ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಪ್ರಕರಣ: ರಮೇಶ ಜಾರಕಿಹೊಳಿ ಪುನಃ ಗೈರು

Last Updated 20 ಏಪ್ರಿಲ್ 2021, 14:17 IST
ಅಕ್ಷರ ಗಾತ್ರ

ಬೆಂಗಳೂರು: ಅತ್ಯಾಚಾರದ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು, ಕೊರೊನಾ ಸೋಂಕಿನ ಕಾರಣ ನೀಡಿ ವಿಚಾರಣೆಗೆ ಗೈರಾದರು.

ಕಬ್ಬನ್ ಪಾರ್ಕ್‌ ಠಾಣೆಯಲ್ಲಿ ಸಂತ್ರಸ್ತೆ ದಾಖಲಿಸಿದ್ದ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖಾಧಿಕಾರಿ ಎಂ.ಸಿ. ಕವಿತಾ, ‘ಬೆಂಗಳೂರು ಆಡುಗೋಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ಮಂಗಳವಾರ (ಏಪ್ರಿಲ್ 20) ಸಂಜೆ ಹಾಜರಾಗಿ’ ಎಂದು ರಮೇಶ ಜಾರಕಿಹೊಳಿ ಅವರಿಗೆ ನೋಟಿಸ್‌ ನೀಡಿದ್ದರು.

ಆರೋಪಿ ವಿಚಾರಣೆಗೆ ಬರಬಹುದೆಂದು ತನಿಖಾಧಿಕಾರಿ ನೇತೃತ್ವದ ತಂಡ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ರಮೇಶ ಜಾರಕಿಹೊಳಿ ನಿಗದಿತ ಸಮಯಕ್ಕೆ ವಿಚಾರಣೆಗೆ ಹಾಜರಾಗಲಿಲ್ಲ.

ಎಸ್‌ಐಟಿ ನೀಡಿದ್ದ ನೋಟಿಸ್‌ಗೆ ಪ್ರತಿಯಾಗಿ ಪತ್ರವೊಂದನ್ನು ಕಳುಹಿಸಿರುವ ರಮೇಶ ಜಾರಕಿಹೊಳಿ, ‘ಕೊರೊನಾ ಸೋಂಕು ತಗುಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದೇನೆ. ಹೋಮ್ ಐಸೋಲೇಷನ್‌ನಲ್ಲಿ ಇರುವಂತೆ ವೈದ್ಯರು ಸೂಚಿಸಿದ್ದಾರೆ. ಅದನ್ನು ಪಾಲಿಸುತ್ತಿದ್ದೇನೆ. ಅದೇ ಕಾರಣಕ್ಕೆ ವಿಚಾರಣೆಗೆ ಬರಲು ಆಗುತ್ತಿಲ್ಲ. ಸ್ವಲ್ಪ ಕಾಲಾವಕಾಶ ನೀಡಿ’ ಎಂದಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಎಸ್‌ಐಟಿ ಮೂಲಗಳು, ‘ಗೋಕಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ರಮೇಶ ಜಾರಕಿಹೊಳಿ ಮನೆಗೆ ಹೋಗಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ನೋಟಿಸ್ ನೀಡಲಾಗಿತ್ತು. ಆದರೆ, ಅವರು ಬಂದಿಲ್ಲ. ಪತ್ರವೊಂದನ್ನು ಕಳುಹಿಸಿದ್ದಾರೆ. ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದಿವೆ.

‘ಪ್ರಕರಣದ ಸಂತ್ರಸ್ತೆ ನ್ಯಾಯಾಲಯದಲ್ಲೇ ಹೇಳಿಕೆ ದಾಖಲಿಸಿದ್ದಾರೆ. ಅವರ ವೈದ್ಯಕೀಯ ಪರೀಕ್ಷೆ ಹಾಗೂ ಮಹಜರು ಸಹ ಮುಗಿಸಲಾಗಿದೆ. ಇದೀಗ ಆರೋಪಿಯೂ ಆಗಿರುವ ರಮೇಶ ಜಾರಕಿಹೊಳಿ ವಿಚಾರಣೆ ನಡೆಸಿ ಮಾಹಿತಿ ಕಲೆಹಾಕಬೇಕಿದೆ. ಅದಕ್ಕಾಗಿ ಕಾಯುತ್ತಿದ್ದೇವೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT