ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕಾರ್ಯಕಾರಿಣಿ| ಕವಟಗಿಮಠ ದೂರು; ಬಿಎಸ್‌ವೈ, ಜಾರಕಿಹೊಳಿ ಗೈರು

ಮುಖ್ಯಮಂತ್ರಿ ಬದಲಾವಣೆ; ಮಾತನಾಡದಂತೆ ಸೂಚನೆ
Last Updated 28 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೇಳಿಕೆ ನೀಡಿದರೆ ಕಠಿಣ ಕ್ರಮದ ಎಚ್ಚರಿಕೆ, ಬಿ.ಎಸ್‌. ಯಡಿಯೂರಪ್ಪ, ರಮೇಶ ಜಾರಕಿಹೊಳಿ ಸೇರಿದಂತೆ ಕೆಲವರ ಗೈರು ಹಾಜರಿ ಮತ್ತು ಬಿಜೆಪಿ ಮುಖಂಡ ಮಹಾಂತೇಶ ಕವಟಗಿಮಠ ಅವರ ದೂರು.

ಮಂಗಳವಾರ ಹುಬ್ಬಳ್ಳಿಯ ಡೆನಿಸನ್ಸ್ ಹೋಟೆಲ್‌ನಲ್ಲಿ ಆರಂಭವಾದ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಹೊರಗೆ ಮತ್ತು ಒಳಗೆ ಈ ಸುದ್ದಿಗಳು ಸದ್ದು ಮಾಡಿದವು.

ಮುಖ್ಯಮಂತ್ರಿ ಬದಲಾವಣೆ ಸೇರಿದಂತೆ ಪಕ್ಷದ ಸಂಘಟನೆ ಮೇಲೆ ಪರಿಣಾಮ ಬೀರುವ ಯಾವುದೇ ಹೇಳಿಕೆ ನೀಡದಂತೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲ ಮುಖಂಡರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

‘ಮುಖ್ಯಮಂತ್ರಿ ಬದಲಾವಣೆ ಹೇಳಿಕೆಯಿಂದ ಪಕ್ಷದ ಸಂಘಟನೆ ಮೇಲೆ ಪರಿಣಾಮ ಆಗುತ್ತಿದೆ. ಬದಲಾವಣೆ ವಿಷಯ ಹೈಕಮಾಂಡ್‌ ಮುಂದಿಲ್ಲ. ಆದರೂ ಕೆಲವರು ಅದನ್ನು ಮಾತನಾಡುತ್ತಿದ್ದಾರೆ. ಕೂಡಲೇ ನಿಲ್ಲಿಸಬೇಕೆಂದು ಎಚ್ಚರಿಸಿದ್ದಾರೆ’ ಎಂದು ಬಿಜೆಪಿ ಮೂಲಗಳು ಹೇಳಿವೆ.

ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯ ಸೋಲಿನ ಬಗ್ಗೆ ಬಿಜೆಪಿ ಅಭ್ಯರ್ಥಿಯಾಗಿ ಸೋತಿರುವ ಮಹಾಂತೇಶ ಕವಟಗಿಮಠ ಅವರು, ಅರುಣ್‌ ಸಿಂಗ್‌ ಅವರನ್ನು ಭೇಟಿಯಾಗಿ ದೂರಿದ್ದಾರೆ.

‘ಜಾರಕಿಹೊಳಿ ಸಹೋದರರು ತಮ್ಮ ವಿರುದ್ಧ ಅವರ ಸಹೋದರನನ್ನು ನಿಲ್ಲಿಸಿ, ಗೊಂದಲಕ್ಕೆ ಕಾರಣರಾದರು. ಮುಖ್ಯಮಂತ್ರಿ ಸೇರಿದಂತೆ ಯಾರೂ ಸ್ಪಷ್ಟವಾಗಿ ಅವರಿಗೆ ಏನನ್ನೂ ಹೇಳಲಿಲ್ಲ. ಅವರಿಗೆ ಮಾತಿಗೆ ಎಲ್ಲರೂ ಗೋಣು ಅಲ್ಲಾಡಿಸಿದ್ದರಿಂದ ಪಕ್ಷ ಮುಜುಗರ ಅನುಭವಿಸುವಂತಾಯಿತು. ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ. ಧಾರವಾಡ ಕ್ಷೇತ್ರದ ಚುನಾವಣೆಯಲ್ಲಿಯೂ ಪ್ರಯಾಸದ ಗೆಲುವು ಸಾಧಿಸಿದ ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌ ಸಹ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮುಖಂಡರು ಗೈರು: ಶಾಸಕರಾದಬಿ.ಎಸ್. ಯಡಿಯೂರಪ್ಪ, ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಅವರ ಗೈರಿನ ಬಗ್ಗೆ ಚರ್ಚೆ, ಗುಸು ಗುಸು ಮಾತು ಕೇಳಿ ಬಂದವು. ಕುಟುಂಬ ಸಮೇತ ಬಿ.ಎಸ್‌. ಯಡಿಯೂರಪ್ಪ ಅವರು ದುಬೈ ಪ್ರವಾಸ ಕೈಗೊಂಡಿರುವುದು ಉದ್ದೇಶಪೂರ್ವಕ
ವಾಗಿಯೇ ಎನ್ನುವ ಮಾತುಗಳು ಕೇಳಿ ಬಂದವು. ವಿಧಾನ ಪರಿಷತ್‌ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿನ ಕುರಿತು ಚರ್ಚೆಯಾಗುವ ಸಾಧ್ಯತೆಗಳಿದ್ದರೂ, ಜಾರಕಿಹೊಳಿ ಸಹೋದರರು ಗೈರಾಗಿದ್ದರು. ಬೆಳಗಾವಿ ಜಿಲ್ಲೆಯಲ್ಲಿದ್ದರೂ ಇತ್ತ
ಸುಳಿಯಲಿಲ್ಲ.

ದೆಹಲಿಗೆ ಹೊರಟ ಜೋಶಿ: ಕಾರ್ಯಕಾರಿಣಿ ಬುಧವಾರವೂ ನಡೆಯಲಿದೆ. ಆದರೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಉದ್ಘಾಟನೆ ನಂತರ ದೆಹಲಿಗೆ ತೆರಳಿದರು.

ಮತ್ತೆ ಭೇಟಿಯಾಗಲು ಸೂಚನೆ

ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯ ಸೋಲಿನ ಬಗೆಗೆ ಬಿಜೆಪಿ ಅಭ್ಯರ್ಥಿಯಾಗಿದ್ದ ಮಹಾಂತೇಶ ಕವಟಗಿಮಠ ಅವರ ದೂರು ಆಲಿಸಿದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಬುಧವಾರ ಮತ್ತೆ ಭೇಟಿಯಾಗುವಂತೆ ತಿಳಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್‌ ಚುನಾವಣೆಯ ಸೋಲಿನ ಬಗೆಗೆ ಅವರಿಗೆ ಪೂರ್ಣವಾಗಿ ಮಾಹಿತಿ ನೀಡಿದ್ದೇನೆ ಎಂದರು. ‘ಚುನಾವಣೆ ಬಗೆಗೆ ನಾನೂ ಮಾಹಿತಿ ಸಂಗ್ರಹಿಸಿದ್ದೇನೆ. ನೀವು ಹೇಳಿ ಎಂದು ಸಿಂಗ್‌ ಅವರು ಹೇಳಿದರು. ಎಲ್ಲವನ್ನೂ ಕೇಳಿದ ಮೇಲೆ ಬುಧವಾರ ಬಂದು ಭೇಟಿ ಮಾಡುವಂತೆ ತಿಳಿಸಿದ್ದಾರೆ’ ಎಂದು ಹೇಳಿದರು.

‘ಹೊರಹಾಕುವ ಎಚ್ಚರಿಕೆ’

ಹುಬ್ಬಳ್ಳಿ: ‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಇದರ ಬಗ್ಗೆ ಯಾರೇ ಮಾತನಾಡಿದರೂ ಪಕ್ಷದಿಂದ ಹೊರಹಾಕುವುದಾಗಿ ಅರುಣ್ ಸಿಂಗ್‌ ಎಚ್ಚರಿಕೆ ನೀಡಿದ್ದಾರೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೆಲ ಮುಖ್ಯಮಂತ್ರಿ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಯಾರಿಗೆ ಅಂತ ನೇರವಾಗಿ ಹೇಳಲು ಆಗುವುದಿಲ್ಲ. ಕೆಲವರು ಬೆಳಗಾವಿ ಅಧಿವೇಶನ ವೇಳೆಯಲ್ಲಿ ಸುವರ್ಣ ವಿಧಾನಸೌಧದಲ್ಲಿ ಓಡಾಡಿದ್ದಾರೆ ಅವರಿಗೆಲ್ಲ ನಿರಾಸೆಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT