ಹೊಂದಾಣಿಕೆ ರಾಜಕೀಯ ಸಹಿಸುವುದಿಲ್ಲ:ಸಿ.ಟಿ.ರವಿ

ಬೆಳಗಾವಿ: ‘ಹೊಂದಾಣಿಕೆ ರಾಜಕಾರಣವನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ’ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಯಾವ ಕ್ಷೇತ್ರದಲ್ಲಿ ಯಾವ ಪಕ್ಷದೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಬೆಳಗಾವಿ ಜಿಲ್ಲೆಯ 18 ವಿಧಾನಸಭೆ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವುದೇ ನಮ್ಮ ಗುರಿ’ ಎಂದು ತಿಳಿಸಿದರು.
‘ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರ ಪ್ರದೇಶ ಲೋಕಸಭೆ ಚುನಾವಣೆ ಉಸ್ತುವಾರಿ ವಹಿಸಿಕೊಂಡಾಗ, ಅಲ್ಲಿ ಬಿಜೆಪಿಯ 10 ಸಂಸದರಿದ್ದರು. ಈಗ ನಮ್ಮ ಪಕ್ಷದ 73 ಸಂಸದರಿದ್ದಾರೆ. ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದ ರಾಜ್ಯದಲ್ಲೀಗ ಅಧಿಕಾರಕ್ಕೇರಿದೆ’ ಎಂದರು.
‘ರಾಜ್ಯದಲ್ಲಿ 150ಕ್ಕೂ ಅಧಿಕ ಸ್ಥಾನ ಗೆಲ್ಲುವ ಗುರಿ ಹಾಕಿಕೊಂಡಿದ್ದೇವೆ. ಬಿಜೆಪಿ ಸರ್ಕಾರ ಜಾರಿಗೊಳಿಸಿದ ಯೋಜನೆಗಳ ಫಲಾನುಭವಿಗಳು ಪ್ರತಿ ಕ್ಷೇತ್ರದಲ್ಲಿ ಶೇ.70ರಷ್ಟು ಇದ್ದಾರೆ. ಅವರನ್ನು ಮತದಾರರಾಗಿ ಪರಿವರ್ತಿಸಬೇಕಿದೆ. ಅದರಲ್ಲಿ ಯಶಸ್ವಿಯಾದರೆ, 150ಕ್ಕೂ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಾಗಲಿದೆ’ ಎಂದು ಹೇಳಿದರು.
‘ಬಿಜೆಪಿ ಟಿಕೆಟ್ ಕೇಳುವುದು ಅಪರಾಧವಲ್ಲ. ಸಾಮಾನ್ಯ ಕಾರ್ಯಕರ್ತನಿಗೂ ಟಿಕೆಟ್ ಕೇಳಲು ಅವಕಾಶವಿದೆ. ಆದರೆ, ಪಕ್ಷಕ್ಕೊಂದು ಚೌಕಟ್ಟಿದೆ. ಟಿಕೆಟ್ ವಿಚಾರ ಹಾದಿಬೀದಿಯಲ್ಲಿ ಚರ್ಚಿಸುವ ವಿಷಯವಲ್ಲ. ಆಂತರಿಕ ಹಾಗೂ ಬಹಿರಂಗ ಸಮೀಕ್ಷೆ ವರದಿ ಆಧರಿಸಿ ಪಕ್ಷದವರು ಅರ್ಹರಿಗೆ ಟಿಕೆಟ್ ಕೊಡುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.