ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡದಲ್ಲಿ ಸ್ಫೋಟ: ₹ 50 ಲಕ್ಷಕ್ಕೆ ಬೇಡಿಕೆ ಇಟ್ಟ ಅಪರಿಚಿತ

ದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು
Last Updated 20 ಸೆಪ್ಟೆಂಬರ್ 2020, 21:21 IST
ಅಕ್ಷರ ಗಾತ್ರ

ಬೆಂಗಳೂರು: ದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿರುವ ನಿರ್ಮಾಣ ಹಂತದ ಕಟ್ಟಡದ ನೆಲಮಹಡಿಯಲ್ಲಿ ಅನುಮಾನಾಸ್ಪದ ವಸ್ತುವೊಂದು ಸ್ಫೋಟಗೊಂಡಿದ್ದು, ಅದರ ಹೊಣೆ ಹೊತ್ತ ಅಪರಿಚಿತನೊಬ್ಬ ಕಟ್ಟಡದ ಮಾಲೀಕರಿಗೆ ಕರೆ ಮಾಡಿ ಬೆದರಿಕೆಯೊಡ್ಡಿದ್ದಾನೆ.

ಸ್ಪೋಟ ಹಾಗೂ ಬೆದರಿಕೆ ಬಗ್ಗೆ ಕಟ್ಟಡದ ಮಾಲೀಕ ವೈ.ವಿ.ಕೃಷ್ಣರಾವ್ ಎಂಬುವರು ದೇವನಹಳ್ಳಿ ಠಾಣೆಗೆ ದೂರು ನೀಡಿದ್ದು, ಅಪರಿಚಿತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ಸ್ಫೋಟವನ್ನು ತಾನೇ ಮಾಡಿರುವುದಾಗಿ ಹೇಳುತ್ತಿರುವ ಅಪರಿಚಿತ, ಮುಂದಿನ ದಿನಗಳಲ್ಲಿ ಇಡೀ ಕಟ್ಟಡವನ್ನು ಸ್ಫೋಟ ಮಾಡುವುದಾಗಿ ಬೆದರಿಸಿದ್ದಾನೆ. ಆ ರೀತಿ ಮಾಡಬಾರದೆಂದರೆ ₹ 50 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ’ ಎಂಬುದಾಗಿ ದೂರಿನಲ್ಲಿ ಕೃಷ್ಣರಾವ್ ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ಕಮಿಷನರ್ ಮುರುಗನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಯೂ ಸ್ಥಳದಲ್ಲಿ ತಪಾಸಣೆ ಮಾಡಿದ್ದಾರೆ. ಕಟ್ಟಡ ಹಾಗೂ ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿ ಭದ್ರತೆ ಕೈಗೊಳ್ಳಲಾಗಿದೆ.

ಆಗಿದ್ದೇನು: ದೇವನಹಳ್ಳಿಯ ಅಕ್ಕಿಪೇಟೆಯಲ್ಲಿ ವಸತಿ ಉದ್ದೇಶಕ್ಕಾಗಿ ಬಹುಮಹಡಿ ಕಟ್ಟಡ ನಿರ್ಮಾಣ ಕೆಲಸ ನಡೆದಿದೆ. ಸೆ. 11ರಂದು ನೆಲಮಹಡಿಯ ಫಿಲ್ಲರ್‌ನಲ್ಲಿ ಅನುಮಾನಾಸ್ಪದ ವಸ್ತುವೊಂದು ಸ್ಫೋಟಗೊಂಡಿತ್ತು. ಅದನ್ನು ಪರಿಶೀಲಿಸಿದ್ದ ಮೇಲ್ವಿಚಾರಕ ವೆಂಕಟೇಶ್, ಮಾಲೀಕರಿಗೆ ವಿಷಯ ತಿಳಿಸಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಯಾರೋ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಸ್ಫೋಟವನ್ನುಂಟು ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿತ್ತು. ಅದರ ಬೆನ್ನಲ್ಲೇ ಕಟ್ಟಡ ನಿರ್ಮಾಣ ಕಚೇರಿಗೆ ಕರೆ ಮಾಡಿದ ಅಪರಿಚಿತ, ‘ಈ ಸ್ಫೋಟ ನಿಮಗೆ ಎಚ್ಚರಿಕೆ. ಕೂಡಲೇ ₹ 50 ಲಕ್ಷ ಹಣ ಕೊಡದಿದ್ದರೆ ಇದಕ್ಕಿಂತಲೂ ದೊಡ್ಡ ಸ್ಫೋಟವೇ ಸಂಭವಿಸುತ್ತದೆ’ ಎಂದು ಬೆದರಿಸಿದ್ದಾನೆ. ಈ ಸಂಗತಿ ದೂರಿನಲ್ಲಿದೆ’ ಎಂದೂ ಪೊಲೀಸರು ಹೇಳಿದರು.

ಗಾಂಜಾ: ಇಬ್ಬರ ಬಂಧನ
ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯ ಕಾಲೇಜೊಂದರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

‘ಚಂದನ್ ಠಾಕೂರ್ (24), ಮುಖೇಶ್ ಸಿಂಗ್ (25) ಬಂಧಿತರು. ಅವರಿಂದ ₹ 2.50 ಲಕ್ಷ ಮೌಲ್ಯದ 5 ಕೆ.ಜಿ ಗಾಂಜಾ, ಪಲ್ಸರ್ ಬೈಕ್, ಮೊಬೈಲ್, ತೂಕದ ಯಂತ್ರ ಜಪ್ತಿ ಮಾಡಲಾಗಿದೆ’ ಎಂದು ಪಶ್ವಿಮ ವಿಭಾಗದ ಡಿಸಿಪಿ ಸಂಜೀವ್‌ ಪಾಟೀಲ ತಿಳಿಸಿದರು. ‘ಲಿಂಗಧೀರನಹಳ್ಳಿ ಡಿ ಗ್ರೂಪ್ ಬಡಾವಣೆ ಬಳಿಯ ಕಾಲೇಜೊಂದರ ಬಳಿ ಆರೋಪಿಗಳು ಶನಿವಾರ ಗಾಂಜಾ ಮಾರುತ್ತಿದ್ದರು. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣವನ್ನೂ ದಾಖಲಿಸಿಕೊಳ್ಳಲಾಗಿದೆ’ ಎಂದೂ ಹೇಳಿದರು.

ಆಟೊ ಚಾಲಕ ಬಂಧನ: ಕಲಾಸಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಆಟೊದಲ್ಲಿ ಗಾಂಜಾ ಮಾರುತ್ತಿದ್ದ ಆರೋಪದಡಿ ಚಾಲಕ ವಿಜಯ್ (24) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆಟೊ ಹಾಗೂ ₹ 70 ಸಾವಿರ ಮೌಲ್ಯದ 1 ಕೆ.ಜಿ 500 ಗ್ರಾಂ ತೂಕದ ಗಾಂಜಾ ಜಪ್ತಿ ಮಾಡಿದ್ದಾರೆ.

₹ 7.65 ಲಕ್ಷ ವಂಚಿಸಿದ ಆನ್‌ಲೈನ್ ವಧು
‘ವೈವಾಹಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಯುವತಿಯೊಬ್ಬರು ಮದುವೆಯಾಗುವುದಾಗಿ ನಂಬಿಸಿ ₹ 7.65 ಲಕ್ಷ ಪಡೆದು ವಂಚಿಸಿದ್ದಾರೆ’ ಎಂದು ಆರೋಪಿಸಿ ಸಾಫ್ಟ್‌ವೇರ್‌ ಎಂಜಿನಿಯರೊಬ್ಬರು ವೈಟ್‌ಫೀಲ್ಡ್‌ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

‘ಮಾರತ್ತಹಳ್ಳಿ ವಿನಾಯಕ್‌ ಲೇಔಟ್ ನಿವಾಸಿಯಾದ 30 ವರ್ಷದ ಎಂಜಿನಿಯರೊಬ್ಬರು ದೂರು ನೀಡಿದ್ದಾರೆ. ಯುವತಿ ಮೈಬೆಲ್ ಎಡ್ವರ್ಡ್ ಹಾಗೂ ಅವರ ಸಂಬಂಧಿಕರು ಎನ್ನಲಾದ ಕ್ರಿಸ್ ಮತ್ತು ಜಿಯೋಲ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮದುವೆ ಪ್ರಸ್ತಾಪ ಮುಂದಿಟ್ಟಿದ್ದ ಯುವತಿ, ಬೆಂಗಳೂರಿನಲ್ಲಿ ಮನೆಯೊಂದನ್ನು ಖರೀದಿಸಲು ನಿರ್ಧರಿಸಿದ್ದಾಗಿ ತಿಳಿಸಿದ್ದರು. ಅದಕ್ಕಾಗಿ ಹಣ ನೀಡುವಂತೆ ಕೇಳಿದ್ದರು. ಅದನ್ನು ನಂಬಿದ್ದ ಟೆಕಿ, ಮಹದೇವಪುರದ ಶಾಪಿಂಗ್ ಮಾಲ್ ಬಳಿ ಆರೋಪಿಗಳಿಗೆ ₹ 95 ಸಾವಿರ ಕೊಟ್ಟಿದ್ದರು. ನಂತರ, ಯುವತಿ ನೀಡಿದ್ದ ಖಾತೆಗೆ ಹಂತ ಹಂತವಾಗಿ ₹6.70 ಲಕ್ಷ ಹಾಕಿದ್ದರು’ ಎಂದರು.

ಎನ್‌95 ಮಾಸ್ಕ್ ಹೆಸರಿನಲ್ಲಿ₹ 1.23 ಕೋಟಿ ವಂಚನೆ
‘ಎನ್‌–95 ಮಾಸ್ಕ್ ಪೂರೈಕೆ ಮಾಡುವುದಾಗಿ ಹೇಳಿದ್ದ ಅಮೆರಿಕದ ಕಂಪನಿಯೊಂದು ₹ 1.23 ಕೋಟಿ ಪಡೆದು ವಂಚಿಸಿದೆ’ ಎಂದು ಆರೋಪಿಸಿ ಟಿ. ಮಂಜುನಾಥ್ ಎಂಬುವರು ಸಿಐಡಿ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದಾರೆ.

ನಕ್ಷತ್ರ ಕ್ರಿಯೆಷನ್ಸ್ ಪ್ರತಿನಿಧಿಯಾದ ಮಂಜುನಾಥ್ ನೀಡಿರುವ ದೂರು ಆಧರಿಸಿ, ಅಮೆರಿಕದ ಜಾರ್ಜ್ ಹೌಂಗ್, ಜಾನ್ ವಾಂಗ್ ಹಾಗೂ ರೈನ್ ಫಿಲಿಪ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ಜಾಲತಾಣದ ಮೂಲಕ ಜುಲೈ 16ರಂದು ಅಮೆರಿಕದ ಮೆಡಿ ಫಾರ್ಮಾ ಕಂಪನಿ ಸಂಪರ್ಕಿಸಲಾಗಿತ್ತು. ಕಂಪನಿ ಪ್ರತಿನಿಧಿಗಳ ಸೋಗಿನಲ್ಲಿ ಇ–ಮೇಲ್ ಮೂಲಕ ಪ್ರತಿಕ್ರಿಯಿಸಿದ್ದ ಆರೋಪಿಗಳು, ₹ 4.95 ಕೋಟಿ ಪಾವತಿಸಿದರೆ 4 ಲಕ್ಷ ಎನ್‌95 ಮಾಸ್ಕ್‌ ನೀಡುವುದಾಗಿ ಹೇಳಿದ್ದರು. ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನೂ ಕಳುಹಿಸಿದ್ದರು. ಅದನ್ನು ನಂಬಿ ಮುಂಗಡವಾಗಿ ಆರೋಪಿಗಳು ನೀಡಿದ್ದ ಬ್ಯಾಂಕ್ ಖಾತೆಗೆ ₹ 1.23 ಕೋಟಿ ಜಮೆ ಮಾಡಲಾಗಿತ್ತು’ ಎಂದು ದೂರಿನಲ್ಲಿ ಮಂಜುನಾಥ್ ತಿಳಿಸಿದ್ದಾರೆ.

‘ಹಣ ತಲುಪಿದ ನಂತರ ಆರೋಪಿಗಳು ಮಾಸ್ಕ್ ಪೂರೈಸಿಲ್ಲ. ಹಣವನ್ನೂ ವಾಪಸು ಕೊಡುತ್ತಿಲ್ಲ’ ಎಂದೂ ಅವರು ಹೇಳಿದ್ದಾರೆ.

‘ತಂಗಿ ಆತ್ಮಹತ್ಯೆಗೆ ಕಾರಣವೆಂದು ಭಾವನನ್ನೇ ಕೊಂದ’
ಬೆಂಗಳೂರು:
ಕಾಡುಗೋಡಿ ವೀರಸ್ವಾಮಿ ಲೇಔಟ್‌ನಲ್ಲಿ ರಾಜೇಶ್ (35) ಎಂಬುವರನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಜಾನ್‌ಪಾಲ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

‘ಸೈನಿಕನಾದ ಆರೋಪಿ ಜಾನ್‌ಪಾಲ್, ಭಾನುವಾರ ಬೆಳಿಗ್ಗೆ 11.30ರ ಸುಮಾರಿಗೆ ಸ್ನೇಹಿತನ ಜೊತೆ ರಾಜೇಶ್ ಮನೆಗೆ ಬಂದು ಕತ್ತು ಕೊಯ್ದು ಪರಾರಿಯಾಗಿದ್ದ. ತೀವ್ರ ರಕ್ತಸ್ರಾವವಾಗಿ ರಾಜೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಸದ್ಯ ಜಾನ್‌ಪಾಲ್‌ ಅವರನ್ನು ಬಂಧಿಸಲಾಗಿದ್ದು, ಸ್ನೇಹಿತ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಕೆಜಿಎಫ್‌ನ ರಾಜೇಶ್, ಎಚ್‌ಎಎಲ್ ಉದ್ಯೋಗಿ. ಏಳು ವರ್ಷಗಳ ಹಿಂದೆ ಜಾನ್‌ಪಾಲ್‌ ಅವರ ತಂಗಿ ಜಾಸ್ಮಿನ್ ಅವರನ್ನು ರಾಜೇಶ್ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕೌಟುಂಬಿಕ ಕಲಹದಿಂದಾಗಿ ಜಾಸ್ಮಿನ್ ಇತ್ತೀಚೆಗೆ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.’

‘ಪತಿ ರಾಜೇಶ್ ಕಿರುಕುಳದಿಂದ ಜಾಸ್ಮಿನ್ ಮೃತಪಟ್ಟಿರುವುದಾಗಿ ಠಾಣೆಗೆ ಪೋಷಕರು ದೂರು ನೀಡಿದ್ದರು. ಇತ್ತೀಚೆಗೆ ರಜೆ ಮೇಲೆ ಊರಿಗೆ ಬಂದಿದ್ದ ಜಾನ್‌ಪಾಲ್, ತಮ್ಮ ತಂಗಿ ಆತ್ಮಹತ್ಯೆಗೆ ರಾಜೇಶ್ ಕಾರಣವೆಂದು ತಿಳಿದು ಈ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT