ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ದುರಂತ: ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ಪಳವಳ್ಳಿ ಕಟ್ಟೆ ಬಳಿ ಅಪಘಾತ: ಗಾಯಾಳುಗಳಿಗೆ ಉಚಿತ ಚಿಕಿತ್ಸೆ
Last Updated 21 ಮಾರ್ಚ್ 2022, 19:45 IST
ಅಕ್ಷರ ಗಾತ್ರ

ತುಮಕೂರು: ಪಾವಗಡ ತಾಲ್ಲೂಕು ಪಳವಳ್ಳಿ ಕಟ್ಟೆ ಬಳಿ ಖಾಸಗಿ ಬಸ್ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಪಿಯುಸಿ ವಿದ್ಯಾರ್ಥಿಗಳ ಭವಿಷ್ಯ ಮಸುಕಾಗಿದೆ.

ಪ್ರಥಮ ಪಿಯುಸಿಯ ಆರು ಹಾಗೂ ದ್ವಿತೀಯ ಪಿಯುಸಿಯ 12 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 18 ವಿದ್ಯಾರ್ಥಿಗಳು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಪ್ರಥಮ ಪಿಯು ಪರೀಕ್ಷೆ ಇದೇ 28 ರಿಂದ ಆರಂಭವಾಗಲಿದ್ದು, ದ್ವಿತೀಯ ಪಿಯು ಪರೀಕ್ಷೆ ಏಪ್ರಿಲ್ 22ರಿಂದ ನಡೆಯಲಿದೆ. ದ್ವಿತೀಯ ಪಿಯು ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿದ್ದು ಪರೀಕ್ಷೆ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ.

ಅಪಘಾತದಲ್ಲಿ ಈಗಾಗಲೇ ಪ್ರಥಮ ಪಿಯು ಓದುತ್ತಿದ್ದಸಹೋದರಿಯರಾದ ಪೋತಗಾನಹಳ್ಳಿ ಗ್ರಾಮದ ಅಮೂಲ್ಯಾ, ಹರ್ಷಿತಾ ಜೊತೆಗೆ ಹನುಮಂತರಾಯಪ್ಪ ಸಾವನ್ನಪ್ಪಿದ್ದಾರೆ.

ಗಾಯಾಳುಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಆರೋಗ್ಯ ಸಚಿವರು ಸೋಮವಾರ ಭರವಸೆ ನೀಡಿದ್ದಾರೆ. ಬೆಂಗಳೂರಿನವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದ್ವಿತೀಯ ಪಿಯು ವಿದ್ಯಾರ್ಥಿ ಮಹೇಂದ್ರ ಅವರಿಗೆ ಬೆನ್ನು ಮೂಳೆ ಮುರಿದಿದ್ದು, ಸ್ಥಿತಿ ಗಂಭೀರವಾಗಿದೆ. ಸಚಿವರ ಭರವಸೆ ನಂತರ ಉಚಿತವಾಗಿ ಚಿಕಿತ್ಸೆ ಸಿಗುತ್ತಿದೆ ಎಂದು ಅವರ ತಂದೆ ಸೀನಪ್ಪ ತಿಳಿಸಿದರು.

‘ಶಸ್ತ್ರಚಿಕಿತ್ಸೆ ನಂತರ ಚೇತರಿಸಿಕೊಳ್ಳಲು ಇನ್ನೂ ಕೆಲವು ತಿಂಗಳುಗಳೇ ಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಈ ಬಾರಿ ಪರೀಕ್ಷೆ ಬರೆಯಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಗುಣಮುಖರಾಗಿ ಓಡಾಡುವಂತಾದ ನಂತರ ಪರೀಕ್ಷೆ ಬಗ್ಗೆ ಯೋಚಿಸಬೇಕಿದೆ. ಅದಕ್ಕೆ ಸರ್ಕಾರ ಅವಕಾಶ ನೀಡಿದರೆ ಮಾತ್ರ ಸಹಾಯವಾಗಲಿದೆ. ತಡವಾಗಿದೆ ಎಂಬ ಕಾರಣ ನೀಡಿ ಪರೀಕ್ಷೆ ನಿರಾಕರಿಸಿದರೆ ಮತ್ತೆ ಒಂದು ವರ್ಷ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.

ಝಾನ್ಸಿ, ದಿನೇಶ್, ಹೇಮಂತಕುಮಾರ್, ಪ್ರಶಾಂತ್, ಸಿರಿ, ಶ್ರುತಿ, ಮಧು, ಯಶವಂತ್ ಸೇರಿದಂತೆ 12 ವಿದ್ಯಾರ್ಥಿಗಳು ಪಾವಗಡ, ತುಮಕೂರು, ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಹುತೇಕರಿಗೆ ಕೈ, ಕಾಲು, ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಪರೀಕ್ಷೆ ವೇಳೆಗೆ ಚೇರಿಸಿಕೊಳ್ಳುವುದು ಅನುಮಾನ ಎಂದು ಅವರ ಪೋಷಕರು ಹೇಳುತ್ತಾರೆ.

ಪ್ರಥಮ ಪಿಯು ವಿದ್ಯಾರ್ಥಿನಿ ಭೂಮಿಕಾ ಕೈಗೆ ತೀವ್ರ ಪೆಟ್ಟಾಗಿದೆ. ಸದ್ಯಕ್ಕೆ ಚೇತರಿಕೆ ಕಷ್ಟಕರ ಎಂದು ವೈದ್ಯರು ಹೇಳಿದ್ದಾರೆ. ರಂಜಿತ್, ಗೌತಮಿ, ಯಶವಂತ್ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾದ ನಂತರ ಪರೀಕ್ಷೆ ಬಗ್ಗೆ ಯೋಚಿಸಬೇಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಪರೀಕ್ಷೆ ಬರೆಯುವುದು ಕಷ್ಟಕರ ಎಂದು ಅವರ ಪೋಷಕರು ನೋವು ತೋಡಿಕೊಂಡರು.

‘ಭೂಮಿಕಾ ಎಡಗೈಗೆ ಎರಡು ಬಾರಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆದರೂ ಸಂಪೂರ್ಣವಾಗಿ ಚೇತರಿಸಿಲ್ಲ. ಪೊಲೀಸ್ ಅಧಿಕಾರಿ ಆಗಬೇಕೆಂಬ ಆಸೆ ಆಕೆಗಿತ್ತು. ಇದೀಗ ಎಡಗೈ ಸಂಪೂರ್ಣ ನಜ್ಜುಗುಜ್ಜಾಗಿದೆ. ಶಾಶ್ವತ ಅಂಗವಿಕಲೆಯಾದರೆ ಭವಿಷ್ಯ ಹೇಗೆ ಎಂಬ ಆತಂಕ ಕಾಡುತ್ತದೆ’ ಎನ್ನುತ್ತಾರೆ ಕುಟುಂಬದ ಸದಸ್ಯ ನರಸಿಂಹ.

‘ತಲೆಗೆ ಗಾಜು ಚುಚ್ಚಿಕೊಂಡಿತ್ತು. ಹೊಲಿಗೆ ಹಾಕಿಸಲಾಗಿದೆ. ಆಸ್ಪತ್ರೆಯಿಂದ ಮಗ ಮರಳಿ ಮನೆಗೆ
ಬರುತ್ತಿದ್ದಾನೆ. ಆದರೆ ಸುಸ್ತು ಕಡಿಮೆಯಾಗಿಲ್ಲ. ಮುಂದಿನ ಶಿಕ್ಷಣದ ಬಗ್ಗೆ ಆತಂಕ ಇದೆ’ ಎಂದು ಚಿಕ್ಕಹಳ್ಳಿ ಹೇಮಂತಕುಮಾರ್ ತಾಯಿ ಜಯಮ್ಮ ತಿಳಿಸಿದರು.

‘ಗಾಯಾಳುಗಳ ಪಟ್ಟಿ ತರಿಸಿಕೊಳ್ಳುತ್ತಿದ್ದೇವೆ. ಮುಂದೆ ಏನು ಮಾಡಬೇಕು ಎಂಬ ಬಗ್ಗೆ ನಿರ್ಧರಿಸಲಾಗುವುದು’ ಎಂದು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಂಗಾಧರ್ ಪ್ರತಿಕ್ರಿಯಿಸಿದರು.

ಟಾಪ್‌ ಪ್ರಯಾಣ: ತಪಾಸಣೆ ತೀವ್ರ
ಖಾಸಗಿ ಬಸ್ ಅಪಘಾತದ ನಂತರ ಬಸ್‌ಗಳು ಸೇರಿದಂತೆ ಇತರ ವಾಹನಗಳ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. ಪೊಲೀಸ್, ಸಾರಿಗೆ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಬಸ್ ಪರ್ಮಿಟ್, ಚಾಲನಾ ಪರವಾನಗಿ ಪತ್ರ ಸೇರಿದಂತೆ ಅಗತ್ಯ ದಾಖಲೆ ಪರಿಶೀಲಿಸುತ್ತಿದ್ದಾರೆ. ದಾಖಲೆ ಇಲ್ಲದ ವಾಹನಗಳಿಗೆ ದಂಡ ವಿಧಿಸುತ್ತಿದ್ದಾರೆ.

ಪಾವಗಡ ತಾಲ್ಲೂಕು ನಾಗಲಮಡಿಕೆ ಬಳಿ ಸೋಮವಾರ ಬಸ್‌ ಮೇಲೆ ಜನರನ್ನು ಹತ್ತಿಸಿಕೊಂಡು ಬರುತ್ತಿದ್ದ ಬಸ್ ತಡೆದಿದ್ದಾರೆ. ಜನರನ್ನು ಕೆಳಗಿಸಿ ಕಳುಹಿಸಿದ್ದಾರೆ. ಆದರೆ, ಪೊಲೀಸರು ಬೇರೆ ಬಸ್ ವ್ಯವಸ್ಥೆ ಮಾಡದೆ ಪರದಾಡಬೇಕಾಯಿತು ಎಂದು ವಿದ್ಯಾರ್ಥಿ ನಾಗರಾಜ ಪ್ರತಿಕ್ರಿಯಿಸಿದರು.

ಕೆಎಸ್‌ಆರ್‌ಟಿಸಿ ಬಸ್ ಸಂಖ್ಯೆ ಹೆಚ್ಚಳ: ಪಾವಗಡ ಬಳಿಯ ಅಪಘಾತದ ನಂತರ ಕೆಎಸ್‌ಆರ್‌ಟಿಸಿ ಬಸ್‌ ಓಡಾಟ ಸಂಖ್ಯೆ ಹೆಚ್ಚಿಸಲಾಗಿದೆ. ಪಾವಗಡ– ವೈ.ಎನ್. ಹೊಸಕೋಟೆ ನಡುವೆ ಹೆಚ್ಚುವರಿಯಾಗಿ 8 ಬಸ್‌ ಸಂಚರಿಸುತ್ತಿವೆ. ಅಪಘಾತಕ್ಕೂ ಮೊದಲು ಈ ಮಾರ್ಗದಲ್ಲಿ 14 ಟ್ರಿಪ್‌ ಸಂಚರಿಸುತ್ತಿದ್ದವು. ಈಗ 48 ಟ್ರಿಪ್‌ ಓಡಾಡುತ್ತಿವೆ.

ತಾತ್ಕಾಲಿಕವಾಗಿ ಬಸ್ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಬಸ್‌ಗಳ ಸಂಚಾರದ ಬಗ್ಗೆ ನಿರ್ಧರಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿವೆ.

**

ತಲಾ ₹ 25 ಲಕ್ಷ ಪರಿಹಾರಕ್ಕೆ ಒತ್ತಾಯ
ಬೆಂಗಳೂರು:
ಪಾವಗಡ ತಾಲ್ಲೂಕಿನ ಪಳವಳ್ಳಿ ಕಟ್ಟೆ ಬಳಿ ಶನಿವಾರ ಬಸ್‌ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ₹ 25 ಲಕ್ಷ ಪರಿಹಾರ ನೀಡುವಂತೆ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್‌ ಒತ್ತಾಯಿಸಿದರು.

ವಿಧಾನಸಭೆಯಲ್ಲಿ ಸೋಮವಾರ ಶೂನ್ಯ ವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಅವರು, ‘ಖಾಸಗಿ ಬಸ್‌ಗಳಿಗೆ ನೀಡಿರುವ ಪರವಾನಗಿ ರದ್ದು ಪಡಿಸುತ್ತೇವೆ ಎಂದು ಈ ಅವಘಡದ ಬಳಿಕ ಸಾರಿಗೆ ಸಚಿವರು ಹೇಳಿದ್ದಾರೆ. ಈ ಪ್ರದೇಶದಲ್ಲಿ 150ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದವು. ಪರವಾನಗಿ ನವೀಕರಿಸದ ಕಾರಣ ಅವುಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆ ಆಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯೂ ಇಲ್ಲಿ ಬಸ್‌ ಸೌಕರ್ಯ ಕಲ್ಪಿಸಿಲ್ಲ. ಜನ ಬಸ್‌ನ ಟಾಪ್‌ನಲ್ಲಿ ಕುಳಿತು ಪ್ರಯಾಣಿಸಿದರೆ ಪ್ರಕರಣ ದಾಖಲಿಸಲಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ವಿದ್ಯಾರ್ಥಿಗಳು ಹಾಗೂ ದುಡಿಯುವ ವರ್ಗದವರು ಪ್ರಯಾಣಿಸುವುದಾದರು ಹೇಗೆ’ ಎಂದು ಪ್ರಶ್ನಿಸಿದರು.

ಸಾರಿಗೆ ಸಚಿವ ಬಿ.ಶ್ರೀರಾಮುಲು, ‘ನಿಗದಿತ ಮಿತಿಗಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಸಿಕೊಂಡಿದ್ದು ಹಾಗೂ ಅತಿವೇಗವೇ ಈ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಮೃತರ ಕುಟುಂಬಕ್ಕೆ ತಲಾ ₹ 5 ಲಕ್ಷವನ್ನು ಸರ್ಕಾರದ ವತಿಯಿಂದ ಹಾಗೂ ₹ 1 ಲಕ್ಷವನ್ನು ವೈಯಕ್ತಿಕ ನೆಲೆಯಲ್ಲಿ ಪರಿಹಾರ ನೀಡಿದ್ದೇನೆ. ಈ ಪ್ರದೇಶದಲ್ಲಿ 14 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಪದೇ ಪದೇ ಅಪಘಾತ ಸಂಭವಿಸುವ ದೋಷಪೂರಿತ ರಸ್ತೆತಾಣಗಳನ್ನು (ಬ್ಲ್ಯಾಕ್‌ಸ್ಪಾಟ್‌) ಗುರುತಿಸಿ ದುರಸ್ತಿಪಡಿಸಲು ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.

ಜೆಡಿಎಸ್‌ ಸದಸ್ಯ ಡಿ.ಸಿ.ತಮ್ಮಣ್ಣ, ‘ಬಹುತೇಕ ಅಪಘಾತಗಳು ಸಂಭವಿಸುವುದಕ್ಕೆ ವಾಹನಗಳಲ್ಲಿನ ದೋಷವೂ ಕಾರಣ. ಚಕ್ರಗಳ ವಿನ್ಯಾಸ ಹೊಂದಾಣಿಕೆ (ವ್ಹೀಲ್‌ ಅಲೈನ್‌ಮೆಂಟ್‌) ಮಾಡುವುದಕ್ಕೆ ಸಾರಿಗೆ ಸಂಸ್ಥೆಗಳಲ್ಲಿ ಸಮರ್ಪಕ ಸೌಕರ್ಯಗಳೇ ಇಲ್ಲ. ವ್ಹೀಲ್‌ ಅಲೈನ್‌ಮೆಂಟ್‌ ಸರಿ ಇಲ್ಲದಿದ್ದರೆ, ಚಾಲಕ ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಸಂಭವಿಸುವ ಅಪಾಯ ಹೆಚ್ಚು’ ಎಂದರು.
ಇಬ್ಬರ ಅಮಾನತಿಗೆ ಕ್ರಮ

ಅಪಘಾತಕ್ಕೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.

ವಿಧಾನ ಪರಿಷತ್‌ನಲ್ಲೂ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ನ ಆರ್. ರಾಜೇಂದ್ರ ರಾಜಣ್ಣ ಅವರು ಈ ಪ್ರಕರಣವನ್ನು ಪ್ರಸ್ತಾಪಿಸಿ, ಅಪಘಾತದಲ್ಲಿ ಸಾವಿಗೀಡಾದವರ ಕುಟುಂಬಕ್ಕೆ ತಲಾ ₹ 25 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಬಸ್‌ಗಳಿಗೆ ಪರವಾನಗಿ ನೀಡಿದ ಮತ್ತು ಮಿತಿಗಿಂತ ಹೆಚ್ಚು ಜನರನ್ನು ಸಾಗಿಸಲು ಅವಕಾಶ ನೀಡಿದ ಅಧಿಕಾರಿಗಳನ್ನು ಅಮಾನತು ಮಾಡಲು ಈಗಾಗಲೇ ಸೂಚಿಸಲಾಗಿದೆ. ಬಸ್‌ಗಳ ಸುಸ್ಥಿತಿ ಪ್ರಮಾಣ ಪತ್ರ ಪಡೆಯಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದರು.

‘40 ಹಳ್ಳಿಗಳ ಜನರ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಈ ಮಾರ್ಗದಲ್ಲಿ ಖಾಸಗಿ ಬಸ್‌ಗಳ ಪರವಾನಗಿಯನ್ನು ರದ್ದು ಮಾಡಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಕ್ರಮಕೈಗೊಳ್ಳಲಾಗುವುದು’ ಎಂದೂ ತಿಳಿಸಿದರು.

‘ರಾಷ್ಟ್ರೀಕೃತ ಬಸ್‌ ಮಾರ್ಗ ನೀತಿ ಮರುಪರಿಶೀಲಿಸಿ’
‘ರಾಜ್ಯದ ಅನೇಕ ಪ್ರದೇಶಗಳಲ್ಲಿ ಬಸ್‌ ಮಾರ್ಗಗಳನ್ನು 1960 ರ ದಶಕದಲ್ಲಿ ರಾಷ್ಟ್ರೀಕರಣಗೊಳಿಸಲಾಗಿತ್ತು. ಅಂತಹ ಕಡೆ ಖಾಸಗಿ ಬಸ್‌ ಸಂಚಾರಕ್ಕೆ ಅವಕಾಶ ನೀಡಲು ರಸ್ತೆ ಸಾರಿಗೆ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸುತ್ತದೆ. ಸರ್ಕಾರವೂ ಇಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸುವುದಿಲ್ಲ. ಈ ನೀತಿಯನ್ನು ಬದಲಾಯಿಸುವ ಅಗತ್ಯ ಇದೆ’ ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಸಲಹೆ ನೀಡಿದರು.

*
ಪಾವಗಡದ ಬಸ್‌ ದುರಂತದ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರನ್ನು ಸಂತೈಸುವ ಬದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿಕ್ಕಬಳ್ಳಾಪುರದಲ್ಲಿ ಆರ್‌ಆರ್‌ಆರ್‌ ಚಲನಚಿತ್ರದ ಬಿಡುಗಡೆ ಪೂರ್ವ ಸಮಾರಂಭದಲ್ಲಿ ಭಾಗವಹಿಸಿದ್ದರು.
–ಯು.ಟಿ.ಖಾದರ್‌, ವಿರೋಧ ಪಕ್ಷದ ಉಪನಾಯಕ, ವಿಧಾನಸಭೆ

**
ನಾನೇ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಈ ಘಟನೆಯ ತನಿಖೆ ನಡೆಸಲು ಉನ್ನತ ಅಧಿಕಾರಿಗಳ ಸಮಿತಿಯನ್ನೂ ರಚಿಸಿದ್ದೇನೆ. ಈಗಾಗಲೇ ಸಂತ್ರಸ್ತ ಕುಟುಂಬಗಳಿಗೆ ಪರಿಹಾರವನ್ನೂ ತಲುಪಿಸಿದ್ದೇವೆ.
-ಬಿ.ರಾಮುಲು, ಸಾರಿಗೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT