ಬುಧವಾರ, ಮೇ 18, 2022
28 °C
ಬಿಜೆಪಿ ವಿಭಾಗೀಯ ಕಾರ್ಯಕಾರಿಣಿಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌

ಜಿ.ಪಂ. ಚುನಾವಣೆಗೆ ಸಜ್ಜಾಗಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಕಾರ್ಯತಂತ್ರಗಳನ್ನು ರೂಪಿಸಲಾಗುತ್ತಿದ್ದು, ‘ಗ್ರಾಮ ಸ್ವರಾಜ್‌’ ಮಾದರಿಯ ಸಮಾವೇಶ ಸಂಘಟಿಸಲಾಗುವುದು. ಚುನಾವಣೆ ಎದುರಿಸಲು ಪಕ್ಷದ ಕಾರ್ಯಕರ್ತರು ಸಜ್ಜಾಗಿ ಎಂದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೂಚನೆ ನೀಡಿದರು.

ಇಲ್ಲಿನ ತಿರುಮಲ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಭಾಗೀಯ ಮಟ್ಟದ ಕಾರ್ಯಕಾರಿಣಿಯಲ್ಲಿ ಅವರು ಮಾತನಾಡಿದರು. ‘ಸಹಕಾರ ವಲಯದಲ್ಲಿಯೂ ಪಕ್ಷದ ಪ್ರಭಾವ ಹೆಚ್ಚಿಸಬೇಕು’ ಎಂದರು.

‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಚುನಾವಣೆಗೆ ರೂಪಿಸಿದ ಕಾರ್ಯತಂತ್ರ ಯಶಸ್ವಿಯಾಗಿದೆ. ಗ್ರಾಮ ಸ್ವರಾಜ್‌ ಸಮಾವೇಶ ಪಕ್ಷಕ್ಕೆ ಪೂರಕ ವಾತಾವರಣ ನಿರ್ಮಿಸಿದೆ. ಹಿಂದಿನ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ಪಕ್ಷಕ್ಕೆ ಬಲ ಬಂದಿದೆ’ ಎಂದು ಅಭಿಪ್ರಾಯಪಟ್ಟರು.

‘ರಾಷ್ಟ್ರ ಹಾಗೂ ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿದೆ. ಪಕ್ಷಕ್ಕೆ ಪೂರಕವಾದ ವಾತಾವರಣವೂ ಸೃಷ್ಟಿಯಾಗಿದೆ. ಭೂತ್‌ ಮಟ್ಟದಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ. ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮಾವೇಶವನ್ನು ಆಯೋಜಿಸಿ ಪಕ್ಷದ ಪ್ರಭಾವವನ್ನು ಹೆಚ್ಚಿಸಬೇಕು. ಮುಖಂಡರು ಚಟುವಟಿಕೆಯಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು’ ಎಂದು ತಾಕೀತು ಮಾಡಿದರು.

ಪಕ್ಷದ ವರ್ಚಸ್ಸು ವೃದ್ಧಿಸಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ವಿರೋಧ ಪಕ್ಷಗಳು ಒಗ್ಗೂಡಿವೆ. ಕೃಷಿ ಕಾಯ್ದೆ, ಪೌರತ್ವ ತಿದ್ದುಪಡಿ ಕಾಯ್ದೆ ಸೇರಿ ಹಲವು ವಿಚಾರದಲ್ಲಿ ವಿರೋಧ ವ್ಯಕ್ತಪಡಿಸುತ್ತಿವೆ. ಪಕ್ಷದ ವರ್ಚಸ್ಸು ಕುಂದಿಸಲು ವಿರೋಧ ಪಕ್ಷಗಳು ನಡೆಸುತ್ತಿರುವ ಹುನ್ನಾರವನ್ನು ಬಯಲಿಗೆ ಎಳೆಯಬೇಕಿದೆ’ ಎಂದರು.

‘ಕಾಶ್ಮೀರದ ವಿಶೇಷ ಸ್ಥಾನ ರದ್ದು, ರಾಮ ಮಂದಿರ ನಿರ್ಮಾಣದಂತಹ ವಿಚಾರದಲ್ಲಿ ಮೋದಿ ಸರ್ಕಾರದ ಮೇಲೆ ಜನರಿಗೆ ಭರವಸೆ ಮೂಡಿದೆ. ಕೇಂದ್ರ ಬಜೆಟ್‌ನಲ್ಲಿ ಪ್ರಕಟಿಸಿದ ಆಕರ್ಷಕ ಹಾಗೂ ಜನಪರ ಯೋಜನೆಗಳನ್ನು ಜನರ ಮುಂದೆ ಇಡಬೇಕಿದೆ. ಚುನಾವಣೆ ಹಾಗೂ ಪಕ್ಷದ ಸಂಘಟನೆಗೆ ಈ ಅಂಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ’ ಎಂದು ಸಲಹೆ ನೀಡಿದರು.

ತಿಂಗಳಲ್ಲಿ ಬೆಲೆ ಏರಿಕೆ ನಿಯಂತ್ರಣ

ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಚುನಾವಣೆಗೆ ಹೋಗುವುದು ಹೇಗೆ ಎಂಬ ಪ್ರಶ್ನೆ ಅನೇಕರಲ್ಲಿದೆ. ಈ ಬಗ್ಗೆ ಯಾರೂ ಅಂಜುವ ಅಗತ್ಯವಿಲ್ಲ. ಕೆಲವೇ ತಿಂಗಳಲ್ಲಿ ಬೆಲೆ ಏರಿಕೆ ನಿಯಂತ್ರಣಕ್ಕೆ ಬರಲಿದೆ’ ಎಂದು ನಳಿನ್‌ ಕುಮಾರ್‌ ಕಟೀಲ್‌ ವಿಶ್ವಾಸ ವ್ಯಕ್ತಪಡಿಸಿದರು.

‘ಕೊರೊನಾ ಸೋಂಕಿನ ಕಾರಣಕ್ಕೆ ಸೃಷ್ಟಿಯಾದ ಆರ್ಥಿಕ ಸಂಕಷ್ಟವನ್ನು ಸರಿದೂಗಿಸಲು ದರ ಏರಿಕೆ ಅನಿವಾರ್ಯವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ವರಿಷ್ಠರಿಗೆ ಈ ಬಗ್ಗೆ ಅರಿವಿದೆ. ಸೂಕ್ತ ಸಂದರ್ಭದಲ್ಲಿ ಸರ್ಕಾರ ನಿರ್ಣಯ ಕೈಗೊಳ್ಳಲಿದೆ’ ಎಂದು ಸಮರ್ಥಿಸಿಕೊಂಡರು.

ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಮಾತನಾಡಿದರು. ಎಂಎಲ್‍ಸಿ ರವಿಕುಮಾರ್ ಹಾಜರಿದ್ದರು.

ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ತುಮಕೂರು, ಚಿಕ್ಕಮಗಳೂರು, ಬಳ್ಳಾರಿ, ಕೋಲಾರ, ಮೈಸೂರು, ಬೆಂಗಳೂರು, ಉಡುಪಿ ಸೇರಿದಂತೆ 21 ಜಿಲ್ಲೆಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಒಳಗೊಂಡಂತೆ 120ಕ್ಕೂ ಹೆಚ್ಚು ಆಹ್ವಾನಿತರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು