ಗುರುವಾರ , ಜನವರಿ 28, 2021
27 °C
ಶಾ ಅವರಿಂದ ದೂರವಾಣಿ ಕರೆ l ದೆಹಲಿಗೆ ಬರುವಂತೆ ಮುಖ್ಯಮಂತ್ರಿ ಬಿಎಸ್‌ವೈಗೆ ಸೂಚನೆ

ತರಾತುರಿ ತೀರ್ಮಾನಕ್ಕೆ ಆಕ್ಷೇಪ: ಯಡಿಯೂರಪ್ಪ ನಡೆಗೆ ‘ಅಮಿತ’ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವೀರಶೈವ–ಲಿಂಗಾಯತ ಸಮುದಾಯವನ್ನು ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಸೇರಿಸಬೇಕೆಂಬ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ‘ರಾಜಕೀಯ ಮಹತ್ವಾಕಾಂಕ್ಷೆ’ಯ ‘ಮಿಂಚಿನ ಓಟ’ಕ್ಕೆ ಗೃಹ ಸಚಿವ ಅಮಿತ್ ಶಾ ತಡೆ ಹಾಕಿದ್ದಾರೆ.

ವೀರಶೈವ– ಲಿಂಗಾಯತರಿಗೆ ಮೀಸಲಾತಿ ವಿಶೇಷ ಸೌಲಭ್ಯ ಕಲ್ಪಿಸಲು ಕೇಂದ್ರಕ್ಕೆ ಶಿಫಾರಸು ಮಾಡುವುದಕ್ಕಾಗಿಯೇ ಸಚಿವ ಸಂಪುಟ ಸಭೆಯನ್ನು ತುರ್ತಾಗಿ ಶುಕ್ರವಾರ ಕರೆಯಲಾಗಿತ್ತು. ಅಮಿತ್ ಶಾ ಸೂಚನೆ ನೀಡಿದ್ದರಿಂದಾಗಿ ಈ ಕುರಿತ ನಿರ್ಣಯ ಕೈಗೊಳ್ಳಲಿಲ್ಲ. ಇಂತಹ ತೀರ್ಮಾನ ತೆಗೆದುಕೊಳ್ಳುವ ಮೂಲಕ ಪಕ್ಷದ ವರಿಷ್ಠರಿಗೆ ಸಂದೇಶ ರವಾನಿಸಬೇಕು ಎಂಬ ಯಡಿಯೂರಪ್ಪ ಛಲವೂ ಕೈಗೂಡಲಿಲ್ಲ.

ಯಡಿಯೂರಪ್ಪ ಅವರ ಆತುರದ ನಡೆಗೆ ಕೇವಲ ದೂರವಾಣಿ ಕರೆಯ ಮೂಲಕ ಅಮಿತ್‌ ಶಾ ಲಗಾಮು ಹಾಕಿದರು.

‘ಸದ್ಯಕ್ಕೆ ಇಂತಹ ತೀರ್ಮಾನಗಳನ್ನು ತೆಗೆದುಕೊಳ್ಳಬೇಡಿ. ದೆಹಲಿಗೆ ಬಂದು ನನ್ನನ್ನು ಭೇಟಿ ಮಾಡಿ’ ಎಂದು ಶಾ ಹೇಳಿದರು. ಅಲ್ಲದೆ, ಸಂಪುಟದ ಕೆಲವು ಹಿರಿಯ ಸಹೋದ್ಯೋಗಿಗಳು ಕೂಡಾ ಆತುರದ ನಿರ್ಣಯ ಕೈಗೊಳ್ಳದಂತೆ ಮನವೊಲಿಸಿದರು’ ಎಂದು ಮೂಲಗಳು ತಿಳಿಸಿವೆ.

ವೀರಶೈವ–ಲಿಂಗಾಯತ ಸಮುದಾಯಕ್ಕೆ ಸೇರಿದ ತಮ್ಮ ಆಪ್ತ ಬಳಗದ ಸಚಿವರ ಸಭೆಯನ್ನು ಗುರುವಾರ ನಡೆಸಿದ ಮುಖ್ಯಮಂತ್ರಿ  ಈ ವಿಚಾರವಾಗಿ ಚರ್ಚಿಸಿದ್ದರು. ಅಲ್ಲದೆ, ಪ್ರಸ್ತಾವನೆಯನ್ನು ಸಂಪುಟ ಸಭೆಯ ಕಾರ್ಯಸೂಚಿಯಲ್ಲೂ ಸೇರಿಸಲಾಗಿತ್ತು. ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡ ಬಳಿಕ ಯಡಿಯೂರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ‘ಸಿಹಿ ಸುದ್ದಿ’ ಪ್ರಕಟಿಸುವ ತೀರ್ಮಾನವೂ ಆಗಿತ್ತು.

ಅಚ್ಚರಿ ಎಂದರೆ, ಸುಮಾರು 10 ಸಚಿವರು ಬೆಂಗಳೂರಿನಲ್ಲಿ ಇಲ್ಲದ ಸಂದರ್ಭದಲ್ಲೇ ತರಾತುರಿಯಲ್ಲಿ ಸಂಪುಟ ಸಭೆ ಕರೆಯಲಾಗಿತ್ತು. ಈ ಎಲ್ಲ ಸಚಿವರಿಗೆ ಸಂಪುಟ ಸಭೆ ನಡೆಯುವ ಮಾಹಿತಿ ಇರಲ್ಲಿಲ್ಲ. ಇದಕ್ಕೆ ಪೂರಕವಾಗಿ ಉಡುಪಿಯಲ್ಲಿ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ‘ಸಂಪುಟ ಸಭೆ ತ್ವರಿತವಾಗಿ ನಿಶ್ಚಯವಾಗಿದ್ದರಿಂದ ಯಾರಿಗೂ ಸಭೆಯ ಮಾಹಿತಿ ಇರಲಿಲ್ಲ’ ಎಂದಿದ್ದಾರೆ.

ಬಿಎಸ್‌ವೈ ಮನ ಬದಲಿಸಿದ ಕರೆ: ‘ದೆಹಲಿಯಲ್ಲಿ ಬೀಡು ಬಿಟ್ಟಿರುವ ಸಚಿವರು ರಾಜ್ಯದಲ್ಲಿ ನಡೆಯುತ್ತಿರುವ ತ್ವರಿತಗತಿಯ ವಿದ್ಯಮಾನಗಳನ್ನು ವರಿಷ್ಠರ ಗಮನಕ್ಕೆ ತಂದಿದ್ದು, ಸಂಪುಟ ಸಭೆಯಲ್ಲಿ ಅವಸರದ ತೀರ್ಮಾನ ತೆಗೆದುಕೊಳ್ಳುತ್ತಿರುವ ಬಗ್ಗೆಯೂ ವಿವರಿಸಿ, ಹೇಗಾದರೂ ಅದಕ್ಕೆ ತಡೆ ಒಡ್ಡಬೇಕು ಎಂದು ಮನವಿ ಮಾಡಿದ್ದರು. ಅಲ್ಲದೆ, ಕೇಂದ್ರದ ಹಿರಿಯ ಸಚಿವರೊಬ್ಬರು ಅಮಿತ್‌ ಶಾ ಅವರ ಕಿವಿಗೆ ಈ ವಿಷಯ ಹಾಕಿದರು. ತಕ್ಷಣವೇ  ದೂರವಾಣಿ ಮೂಲಕ ಯಡಿಯೂರಪ್ಪ ಅವರನ್ನು ಶಾ ಸಂಪರ್ಕಿಸಿದರು’ ಎಂದು ಮೂಲಗಳು ತಿಳಿಸಿವೆ.

‘ಶಾ ಅವರಲ್ಲದೆ, ಇತರ ಪ್ರಮುಖರು, ಕಾನೂನು ಸಚಿವ ಮಾಧುಸ್ವಾಮಿ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ  ಜತೆ ಮಾತನಾಡಿ, ವೀರಶೈವ–ಲಿಂಗಾಯತ ಕೇಂದ್ರದ ಪಟ್ಟಿಗೆ ಸೇರಿಸುವ ಸಂಬಂಧ ಯಾವುದೇ ತೀರ್ಮಾನ ತೆಗೆದುಕೊಳ್ಳದಂತೆ ಮುಖ್ಯಮಂತ್ರಿ ಮನವೊಲಿಸಿ ಎಂದು ಮನವಿ ಮಾಡಿದರು. ಶಾ ಮಾತನಾಡಿದ ಬಳಿಕ ಮಾಧುಸ್ವಾಮಿ, ಬೊಮ್ಮಾಯಿ ಅವರೂ ಯಡಿಯೂರಪ್ಪ ಜತೆ ಮಾತನಾಡಿ ಮನವೊಲಿಸಿದರು’.

‘ಈ ನಿರ್ಣಯದಿಂದ ಆಗುವ ದೂರಗಾಮಿ ಪರಿಣಾಮಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ವಿವರಿಸಿದರು. ಜಾತಿ ರಾಜಕೀಯದ ಜೇನುಗೂಡಿಗೆ ಕಲ್ಲು ಹೊಡೆದಂತಾಗುತ್ತದೆ. ವೀರಶೈವ–ಲಿಂಗಾಯತರ ಪ್ರಸ್ತಾವ ಕಳುಹಿಸಿದರೆ, ಎಲ್ಲ ಜಾತಿಗಳೂ ಅದೇ ಮಾದರಿಯ ಪ್ರಸ್ತಾವ ಇಡುತ್ತವೆ. ನಿರಾಕರಿಸಿದರೆ ಉಳಿದ ಎಲ್ಲ ಸಮುದಾಯಗಳ ಆಕ್ರೋಶಸರ್ಕಾರ ಮತ್ತು ಪಕ್ಷದ ವಿರುದ್ಧ ತಿರುಗುತ್ತದೆ ಎಂದು ಹಿರಿಯ ಸಚಿವರು ಮನವರಿಕೆ ಮಾಡಿದರು’ ಎಂದು ಮೂಲಗಳು ತಿಳಿಸಿವೆ.

ಆತುರದ ನಿರ್ಣಯ ಬೇಡ ಎಂದರು’
‘ಆತುರದ ತೀರ್ಮಾನ ತೆಗೆದುಕೊಳ್ಳದಂತೆ ಸೂಚಿಸಿರುವ ಅಮಿತ್ ಶಾ, ಸಂಪುಟ ವಿಸ್ತರಣೆ ಪಟ್ಟಿಗೆ ಒಪ್ಪಿಗೆ ನೀಡುವುದಾಗಿ ಹೇಳಿದ್ದಾರೆ. ದೆಹಲಿಗೆ ಹೋಗಿ ಬಂದ ಬಳಿಕವಷ್ಟೇ ವೀರಶೈವ–ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರಿಸುವ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತೇನೆ’ ಎಂದು ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು.

‘ಒಬಿಸಿಗೆ ಸೇರುವುದು ಅಪರಾಧವೇ?’
‘ವೀರಶೈವ–ಲಿಂಗಾಯತರು ಕೇಂದ್ರದ ಒಬಿಸಿ ಪಟ್ಟಿಗೆ ಸೇರುವುದು ಮಹಾ ಅಪರಾಧವೇ’ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಪ್ರಶ್ನಿಸಿದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾವು ಅಪರಾಧ ಮಾಡುತ್ತಿದ್ದೇವೆ ಎಂಬ ರೀತಿಯಲ್ಲಿ ಏಕೆ ನೋಡುತ್ತಿದ್ದೀರಿ’ ಎಂದು ಮರು ಪ್ರಶ್ನಿಸಿದರು.

ಮುಖ್ಯಮಂತ್ರಿಯವರು ದೃಢ ನಿರ್ಧಾರ ಪ್ರಕಟಿಸುತ್ತಿಲ್ಲ
‘ನಾವು ಎದುರಿಗೆ ಸಿಕ್ಕಿದಾಗ ಮಂತ್ರಿ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳುತ್ತಾರೆ. ಬಳಿಕ ಆ ವಿಷಯ ಮರೆತು ಬಿಡುತ್ತಾರೆ’ ಎಂದು ವಿಧಾನಪರಿಷತ್ತಿನ ಸದಸ್ಯ ಎಂ.ಟಿ.ಬಿ. ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಭೇಟಿ  ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮುಖ್ಯಮಂತ್ರಿಯವರು ದೃಢ ನಿರ್ಧಾರ ಪ್ರಕಟಿಸುತ್ತಿಲ್ಲ. ಅವರ ಪಕ್ಷದಿಂದ ಯಾರನ್ನಾದರೂ ಮಂತ್ರಿ ಮಾಡಲಿ ನಮ್ಮ ತಕರಾರಿಲ್ಲ. ನಾವು ತ್ಯಾಗ ಮಾಡಿ ಬಂದಿದ್ದೇವೆ. ನಮಗೆ ಮಂತ್ರಿ ಸ್ಥಾನ ನೀಡಬೇಕು’ ಎಂದರು.

ಸಭೆಗೆ ಗೈರಾದ ಸಚಿವರು
ಲಕ್ಷಣ ಸವದಿ, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಜಗದೀಶ ಶೆಟ್ಟರ್, ಆರ್.ಅಶೋಕ, ಕೆ.ಎಸ್‌.ಈಶ್ವರಪ್ಪ, ಬಿ.ಶ್ರೀರಾಮುಲು, ರಮೇಶ ಜಾರಕಿಹೊಳಿ, ಡಾ.ಕೆ.ಸುಧಾಕರ್‌, ಕೋಟ ಶ್ರೀನಿವಾಸ ಪೂಜಾರಿ,ನಾಗೇಶ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು