ಮಂಗಳವಾರ, ಜೂನ್ 28, 2022
26 °C
ಪ್ರತ್ಯೇಕ ಸಭೆ ಕರೆಯುವಂತೆ ಸುನಿಲ್ ಕುಮಾರ್‌ ಟ್ವೀಟ್‌

ಮದ್ದಿಲ್ಲದ ಬಿಜೆಪಿ ‘ಅಂತರ್ಯುದ್ಧ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ ಕುರಿತ ಹೇಳಿಕೆಗಳ ಮಹಾಪೂರ ಮುಗಿಯಿತು ಎನ್ನುವಾಗಲೇ, ‘ಎಲ್ಲ ಶಾಸಕರ ಅಭಿಪ್ರಾಯ ಆಲಿಸಲು ಪ್ರತ್ಯೇಕ ಸಭೆ ನಡೆಸಬೇಕು’ ಎಂದು ಆಡಳಿತ ಪಕ್ಷದ ಮುಖ್ಯ ಸಚೇತಕ ವಿ. ಸುನಿಲ್‌ಕುಮಾರ್‌ ಒತ್ತಾಯಿಸುವ ಮೂಲಕ ಬಿಜೆಪಿ ಆಂತರಿಕ ಸಂಘರ್ಷಕ್ಕೆ ಹೊಸ ತಿರುವು ನೀಡಿದ್ದಾರೆ.

‘ಪಕ್ಷದೊಳಗೆ ಏನೂ ನಡೆಯುತ್ತಿಲ್ಲ; ಯಡಿಯೂರಪ್ಪ ಬದಲಾವಣೆಯ ಪ್ರಶ್ನೆಯೇ ಇಲ್ಲ’ ಎಂದು ಬಿಜೆಪಿಯ ಎಲ್ಲ ನಾಯಕರು ಬಹಿರಂಗವಾಗಿ ಉದ್ಘೋಷ ಮಾಡುತ್ತಿದ್ದರೂ ಒಳಗಡೆ ‘ತುಮುಲ–ಅಸಹನೆ’ಯ ಕುದಿ ತಣ್ಣಗಾಗಿಲ್ಲ ಎಂಬುದಕ್ಕೆ ಈ ಹೊಸ ಬೆಳವಣಿಗೆ ಸಾಕ್ಷಿ ಒದಗಿಸುತ್ತದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ‘ವಿಜಯ ನಗರ ಸಾಮ್ರಾಜ್ಯ ಪತನ’ದ ಕತೆಯನ್ನು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಈ ಬೆನ್ನಲ್ಲೇ ಸುನಿಲ್‌ಕುಮಾರ್ ಟ್ವೀಟ್ ಮಾಡಿರುವುದು ಪಕ್ಷದೊಳಗೆ ನಾನಾ ವಿಧದ ಚರ್ಚೆಯನ್ನು ಹುಟ್ಟುಹಾಕಿದೆ.

‘ಯಾರೂ ಕೂಡ ಯಡಿಯೂರಪ್ಪ ಪರ–ವಿರುದ್ಧ ಸಹಿ ಸಂಗ್ರಹ ಮಾಡುವುದಾಗಲಿ, ಹೇಳಿಕೆ ನೀಡುವುದಾಗಿ ಮಾಡಬಾರದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಕಟ್ಟುನಿಟ್ಟಾಗಿ ಹೇಳಿದ್ದರು. ಯಡಿಯೂರಪ್ಪ ಕೂಡ ಅದನ್ನೇ ಪ್ರತಿಪಾದಿಸಿದ್ದರು. ‘ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವ ಹೇಳಿಕೆ ನೀಡಬಾರದು ಎಂದು ವರಿಷ್ಠರು ಎಚ್ಚರಿಕೆ ನೀಡಿದ್ದಾರೆ’ ಎಂದು ಕೆಲವು ನಾಯಕರು ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಕಾರ್ಕಳದ ಶಾಸಕರೂ ಆಗಿರುವ ಸುನಿಲ್ ಮಂಗಳವಾರ ಮಾಡಿರುವ ಟ್ವೀಟ್‌ ಮಹತ್ವ ಪಡೆದಿದೆ.

ಟ್ವೀಟ್‌ನಲ್ಲಿ ಏನಿದೆ: ‘ಕಳೆದ 3 ದಿನದಿಂದ ಮಾಧ್ಯಮದಲ್ಲಿ ಬರುತ್ತಿರುವ ಹೇಳಿಕೆಗಳು ಪಕ್ಷದ ಹಿತದೃಷ್ಟಿಯಿಂದ ಒಳಿತಲ್ಲ. ಈ ಅಭಿಪ್ರಾಯಗಳು ಎಲ್ಲ ಶಾಸಕರು ಮತ್ತು ಕಾರ್ಯಕರ್ತರ ಅಭಿಪ್ರಾಯವೂ ಅಲ್ಲ. ನಮ್ಮ ಅಭಿಪ್ರಾಯಗಳನ್ನು ಮಾಧ್ಯಮದ ಮುಂದೆ ಹೇಳಲು ಸಾಧ್ಯವಿಲ್ಲವಾದ್ದರಿಂದ, ಪಕ್ಷದ ವರಿಷ್ಠರು ಅಭಿಪ್ರಾಯ ಆಲಿಸಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು’ ಎಂದು ಅವರು ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೆ ಟ್ವೀಟ್‌ ಟ್ಯಾಗ್‌ ಮಾಡಿದ್ದಾರೆ.

‘ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಿರಿ’ ಎಂದು ಅವರು ನೇರವಾಗಿ ಹೇಳಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವದ ಬಗ್ಗೆಯೂ ಪ್ರಸ್ತಾಪಿಸದೇ, ಶಾಸಕರ ಅಭಿಪ್ರಾಯ ಹಂಚಿಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕೆಂದು ಅವರು ಬೇಡಿಕೆ ಮಂಡಿಸಿರುವುದು ನಾನಾ ರೀತಿಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ.

‘ಬಿಜೆಪಿ ಎಂದರೆ ಸದಾ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸುವ ಎಂ.ಪಿ.ರೇಣುಕಾಚಾರ್ಯ ಅವರೂ ಅಲ್ಲ, ದೆಹಲಿಗೆ ದೂರು ಹೇಳಲು ಹೋಗುವ ಸಿ.ಪಿ.ಯೋಗೇಶ್ವರ್ ಅಥವಾ ಬೇರೆಯವರೂ  ಅಲ್ಲ. ಇವರಿಂದ ಪಕ್ಷದ ಬಗ್ಗೆ ತಪ್ಪು ಸಂದೇಶಗಳು ರವಾನೆಯಾಗುತ್ತವೆ. ನಮ್ಮಂತ ಬಹಳಷ್ಟು ಶಾಸಕರು ಸುಮ್ಮನಿದ್ದೇವೆ ಎಂಬ ಮಾತ್ರಕ್ಕೆ ನಮ್ಮಲ್ಲಿ ಭಾವನೆಗಳಿಲ್ಲ ಎಂದಲ್ಲ. ನಮ್ಮ ನೋವುಗಳನ್ನು ಮತ್ತು ಅಭಿಪ್ರಾಯಗಳನ್ನೂ ವರಿಷ್ಠರು ಕೇಳಬೇಕು’ ಎಂದು ಸುನಿಲ್ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ
ಎನ್ನಲಾಗಿದೆ.

‘ಕೆಲವೇ ಶಾಸಕರು ಪಕ್ಷ ಮತ್ತು ನಾಯಕರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುವುದು ಸರಿಯಲ್ಲ. ಇಂತಹ ನಡವಳಿಕೆಗಳಿಂದ ಪಕ್ಷಕ್ಕಾಗಿ ಹಲವು ದಶಕಗಳಿಂದ ದುಡಿದ ಕಾರ್ಯಕರ್ತರ ಮಧ್ಯೆ ತಪ್ಪು ಸಂದೇಶಗಳು ರವಾನೆಯಾಗುತ್ತಿದೆ. ಇದನ್ನು ಸರಿಪಡಿಸುವುದು. ಎಲ್ಲ ಶಾಸಕರ ಅಭಿಪ್ರಾಯವನ್ನು ಏಕ ರೀತಿಯಲ್ಲಿ ಪರಿಗಣಿಸುವ ಕೆಲಸ ಆಗಬೇಕು. ಇದಕ್ಕಾಗಿ ಸಭೆ ಅಗತ್ಯ’ ಎಂಬುದಾಗಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

‘ರಾಜೀನಾಮೆ ಕೊಡ್ತೇನೆ ಎಂದದ್ದು ಆದರ್ಶ ಕಾರ್ಯಕರ್ತರ ಲಕ್ಷಣ’

ಬಾಗಲಕೋಟೆ: ‘ಹೈಕಮಾಂಡ್ ಹೇಳಿದರೆ ರಾಜೀನಾಮೆ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿರುವ ಹೇಳಿಕೆ ಪಕ್ಷದ ಆದರ್ಶ ಕಾರ್ಯಕರ್ತರ ಲಕ್ಷಣ. ಬೇರೆಯವರಿಗೂ ಪ್ರೇರಣೆಯಾಗಲು ಆ ರೀತಿ ಹೇಳಿಕೆ ನೀಡಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ ಕಟೀಲ್ ಮಾರ್ಮಿಕವಾಗಿ ಹೇಳಿದರು.

ಸುದ್ದಿಗಾರರ ಜತೆ  ಮಂಗಳವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪರ–ವಿರುದ್ಧ ಮಾತನಾಡುವರ ಬಗ್ಗೆ ಕ್ರಮ ಕೈಗೊಳ್ಳಲು ಪಕ್ಷದ ಶಿಸ್ತು ಸಮಿತಿ ಈಗಾಗಲೇ ಕಾರ್ಯೋನ್ಮುಖವಾಗಿದೆ. ನಮ್ಮಲ್ಲಿ ಸಹಿ ಸಂಗ್ರಹ, ಒತ್ತಡ, ಒತ್ತಾಯದ ಪದ್ಧತಿ ಇಲ್ಲ’ ಎಂದರು. ‘ಶಿಸ್ತು ಉಲ್ಲಂಘಿಸಿದ ಕೆಲವರಿಗೆ ಈಗಾಗಲೇ ಮೊದಲ ನೋಟಿಸ್ ನೀಡಲಾಗಿದೆ. ಮೂರು ನೋಟಿಸ್‌ ನಂತರ ಕ್ರಮ ಕೈಗೊಳ್ಳುವ ಪರಿಪಾಟವಿದೆ. ಎಲ್ಲ ಬೆಳವಣಿಗೆ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುವುದಾಗಿ ವರಿಷ್ಠರು ಹೇಳಿದ್ದಾರೆ’ ಎಂದರು. ‘ಪಕ್ಷ ಅಧಿಕಾರದಲ್ಲಿ ಇದ್ದಾಗ ಇವೆಲ್ಲಾ ಸಹಜ. ಕೆಲವರು ನೋವು, ಭಾವನೆಗಳನ್ನು ಹಂಚಿಕೊಳ್ಳುವುದು ಇದ್ದದ್ದೇ. ಪಕ್ಷದಲ್ಲಿನ ಆಂತರಿಕ ಪ್ರಜಾಪ್ರಭುತ್ವದ ಲಕ್ಷಣವೂ ಹೌದು’ ಎಂದರು.

* ಯಡಿಯೂರಪ್ಪ ಅವರು ಈ ಅವಧಿಗೆ ಮಾತ್ರವಲ್ಲ, ಮುಂದಿನ ಅವಧಿಗೂ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ.

–ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು