ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣು ಮಕ್ಕಳಿಗೂ ಅನುಕಂಪದ ಕೆಲಸ: ನಾಗರಿಕ ಸೇವಾ ನಿಯಮ ತಿದ್ದುಪಡಿಗೆ ಸಂಪುಟ ಅಸ್ತು

Last Updated 21 ಜನವರಿ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ನೌಕರರು ಮೃತಪಟ್ಟಾಗ ಆ ಕುಟುಂಬದಲ್ಲಿ ಗಂಡು ಮಕ್ಕಳಿಲ್ಲದೇ ಕೇವಲ ಹೆಣ್ಣು ಮಕ್ಕಳಿದ್ದರೆ ಅವರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಲು ಕಾಯ್ದೆಗೆ ತಿದ್ದುಪಡಿ ಮಾಡಿದ್ದು, ಅದಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಒಂದು ವೇಳೆ ಹೆಣ್ಣು ಮಕ್ಕಳಿಗೆ ಮದುವೆ ಆಗಿದ್ದರೂ ನೌಕರಿ ನೀಡಲು ತೀರ್ಮಾನಿಸಲಾಗಿದೆ ಎಂದು ಗೃಹ ಮತ್ತು ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಲ್ಲದೆ, ಸ್ವಂತ ಮಕ್ಕಳಿಲ್ಲದೇ ಸಾಕು ಮಕ್ಕಳಿದ್ದರೂ ಅವರಿಗೆ ನೌಕರಿ ನೀಡಲಾಗುವುದು. ಅನುಕಂಪದ ಆಧಾರದಲ್ಲಿ ನೌಕರಿ ಪಡೆಯಲು ಕುಟುಂಬ ಸದಸ್ಯರು ಯಾರು ಅರ್ಹರು ಎಂಬುದರ ವ್ಯಾಖ್ಯೆಯನ್ನೂ ಕರ್ನಾಟಕ ನಾಗರಿಕ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ)( ತಿದ್ದುಪಡಿ) ನಿಯಮಗಳು2020 ದಲ್ಲಿ ಸ್ಪಷ್ಟಪಡಿಸಲಾಗಿದೆ ಎಂದರು.

ಸಮವಸ್ತ್ರ: ರಾಜ್ಯದಲ್ಲಿರುವ ಸುಮಾರು 1.20 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ‘ಪೋಷಣ್‌ ಅಭಿಯಾನ್‌’ ಯೋಜನೆಯಡಿ ಸಮವಸ್ತ್ರ ವಿತರಿಸಲು ನಿರ್ಧರಿಸಲಾಗಿದೆ. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಮೂಲಕ ₹10.27 ಕೋಟಿ ವೆಚ್ಚದಲ್ಲಿ 65,911 ಅಂಗನವಾಡಿ ಕಾರ್ಯಕರ್ತೆಯರು ಮತ್ತು 62,580 ಸಹಾಯಕಿಯರಿಗೆ ತಲಾ ಎರಡು ಸೀರೆಗಳನ್ನು ನೀಡಲಾಗುವುದು. ಇದರ ಜತೆ ಐಸಿಡಿಎಸ್‌ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚುವರಿಯಾಗಿ ತಲಾ ಒಂದೊಂದು ಸೀರೆ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಲು ಟೆಂಡರ್‌ ಕರೆಯಲು ಅನುಮತಿ ನೀಡಲಾಗಿದೆ. 1,500 ಜನ
ರಿಗೆ ₹12.75 ಕೋಟಿ ವೆಚ್ಚದಲ್ಲಿ ವಾಹನ ಖರೀದಿಸಲಾಗುವುದು ಎಂದರು.

65 ಬಡಾವಣೆ ನಕ್ಷೆಗೆ ಅನುಮೋದನೆ: ಕರ್ನಾಟಕ ಗೃಹ ಮಂಡಳಿ ಈಗಾಗಲೇ ಅನುಷ್ಠಾನಗೊಳಿಸಿ ಪೂರ್ಣಗೊಂಡಿರುವ ಮತ್ತು ಪೂರ್ಣಗೊಳ್ಳುವ ಹಂತದಲ್ಲಿರುವ 65 ವಸತಿ ಬಡಾವಣೆಗಳ ವಿನ್ಯಾಸ ನಕ್ಷೆಗಳಿಗೆ ಘಟನೋತ್ತರ ಅನುಮೋದನೆ ನೀಡಲಾಗಿದೆ.

2000 ಇಸವಿಯಿಂದ ಇಲ್ಲಿಯವರೆಗೆ 236 ಬಡಾವಣೆಗಳ ಪೈಕಿ 65 ಬಡಾವಣೆಗಳಿಗೆ ಯಥಾಸ್ಥಿತಿ ನ‌ಕ್ಷೆಗಳಿಗೆ ಸಚಿವ ಸಂಪುಟ ಸಭೆ ಒಂದು ಬಾರಿಗೆ ಅನುಮೋದನೆ ನೀಡಿದೆ. ಸರ್ಕಾರ ಕೈಗೊಂಡ ಈ ತೀರ್ಮಾನ ಸ್ವಾಗತಿಸಿರುವ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಆರಗ ಜ್ಞಾನೇಂದ್ರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಸಚಿವ ಸಂಪುಟದ ಪ್ರಮುಖ ನಿರ್ಧಾರಗಳು

l ಸ್ವಚ್ಛ ಭಾರತ್‌ ಮಿಷನ್‌ ಯೋಜನೆ 2 ನೇ ಹಂತದ ಅಡಿ, 5.5 ಲಕ್ಷ ಮನೆಗಳಿಗೆ ಮುಂದಿನ 5 ವರ್ಷಗಳಲ್ಲಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿ ಕೊಡಲಾಗುವುದು.

l ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವು ದುಡಿಮೆ ಬಂಡವಾಳಕ್ಕಾಗಿ ₹31 ಕೋಟಿ ಸಾಲ ಮಾಡಿತ್ತು. ಅದಕ್ಕೆ ಸರ್ಕಾರವು ಬ್ಯಾಂಕ್‌ ಗ್ಯಾರೆಂಟಿ ನೀಡಿತ್ತು. ಅದರಲ್ಲಿ ₹7 ಕೋಟಿ ಸಾಲ ತೀರಿಸಿದ್ದು, ಉಳಿದ ₹24 ಕೋಟಿಗೆ ಗ್ಯಾರೆಂಟಿ ಮುಂದುವರಿಸಲು ತೀರ್ಮಾನಿಸಲಾಗಿದೆ.

l ಕರ್ನಾಟಕ ಸ್ಟೇಟ್‌ ವೈಡ್‌ ಏರಿಯಾ ನೆಟ್‌ ವರ್ಕ್‌ ಯೋಜನೆ ಅಡಿ ಸೌಲಭ್ಯಗಳನ್ನು ವಿಸ್ತರಿಸಲು ₹35 ಕೋಟಿಗೆ ಅನುದಾನ ನೀಡಲು ಒಪ್ಪಿಗೆ. ಹೆಚ್ಚಿನ ಸಂಖ್ಯೆಯ ಸರ್ಕಾರು ಕಚೇರಿಗಳು ಸೌಲಭ್ಯಗಳನ್ನು ಪಡೆಯಲಿವೆ. 52 ತಹಶೀಲ್ದಾರ್‌ ಕಚೇರಿಗಳು, 30 ಜಿಲ್ಲಾ ಪಂಚಾಯಿತಿಗಳು, 227 ತಾಲ್ಲೂಕು ಪಂಚಾಯತಿಗಳಲ್ಲಿ ವಿಡಿಯೊ ಸಂವಾದದ ಸೌಲಭ್ಯಗಳನ್ನು ಪಡೆಯಲಿವೆ.

l ನಂಜನಗೂಡು ತಾಲ್ಲೂಕಿನಲ್ಲಿ 9 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ₹14 ಕೋಟಿ ನೀಡಲು ಒಪ್ಪಿಗೆ

l ಹೊನ್ನಾಳಿ ತಾಲ್ಲೂಕಿನಲ್ಲಿ ₹48 ಕೋಟಿ ವೆಚ್ಚದಲ್ಲಿ 19 ಕೆರೆಗಳನ್ನು ತುಂಬಿಸುವ ಬೆನಕಹಳ್ಳಿ ಏತನೀರಾವರಿ ಯೋಜನೆಯ ವಿಸ್ತೃತ ಯೋಜನಾ ವರದಿಗೆ ಅನುಮೋದನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT