ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಶಾಲೆಗೆ ಶುಲ್ಕದ ಬರೆ

ವಿದ್ಯಾರ್ಥಿಗಳಿಗೆ ಶುಲ್ಕ ಹೆಚ್ಚುವ ಆತಂಕ: ಕಟ್ಟಡಗಳ ಮೌಲ್ಯ ಆಧರಿಸಿ ₹ 50 ಲಕ್ಷದವರೆಗೂ ಕರ
Last Updated 19 ನವೆಂಬರ್ 2021, 19:45 IST
ಅಕ್ಷರ ಗಾತ್ರ

ಬೆಂಗಳೂರು: ಆರ್ಥಿಕ ಸಂಕಷ್ಟದ ಸುಳಿಯಲ್ಲಿರುವ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಮೇಲೆ ಈಗ ಕಟ್ಟಡಗಳ ಮೌಲ್ಯಮಾಪನದ ಶುಲ್ಕದ ಭಾರ ಬೀಳುತ್ತಿದೆ. ಶಾಲಾ ಕಟ್ಟಡಗಳ ಸುಸ್ಥಿರತೆ ಪ್ರಮಾಣಪತ್ರ ಪಡೆಯಲು ಆಯಾ ಕಟ್ಟಡದ ಒಟ್ಟು ಮೌಲ್ಯದ ಶೇಕಡ 0.5ರಷ್ಟು ಮೌಲ್ಯಮಾಪನ ಶುಲ್ಕ ಪಾವತಿಸಬೇಕೆಂದು ಲೋಕೋಪಯೋಗಿ ಇಲಾಖೆ ಸುತ್ತೋಲೆ ಹೊರಡಿಸಿದೆ.

ಶಾಲಾ ಆಡಳಿತ ಮಂಡಳಿಗಳು ಕಟ್ಟಡದ ಮೌಲ್ಯದ ಶೇ 0.5ರಷ್ಟು ಎಂಜಿನಿಯರಿಂಗ್‌ ಶುಲ್ಕವನ್ನು ಅರ್ಜಿಯ ಜತೆಗೆ ಪಾವತಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಹಳೆಯ ಮತ್ತು ಹೊಸ ಎರಡೂ ಬಗೆಯ ಕಟ್ಟಡಗಳಿಗೆ ಈ ಶುಲ್ಕ ಅನ್ವಯವಾಗುತ್ತದೆ.

‘ಕಟ್ಟಡಗಳ ಮೌಲ್ಯವನ್ನು ಆಧರಿಸಿ ₹ 10 ಲಕ್ಷದಿಂದ ₹ 50 ಲಕ್ಷದವರೆಗೂ ಎಂಜಿನಿಯರಿಂಗ್‌ ಶುಲ್ಕ ಪಾವತಿಸಬೇಕಾಗುತ್ತದೆ. ಬಾಡಿಗೆ ಕಟ್ಟಡದಲ್ಲಿ ಶಾಲೆ ನಡೆಯುತ್ತಿದ್ದರೂ ಸುಸ್ಥಿರತೆ ಪ್ರಮಾಣಪತ್ರ ಪಡೆಯಬೇಕು. ಆಗಲೂ ಇಷ್ಟೇ ಶುಲ್ಕ ಪಾವತಿಸಬೇಕು’ ಎನ್ನುತ್ತಾರೆ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಪ್ರತಿನಿಧಿಗಳು.

‘ಸರ್ಕಾರದ ಇಂತಹ ಕ್ರಮಗಳು ಖಾಸಗಿ ಶಾಲೆಗಳು ವಿಪರೀತವಾಗಿ ಶುಲ್ಕ ಹೆಚ್ಚಿಸುವುದಕ್ಕೆ ಎಡೆಮಾಡುತ್ತವೆ. ಸದ್ಯ ಖಾಸಗಿ ಶಾಲೆಗಳು ಹೊಸದಾಗಿ ಶುಲ್ಕ ಸಂಗ್ರಹಿಸಲು ಅಥವಾ ಶುಲ್ಕ ಹೆಚ್ಚಳ ಮಾಡಲು ಅವಕಾಶಗಳಿಲ್ಲ. ಆದರೆ, ಕಟ್ಟಡದ ಸುಸ್ಥಿರತೆ ಪ್ರಮಾಣಪತ್ರಕ್ಕೆ ದೊಡ್ಡ ಪ್ರಮಾಣದ ಶುಲ್ಕ ಪಾವತಿಸಬೇಕೆಂಬ ಸೂಚನೆಗಳು ಶೈಕ್ಷಣಿಕ ಶುಲ್ಕ ಹೆಚ್ಚಿಸಬೇಕಾದ ಒತ್ತಡ ಸೃಷ್ಟಿಸುತ್ತವೆ’ ಎಂದು ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಆಡಳಿತ ಮಂಡಳಿಗಳ ಅಸೋಸಿಯೇಷನ್‌ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ಹೇಳಿದರು.

ಕೋವಿಡ್‌ ಸಾಂಕ್ರಾಮಿಕ ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟಿನಿಂದ ಕೆಲವು ಶಾಲೆಗಳ ಮಾಲೀಕರು ಜೀವನವನ್ನೇ ಅಂತ್ಯಗೊಳಿಸಿಕೊಂಡಿದ್ದಾರೆ. ಕೆಲವರು ಶಾಲೆಗಳನ್ನು ಮುಚ್ಚಿದ್ದಾರೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ಈ ಆದೇಶವನ್ನು ಒಪ್ಪುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದರು.

ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಇಲಾಖೆ ಪ್ರಧಾನಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿರುವ ಅಸೋಸಿಯೇಷನ್‌, ಸುತ್ತೋಲೆಯನ್ನು ಹಿಂಪಡೆಯುವಂತೆ ಆಗ್ರಹಿಸಿದೆ. ಸರ್ಕಾರಿ ಶಾಲೆಗಳನ್ನು ಈ ಸುತ್ತೋಲೆಯಿಂದ ಹೊರಗಿಟ್ಟಿರುವ ಬಗ್ಗೆಯೂ ಆಕ್ಷೇಪವನ್ನು ದಾಖಲಿಸಿದೆ. ‘ಸುರಕ್ಷತಾ ಕ್ರಮಗಳು ಖಾಸಗಿ ಶಾಲೆಗಳಿಗೆ ಮಾತ್ರ ಅನ್ವಯವಾಗುತ್ತವೆಯೆ?’ ಎಂದು ಪ್ರಶ್ನಿಸಿದೆ.

ನೋಂದಾಯಿತ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಅಸೋಸಿಯೇಷನ್‌ ಕೂಡ ಈ ಸುತ್ತೋಲೆ ಪ್ರಶ್ನಿಸಿ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಿದೆ. ಸುತ್ತೋಲೆಯನ್ನು ಹಿಂಪಡೆದು, ಯಾವುದೇ ಷರತ್ತುಗಳಿಲ್ಲದೇ ಶಾಲಾ ಕಟ್ಟಡಗಳಿಗೆ ಸುಸ್ಥಿರತೆ ಪ್ರಮಾಣಪತ್ರ ಒದಗಿಸುವಂತೆ ಒತ್ತಾಯಿಸಿದೆ.

‘ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಮಾತ್ರ ಸುರಕ್ಷತೆ ಮತ್ತು ಭದ್ರತೆ ಬೇಕು, ಸರ್ಕಾರಿ ಶಾಲೆಗಳಲ್ಲಿ ಓದುವವರಿಗೆ ಬೇಡ ಎಂಬರ್ಥದಲ್ಲಿ ಸುತ್ತೋಲೆ ಹೊರಡಿಸಲಾಗಿದೆ. ಈ ರೀತಿಯ ಸುತ್ತೋಲೆಗಳು ಖಾಸಗಿ ಶಿಕ್ಷಣ ಸಂಸ್ಥೆಗಳು ಬಾಗಿಲು ಮುಚ್ಚಲು ಕಾರಣವಾಗುತ್ತವೆ’ ಎಂದು ಅಸೋಸಿಯೇಷನ್‌ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT