಕಾರ ಈ ಭಾಗವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ’ ಎಂದೂ ಆರೋಪಿಸಿದರು.

ಜೆಡಿಎಸ್ ನಾಯಕರನ್ನು ಪ್ರಧಾನಿ, ಮುಖ್ಯಮಂತ್ರಿ ಮಾಡಿದ್ದೇ ನಮ್ಮ ಶಾಲು: ಕಾಂಗ್ರೆಸ್ ಪಕ್ಷದ ಶಾಲಿನ ಬಗ್ಗೆ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಉತ್ತರಿಸಿ, ‘ಪಾಪ ಏನು ಮಾಡ್ತೀರಿ. ಜೆಡಿಎಸ್ ನಾಯಕರನ್ನು ದೇಶದ ಪ್ರಧಾನಿಯನ್ನಾಗಿ ಮಾಡಿದ್ದು, ಇದೇ ಶಾಲು. ಕುಮಾರಸ್ವಾಮಿ ಅವರನ್ನು ಈ ರಾಜ್ಯದ ಮುಖ್ಯಮಂತ್ರಿಯಾಗಿ ಮಾಡಿದ್ದು ಕೂಡ ಇದೇ ಶಾಲು. ಈಗ ಅವರು ಅದೇ ಶಾಲಿನ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ ಎಂದರೆ, ಇದರ ಬಗ್ಗೆ ರಾಜ್ಯದ ಜನತೆ ತೀರ್ಮಾನ ಮಾಡಲಿ' ಎಂದರು.

‘ಸಿದ್ದರಾಮಯ್ಯನವರು ಯಡಿಯೂರಪ್ಪನವರನ್ನು ಭೇಟಿ ಮಾಡಿರುವ ಬಗ್ಗೆ ಅವರನ್ನೇ ಕೇಳಬೇಕು. ನನಗೆ ಗೊತ್ತಿಲ್ಲದ ವಿಚಾರದ ಬಗ್ಗೆ ನಾನೇನು ಹೇಳಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT