ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯ ಕೀಳು ರಾಜಕೀಯದ ಆಯಸ್ಸು ಶೀಘ್ರವೇ ಮುಗಿಯಲಿದೆ: ಕಾಂಗ್ರೆಸ್‌ ವಾಗ್ದಾಳಿ

Last Updated 13 ಜೂನ್ 2022, 13:02 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ವಿಚಾರಣೆಗೆ ಒಳಪಡಿಸಿದ್ದಕ್ಕೆ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ನ್ಯಾಷನಲ್ ಹೆರಾಲ್ಡ್’ ಭಾರತದ ಸ್ವಾತಂತ್ರ್ಯ ಚಳವಳಿಯ ಭಾಗವಾಗಿ ಹುಟ್ಟಿಕೊಂಡ ಪತ್ರಿಕೆ, ಭಾರತದ ಪರಂಪರೆಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಹೊಂದಿರುವ ಪತ್ರಿಕೆ’ ಎಂದು ತಿಳಿಸಿದೆ.

‘ಸ್ವಾತಂತ್ರ್ಯ ಬೆಲೆ ಅರಿಯದ ಬಿಜೆಪಿ ತನ್ನ ದ್ವೇಷಕ್ಕೆ ನ್ಯಾಷನಲ್ ಹೆರಾಲ್ಡ್‌ನ್ನು ಬಳಸುತ್ತಿದೆ. ಬಿಜೆಪಿಯ ಕೀಳು ರಾಜಕೀಯದ ಆಯಸ್ಸು ಶೀಘ್ರವೇ ಮುಗಿಯಲಿದೆ’ ಎಂದು ಕಾಂಗ್ರೆಸ್‌ ತಿಳಿಸಿದೆ.

‘ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ 2015ರಲ್ಲೇ ಕ್ಲೀನ್ ಚಿಟ್ ನೀಡಿದ್ದರೂ ಬಿಜೆಪಿಯು ತನ್ನ ವೈಫಲ್ಯಗಳನ್ನು ಮರೆಮಾಚಲು, ಕಾಂಗ್ರೆಸ್‍ನ ಜನಪರ ಧ್ವನಿಯನ್ನು ಹತ್ತಿಕ್ಕಲು ಈ ಕೇಸನ್ನು ಮುನ್ನೆಲೆಗೆ ತಂದಿದೆ. ಈ ಮೂಲಕ ಸೇಡಿನ ರಾಜಕೀಯಕ್ಕೆ ಇಳಿದಿದೆ. ಆದರೆ, ಕಾಂಗ್ರೆಸ್ ಪಕ್ಷ ಇದಕ್ಕೆಲ್ಲ ಕುಗ್ಗುವುದೂ ಇಲ್ಲ ಬಗ್ಗುವುದೂ ಇಲ್ಲ’ ಎಂದು ಟ್ವೀಟಿಸಿದೆ.

‘ದೇಶದ ಆರ್ಥಿಕ ದುಸ್ಥಿತಿ, ಬೆಲೆ ಏರಿಕೆ, ಚೀನಾ ಅತಿಕ್ರಮಣ, ಕಾಶ್ಮೀರಿ ಪಂಡಿತರ ಹತ್ಯೆ ಮುಂತಾದ ವೈಫಲ್ಯಗಳಿಂದ ಗಮನ ಬೇರೆಡೆ ಸೆಳೆಯುವುದು ಕೇಂದ್ರ ಸರ್ಕಾರಕ್ಕೆ ಅನಿವಾರ್ಯವಾಗಿದೆ. ಹಾಗಾಗಿ, ಪತ್ರಿಕೆಗಳ ಹೆಡ್‌ಲೈನ್ ಬದಲಿಸಲು ರಾಹುಲ್‌ ಗಾಂಧಿ ವಿರುದ್ಧ 'ಇ.ಡಿ ಮೋರ್ಚಾ'ವನ್ನ ಮುಂದೆ ಬಿಟ್ಟಿದೆ’ ಎಂದು ಕಾಂಗ್ರೆಸ್‌ ಟೀಕಿಸಿದೆ.

‘ಐಟಿ, ಇಡಿ, ಸಿಬಿಐ ನಂತಹ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ತನ್ನ ರಾಜಕೀಯ ವಿರೋಧಿಗಳನ್ನು ಹಣಿಯಲು ಹೊರಟಿರುವುದು ಬಿಜೆಪಿಯ ನೀಚತನದ ರಾಜಕಾರಣಕ್ಕೆ ಸಾಕ್ಷಿ. ಈ ಸಂಸ್ಥೆಗಳನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷದ ಧ್ವನಿಯನ್ನು ಹತ್ತಿಕುತ್ತೇವೆ ಎಂದುಕೊಂಡಿದ್ದರೆ ಅದು ಬಿಜೆಪಿಯ ಮೂರ್ಖತನವಷ್ಟೇ’ ಎಂದು ಕಾಂಗ್ರೆಸ್‌ ಹೇಳಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ಸುಮಾರು 3 ತಾಸು ವಿಚಾರಣೆಗೆ ಒಳಪಡಿಸಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಕಾರ್ಯಕರ್ತರು ಕರ್ನಾಟಕ ಸೇರಿದಂತೆ ಹಲವೆಡೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT