ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಗಣತಿ ವರದಿ ಅಂಗೀಕಾರಕ್ಕೆ ಒತ್ತಡ

ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸಭೆ l ನಿಯೋಗದಲ್ಲಿ ಸಿಎಂ ಭೇಟಿಗೆ ನಿರ್ಧಾರ
Last Updated 18 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ಸ್ವೀಕರಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಹಿಂದುಳಿದ ವರ್ಗಗಳ ಪ್ರಮುಖ ಮಠಾಧೀಶರು ಮತ್ತು ರಾಜಕೀಯ ನಾಯಕರ ನೇತೃತ್ವದಲ್ಲಿ ನಿಯೋಗ ತೆರಳಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ.

ಜಾತಿ ಗಣತಿ ವರದಿ ಅಂಗೀಕರಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವ ಕುರಿತು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಭಾನುವಾರ ನಡೆದ ಸಮಾಲೋಚನಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ಸಲಹೆ ಮೇರೆಗೆ ಈ ನಿರ್ಣಯ ಕೈಗೊಂಡಿದ್ದು, ಸಭೆಯಲ್ಲಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಸಮ್ಮತಿ ಸೂಚಿಸಿದರು.

ಸಭೆಯ ಆರಂಭದಲ್ಲಿ ಈಶ್ವರಪ್ಪ, ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲೇ ವರದಿ ಜಾರಿಗೆ ಬರಬೇಕಿತ್ತು. ಏಕೆ ಬರಲಿಲ್ಲ ಎಂಬ ಬಗ್ಗೆ ನಾನು ಏನೂ ಹೇಳುವುದಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಪುಟ್ಟರಂಗಶೆಟ್ಟಿ ಅವರು ವರದಿ ಜಾರಿಗೆ ಅವಕಾಶ ಕೊಡಲಿಲ್ಲ’ ಎಂದರು.

‘ಜಾತಿ ಗಣತಿ ವರದಿಯನ್ನು ಆಯೋಗದಿಂದ ಸ್ವೀಕರಿಸಿ, ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವುದಾಗಿ ಸಚಿವ ಬಿ.ಶ್ರೀರಾಮುಲು ವಿಧಾನ ಪರಿಷತ್‌ನಲ್ಲಿ ಭರವಸೆ ನೀಡಿದ್ದಾರೆ. ಎಲ್ಲರೂ ಸೇರಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಒತ್ತಾಯಿಸೋಣ. ಖಂಡಿತವಾಗಿಯೂ ಅವರು ವರದಿ ಸ್ವೀಕರಿಸಿ, ಜಾರಿಗೆ ತರುತ್ತಾರೆ’ ಎಂದು ಹೇಳಿದರು.

ಸಿದ್ದರಾಮಯ್ಯ ಮಾತನಾಡಿ, ‘ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವರದಿ ಸಿದ್ಧವಾಗಿರಲಿಲ್ಲ. ಆಗಿದ್ದರೆ, ಸ್ವೀಕರಿಸುತ್ತಿದ್ದೆ. ನಂತರ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರ ವರದಿಯನ್ನು ಸ್ವೀಕರಿಸಲಿಲ್ಲ’ ಎಂದರು.

ಸಭೆಯ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಯವರನ್ನು ಮನವೊಲಿಸುವುದಾಗಿ ಸಚಿವ ಈಶ್ವರಪ್ಪ ಭರವಸೆ ನೀಡಿದ್ದಾರೆ. ಅವರ ಮಾತಿನ ಮೇಲೆ ನಂಬಿಕೆ ಇಟ್ಟು, ಒಪ್ಪಿಕೊಂಡಿದ್ದೇವೆ. ಮುಖ್ಯಮಂತ್ರಿ ಭೇಟಿಯ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಬಹುದು. ವರದಿ ಜಾರಿ ವಿಷಯದಲ್ಲಿ ಒಕ್ಕೂಟದ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ’ ಎಂದೂ ಹೇಳಿದರು.

ಮಾಜಿ ಸಚಿವರಾದ ಮಲ್ಲಿಕಾರ್ಜುನ ನಾಗಪ್ಪ, ಪುಟ್ಟರಂಗ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ, ಮಾಜಿ ಶಾಸಕರಾದ ನೆ.ಲ. ನರೇಂದ್ರ ಬಾಬು, ವಿ.ಆರ್‌.ಸುದರ್ಶನ್‌, ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಸೇರಿದಂತೆ ಹಲವು ಮುಖಂಡರು ಇದ್ದರು.ಹಿಂದುಳಿದ ಜಾತಿಗಳ ಸಂಘಟನೆಗಳ 50ಕ್ಕೂ ಹೆಚ್ಚು ಪದಾಧಿಕಾರಿಗಳು, 15 ಮಂದಿ ಮಠಾಧೀಶರು ಸಭೆಯಲ್ಲಿದ್ದರು.ಮಾಜಿ ಸಚಿವ ಎಚ್‌.ಎಂ. ರೇವಣ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು.

***

ನಮ್ಮ ಸರ್ಕಾರ ಈ ವಿಷಯದಲ್ಲಿ ಹೋರಾಟಕ್ಕೆ ಅವಕಾಶ ನೀಡುವುದಿಲ್ಲ. ವರದಿಯ ಜಾರಿಗಾಗಿ ಎಲ್ಲ ಪ್ರಯತ್ನವನ್ನು ಮಾಡಲಿದೆ

-ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ

***

ಈಗ ಬಿಜೆಪಿ ಸರ್ಕಾರ ಇದೆ. ಆಯೋಗದಿಂದ ವರದಿ ಪಡೆದು, ಒಪ್ಪಿಕೊಳ್ಳಲಿ. ರಾಜಕೀಯದ ಪ್ರಶ್ನೆಯೇ ಬೇಡ

-ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT