ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ 2 ದಿನ ಬಿಜೆಪಿ ಚಿಂತನಾ ಶಿಬಿರ

ಅವಧಿಪೂರ್ಣ ಚುನಾವಣೆ, ಕಾಂಗ್ರೆಸ್‌ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಕುರಿತು ಸಭೆಯಲ್ಲಿ ಚರ್ಚೆ
Last Updated 13 ಜುಲೈ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಭರ್ಜರಿಯಾಗಿ ತಯಾರಿ ನಡೆಸುತ್ತಿರುವ ಬೆನ್ನಲ್ಲೇ ಬಿಜೆಪಿಯೂ ತನ್ನ ಪಕ್ಷದ ಶಾಸಕರು ಮತ್ತು ಸಚಿವರ ಚಿಂತನಾ ಸಭೆಯನ್ನು ಹಮ್ಮಿಕೊಂಡಿದೆ. ಅವಧಿಪೂರ್ಣ ಚುನಾವಣೆ ಮತ್ತು ಇತರ ಮಹತ್ವದ ವಿಷಯಗಳ ಬಗ್ಗೆ ಸಭೆಯಲ್ಲಿ ಚಿಂತನ– ಮಂಥನ ನಡೆಯಲಿದೆ.

ದೇವನಹಳ್ಳಿಯ ರೆಸಾರ್ಟ್‌ವೊಂದರಲ್ಲಿ ನಡೆಯಲಿದ್ದು, ವಿಧಾನಸಭಾ ಚುನಾವಣೆಯ ಸಿದ್ಧತೆಯ ಬಗ್ಗೆ ಚರ್ಚೆ ನಡೆಸಲು ಆಯ್ದ ಶಾಸಕರು ಮತ್ತು ಸಚಿವರನ್ನು ಈ ಸಭೆಗೆ ಆಹ್ವಾನಿಸಲಾಗಿದೆ. 14 ರಂದು ಶಾಸಕರ ಸಭೆ ಮತ್ತು 15 ರಂದು ಸಚಿವರ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಈ ಸಭೆಯಲ್ಲಿ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಮುಂದಿನ ಎಂಟು ತಿಂಗಳಲ್ಲಿ ಪಕ್ಷ ಅನುಸರಿಸಬೇಕಾದ ನಡೆಯ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯಲಿದೆ. ಅಲ್ಲದೆ, ಅವಧಿಪೂರ್ವ ಚುನಾವಣೆ ನಡೆಸಿದರೆ ಪಕ್ಷಕ್ಕೆ ಲಾಭವಾಗುವುದೇ ಅಥವಾ ಅವಧಿ ಪೂರ್ಣವಾಗುವರೆಗೂ ಕಾಯಬೇಕೆ ಎಂಬ ಬಗ್ಗೆಯೂ ಚರ್ಚೆ ನಡೆಯಲಿದೆ.

ಮುಖ್ಯವಾಗಿ, ಶೇ 40 ಕಮಿಷನ್‌, ಹಿಜಾಬ್‌, ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಸೇರಿದಂತೆ ಹಲವು ವಿಷಯಗಳನ್ನು ಕಾಂಗ್ರೆಸ್‌ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆ ಇರುವುದರಿಂದ, ಅದಕ್ಕೆ ಹೇಗೆ ತಿರುಗೇಟು ನೀಡಬೇಕು ಎಂಬ ಬಗ್ಗೆಯೂ ಪ್ರಸ್ತಾವ ಆಗಲಿದೆ ಎಂದು ಮೂಲಗಳು ಹೇಳಿವೆ.

ಬೂತ್‌ ಮಟ್ಟದಲ್ಲಿ ಸಂಘಟನೆಯನ್ನು ಚುರುಕುಗೊಳಿಸುವ ಬಗ್ಗೆ ಮತ್ತು ಪಕ್ಷದ ಶಾಸಕರ ಅಥವಾ ಸಂಭಾವ್ಯ ಅಭ್ಯರ್ಥಿಗಳ ಶಕ್ತಿ– ಸಾಮರ್ಥ್ಯವನ್ನು ಒರೆಗೆ ಹಚ್ಚುವ ಕೆಲಸವೂ ಆಗಲಿದೆ. ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರು ಮತ್ತು ಸರ್ಕಾರದ ಮಟ್ಟದಲ್ಲಿ ಸಚಿವರು ಪರಿಣಾಮಕಾರಿಯಾಗಿ ಕೆಲಸ ಮಾಡುವ ಮೂಲಕ ಉಳಿದಿರುವ ಅವಧಿಯಲ್ಲಿ ಜನರ ಮನಸ್ಸು ಗೆಲ್ಲುವ ಬಗ್ಗೆ ಸೂಚನೆ ನೀಡಲಾಗುವುದು.

ಆರ್‌ಎಸ್‌ಎಸ್‌ ಮೇಲೆ ಟೀಕಾ ಪ್ರಹಾರ ನಡೆಸುವ ಮೂಲಕ ಮುಸ್ಲಿಂ ಮತ್ತು ಕ್ರೈಸ್ತ ಮತಗಳ ಕ್ರೋಡೀಕರಣಕ್ಕೆ ಕಾಂಗ್ರೆಸ್‌ ಪ್ರಯತ್ನಿಸುತ್ತಿದ್ದು, ಇದಕ್ಕೆ ಯಾವ ರೀತಿ ಪ್ರತ್ಯುತ್ತರ ನೀಡಬೇಕು ಅಥವಾ ಈ ಟೀಕೆಗಳಿಗೆ ನಿರ್ಲಕ್ಷ್ಯಮಾಡಬೇಕೆ ಎಂಬ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ನಿಷ್ಠಾವಂತರಿಗೆ ನಿಗಮ–ಮಂಡಳಿ ಅಧ್ಯಕ್ಷ ಸ್ಥಾನ

ವಿಧಾನಸಭೆ ಚುನಾವಣೆಗೆ ಕಾರ್ಯಕರ್ತರನ್ನು ಅಣಿಗೊಳಿಸಲು ನಿಗಮ– ಮಂಡಳಿಗಳ ನೇಮಕದಲ್ಲಿ ನಿಷ್ಠಾವಂತ ಕಾರ್ಯಕರ್ತರು ಮತ್ತು ಶಾಸಕರಿಗೆ ಆದ್ಯತೆ ನೀಡಲಾಗಿದೆ. ಇದಕ್ಕೆ ಪೂರಕವಾಗಿಯೇ ಪಟ್ಟಿಯನ್ನು ರಚಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಪಕ್ಷ ಮತ್ತು ಆರ್‌ಎಸ್‌ಎಸ್‌ ನೀಡಿದ್ದ ಪಟ್ಟಿಗೆ ಹೆಚ್ಚಿನ ಮಾನ್ಯತೆ ನೀಡಿರಲಿಲ್ಲ ಎಂಬ ಆರೋಪವೂ ಕೇಳಿ ಬಂದಿತ್ತು. ತಮ್ಮ ಬೆಂಬಲಿಗರಿಗೆ ಮತ್ತು ಪ್ರಭಾವಿಗಳಿಗೆ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಆದ್ದರಿಂದ ಈ ಬಾರಿ ಆ ರೀತಿ ಲೋಪ ಆಗದಂತೆ ಎಚ್ಚರವಹಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕೆಲವು ದಿನಗಳ ಹಿಂದೆ ಆರ್‌ಎಸ್‌ಎಸ್‌ ಮುಖಂಡರ ಜತೆಗೆ ಮಾತುಕತೆ ನಡೆಸಿದ್ದರು.

ಇನ್ನೂ ಕೆಲವು ಅಧ್ಯಕ್ಷರನ್ನು ಕೈಬಿಟ್ಟ ಬಳಿಕ ಹೊಸ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಆಗಸ್ಟ್‌ನಲ್ಲಿ ಅಧ್ಯಕ್ಷರ ಬದಲಾವಣೆ?

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್ ಅವರ ಅವಧಿ ಆಗಸ್ಟ್‌ನಲ್ಲಿ ಪೂರ್ಣಗೊಳ್ಳಲಿದ್ದು, ಆ ಬಳಿಕ ಹೊಸ ಅಧ್ಯಕ್ಷರ ನೇಮಕ ಆಗಲಿದೆ. ಯಾರನ್ನು ಈ ಸ್ಥಾನಕ್ಕೆ ಕೂರಿಸಬಹುದು ಎಂಬ ಚರ್ಚೆ ಬಿಜೆಪಿಯಲ್ಲಿ ಆರಂಭವಾಗಿದೆ. ಚುನಾವಣೆ ಸಂದರ್ಭದಲ್ಲಿ ಹೆಚ್ಚು ಶ್ರಮವಹಿಸಿ ಕೆಲಸ ಮಾಡಬಲ್ಲ ಉತ್ಸಾಹಿ ಯುವ ನಾಯಕರಿಗೆ ಅಧ್ಯಕ್ಷ ಪಟ್ಟಕಟ್ಟುವ ಸಾಧ್ಯತೆ ಇದೆ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT