ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷ್ಕರಕ್ಕೆ ತಟ್ಟೆ–ಲೋಟದ ಸದ್ದು: ಕುಟುಂಬ ಸಮೇತ ನೌಕರರ ಪ್ರತಿಭಟನೆ

ವಜಾ ಶಿಕ್ಷೆ–ಮನವೊಲಿಕೆಗೆ ಸರ್ಕಾರ ಕಸರತ್ತು
Last Updated 12 ಏಪ್ರಿಲ್ 2021, 21:21 IST
ಅಕ್ಷರ ಗಾತ್ರ

ಬೆಂಗಳೂರು:ಸರ್ಕಾರದ ಬೆದರಿಕೆ–ಮನವೊಲಿಕೆಗೆ ಮಣಿಯದೇ ಆರು ದಿನಗಳಿಂದ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರು ಸೋಮವಾರ ತಮ್ಮ ಹೋರಾಟ ತೀವ್ರಗೊಳಿಸಿದರು. ರಾಜ್ಯದ ಆಯಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ನೌಕರರು ತಟ್ಟೆ, ಲೋಟ ಬಡಿದು ಪ್ರತಿಭಟಿಸಿದರು.

ಐದು ದಿನಗಳಿಂದ ಕೆಲಸಕ್ಕೆ ಹಾಜರಾಗದೆ ಪ್ರತಿರೋಧ ತೋರಿದ್ದ ನೌಕರರು, ಎಲ್ಲ ಜಿಲ್ಲೆ ಮತ್ತು ತಾಲ್ಲೂಕು ಆಡಳಿತದ ಕಚೇರಿ ಎದುರು ಕುಟುಂಬ ಸಮೇತರಾಗಿ ಬಂದು ಪ್ರತಿಭಟಿಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 6ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವಂತೆ ಒತ್ತಾಯಿಸಿದರು.

ರಾಜಧಾನಿಯಲ್ಲಿ ಪ್ರತಿಭಟಿಸಲು ಮುಂದಾಗಿದ್ದ 50ಕ್ಕೂ ಹೆಚ್ಚು ನೌಕರರನ್ನು ವಶಕ್ಕೆ ಪಡೆದ ಪೊಲೀಸರು ಸಂಜೆಯ ವೇಳೆಗೆ ಬಿಡುಗಡೆಗೊಳಿಸಿದರು.

ನಾಲ್ಕೂ ನಿಗಮಗಳಿಂದ ನೂರಾರು ನೌಕರರು ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿದರು. ಆದರೆ, ಪ್ರತಿಭಟನೆಗೆ ಅನುಮತಿ ಪಡೆದಿರಲಿಲ್ಲ ಎಂಬ ಕಾರಣ ನೀಡಿ ಪೊಲೀಸರು ಹಲವು ನೌಕರರ ವಿರುದ್ಧ ಪ್ರಕರಣ ದಾಖಲಿಸಿದರು.

ವಿಷ ಸೇವಿಸಿದ ನೌಕರ:ಹಾಸನದಲ್ಲಿ ಸಾರಿಗೆ ನೌಕರರೊಬ್ಬರು ಬಸ್‌ ನಿಲ್ದಾಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು.ಹಾಸನ–ಚಿಕ್ಕಮಗಳೂರು ಸಾರಿಗೆ ನೌಕರರ ಸಹಕಾರಿ ಪತ್ತಿನ ಸಂಘದ ಉಪಾಧ್ಯಕ್ಷ ಪಾಲಾಕ್ಷ (40) ವಿಷ ಸೇವಿಸಿದವರು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ.

‘ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು. ನಮ್ಮನ್ನು ವರ್ಗಾವಣೆ ಮಾಡಿ ಎಫ್ಐಆರ್‌ ಹಾಕಿದ್ದಾರೆ. ಅನಂತಸುಬ್ಬರಾವ್‌ ಅವರಿಂದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಈ ಸರ್ಕಾರಕ್ಕೆ ಕಣ್ಣಿಲ್ಲ’ಎಂದು ಪಾಲಾಕ್ಷ ಆರೋಪಿಸಿದರು.

ಕೆಲಸಕ್ಕೆ ಬಂದವರಿಗೆ ವೇತನ:ಇತ್ತ, ಸರ್ಕಾರ ಕೂಡ ಮುಷ್ಕರದ ತೀವ್ರತೆ ತಗ್ಗಿಸಲು, ನೌಕರರು ಕೆಲಸಕ್ಕೆ ಮರಳುವಂತೆ ಮಾಡಲು ನಾನಾ ಕಸರತ್ತುಗಳನ್ನು ಮುಂದುವರಿಸಿದೆ.

ನಾಲ್ಕು ನಿಗಮಗಳಲ್ಲಿ ತರಬೇತಿ ನೌಕರರ ವಜಾ ಮತ್ತು ಕೆಲವರು ವರ್ಗಾವಣೆ ಕ್ರಮ ಕೈಗೊಂಡಿದ್ದರೆ, ಕೆಲಸಕ್ಕೆ ಹಾಜರಾದ 10,430 ಚಾಲಕ–ನಿರ್ವಾಹಕರಿಗೆ ಮಾತ್ರ ಮಾರ್ಚ್‌ ತಿಂಗಳ ವೇತನ ಪಾವತಿಸುವ ಮೂಲಕ ಉಳಿದವರ ಮನವೊಲಿಸುವ ಕಾರ್ಯವನ್ನೂ ಮಾಡುತ್ತಿದೆ.

55 ವರ್ಷ ಮೇಲ್ಪಟ್ಟವರು ವೈದ್ಯಕೀಯ ಮತ್ತು ದೈಹಿಕ ಕ್ಷಮತೆಯ ಪ್ರಮಾಣಪತ್ರ ನೀಡಲು ಸೋಮವಾರ ಕೊನೆಯ ದಿನ ಎಂದು ಬಿಎಂಟಿಸಿ ಹೇಳಿತ್ತು. ಹೀಗೆ ಪ್ರಮಾಣಪತ್ರ ನೀಡಲು ಬಂದ ಅನೇಕ ಹಿರಿಯ ನೌಕರರ ಮನವೊಲಿಸಿ ಕರ್ತವ್ಯಕ್ಕೆ ನಿಯೋಜಿಸಲಾಯಿತು.

ಉಳಿದ ನಿಗಮಗಳ ಉನ್ನತ ಅಧಿಕಾರಿಗಳೂ ಹಲವು ನೌಕರರ ಮನವೊಲಿಸಿ, ಕರ್ತವ್ಯಕ್ಕೆ ಹಾಜರು ಪಡಿಸಲು ಯಶಸ್ವಿಯಾದರು. ಇದರಿಂದ ರಾಜ್ಯದಲ್ಲಿ 3,200ಕ್ಕೂ ಹೆಚ್ಚು ಸರ್ಕಾರಿ ಬಸ್‌ಗಳು ಕಾರ್ಯಾಚರಣೆ ನಡೆಸಲು ಸಾಧ್ಯವಾಯಿತು.

‘ತಟ್ಟೆ ಹಿಡಿದು ಭಿಕ್ಷಾಟನೆ’

‘ಮುಷ್ಕರ ಪ್ರಾರಂಭವಾಗಿ ಆರು ದಿನ ಕಳೆದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಸಾರಿಗೆ ನೌಕರರು ಮತ್ತು ಕುಟುಂಬದವರು ಮಂಗಳವಾರ (ಏ.13) ತಟ್ಟೆ ಹಿಡಿದು ಭಿಕ್ಷಾಟನೆ ನಡೆಸುವ ಮೂಲಕ ಪ್ರತಿಭಟಿಸಲಿದ್ದಾರೆ’ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

‘ಮುಷ್ಕರ ನಿರತ ನೌಕರರ ದುಡಿಮೆಯ ಫಲವಾದ ವೇತನವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಇದನ್ನು ಖಂಡಿಸಿ, ಯುಗಾದಿ ದಿನವೇ ಭಿಕ್ಷಾಟನೆ ಮಾಡಲಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ನಮಗೆ ಪರಿಹಾರ ದೊರೆಯುವರೆಗೂ ಮುಷ್ಕರ ಕೈಬಿಡುವ ಪ್ರಶ್ನೆಯೇ ಇಲ್ಲ’ ಎಂದೂ ಅವರು ತಿಳಿಸಿದರು.

‘ಸರ್ಕಾರದ ವಿರುದ್ಧ ಮೊಕದ್ದಮೆ’

‘ಮುಷ್ಕರ ನಿರತ ನೌಕರರ ವೇತನ ತಡೆಹಿಡಿದಿರುವ ರಾಜ್ಯ ಸರ್ಕಾರದ ಕೃತ್ಯ ಸಂವಿಧಾನ ವಿರೋಧಿಯಾಗಿದ್ದು, ಈ ಸಂಬಂಧ ಮಂಗಳವಾರ(ಏ.13) ಸರ್ಕಾರದ ವಿರುದ್ಧವೇ ಸೆಕ್ಷನ್ 406 ಅಡಿ ದೂರು ಸಲ್ಲಿಸಿ, ಪ್ರಮುಖರ ವಿರುದ್ಧ ಮೊಕದ್ದಮೆ ಹೂಡಲಾಗುವುದು’ ಎಂದು ಹಿರಿಯ ವಕೀಲ ಎಸ್. ಬಾಲನ್ ಹೇಳಿದರು.

‘ಕಾರ್ಮಿಕರ ಸಂಖ್ಯೆ ಒಂದು ಸಾವಿರ ಇದ್ದಲ್ಲಿ ಪ್ರತಿ ತಿಂಗಳ 10ನೆ ತಾರೀಖು ಒಳಗಾಗಿ ವೇತನ ಪಾವತಿ ಮಾಡಬೇಕು ಎನ್ನುವ ಕಾನೂನೇ ಇದೆ. ಆದರೆ, ಸಾರಿಗೆ ನೌಕರರ ವಿಷಯದಲ್ಲಿ ಈ ಕಾನೂನು ಸ್ಪಷ್ಟವಾಗಿ ಉಲ್ಲಂಘನೆ ಮಾಡಲಾಗಿದೆ’ ಎಂದರು.

‘ಯಾವುದೇ ಪ್ರತಿಭಟನೆ, ಧರಣಿ ನಡೆಸಿದರೂ ಪೊಲೀಸರು ಮಧ್ಯ ಪ್ರವೇಶಿಸಿ ಬಂಧಿಸುವಂತಿಲ್ಲ. ಮೂರು ವರ್ಷಕ್ಕಿಂತ ಅಧಿಕ ಜೈಲು ಶಿಕ್ಷೆಯ ಅಪರಾಧ ಇದ್ದಲ್ಲಿ ಮಾತ್ರವೇ ಸೆಕ್ಷನ್ 188 ಅಡಿ ಮೊಕದ್ದಮೆಯೂ ದಾಖಲಿಸಬೇಕು’ ಎಂದೂ ಹೇಳಿದರು.

ಮಾರ್ಚ್‌ ತಿಂಗಳ ವೇತನ ಪಡೆದವರು

ನಿಗಮ; ನೌಕರರ ಸಂಖ್ಯೆ

ಕೆಎಸ್‌ಆರ್‌ಟಿಸಿ;4,256

ಬಿಎಂಟಿಸಿ;960

ಎನ್‌ಡಬ್ಲ್ಯುಆರ್‌ಟಿಸಿ; 1,837

ಎನ್‌ಇಕೆಆರ್‌ಟಿಸಿ;3,377

ಸೋಮವಾರ ಕಾರ್ಯಾಚರಣೆ ನಡೆಸಿದ ಬಸ್‌ಗಳ ವಿವರ

ಕೆಎಸ್‌ಆರ್‌ಟಿಸಿ;1,588

ಬಿಎಂಟಿಸಿ;452

ಎನ್‌ಇಕೆಆರ್‌ಟಿಸಿ;700

ಎನ್‌ಡಬ್ಲ್ಯುಕೆಆರ್‌ಟಿಸಿ; 495

ಒಟ್ಟು;3,235

ತೆರಿಗೆ ಪಾವತಿಗೆ ಅವಧಿ ವಿಸ್ತರಣೆ

ಪ್ರಯಾಣಿಕ ವಾಹನಗಳ ತೆರಿಗೆ ಪಾವತಿ ಅವಧಿಯನ್ನು ರಾಜ್ಯ ಸರ್ಕಾರ ವಿಸ್ತರಿಸಿದೆ.

ಮೋಟಾರು ವಾಹನ ತೆರಿಗೆಯನ್ನು ದಂಡರಹಿತವಾಗಿ ಪಾವತಿಸಲು ಏ.30 ಕೊನೆಯ ದಿನ. ಈ ಮೊದಲು ಏ.15ರೊಳಗೇ ಪಾವತಿಸಬೇಕಿತ್ತು.

ರಾಜ್ಯದ ಎಲ್ಲ ನೋಂದಾಯಿತ ಸಾರಿಗೆ ಪ್ರಯಾಣಿಕ ವಾಹನಗಳಿಗೆ (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಇದು ಅನ್ವಯಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT