ಬುಧವಾರ, ಮೇ 25, 2022
29 °C

ರಾಜ್ಯದ ರೈಲ್ವೆ ಯೋಜನೆಗಳಿಗೆ ಕೇಂದ್ರದಿಂದ ₹ 4 ಸಾವಿರ ಕೋಟಿ ಮಂಜೂರು: ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ರಾಜ್ಯದ ಮಹತ್ವದ ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರ ₹ 4 ಸಾವಿರ ಕೋಟಿ ಮಂಜೂರು ಮಾಡಿದೆ. ರಾಜ್ಯ ಸರ್ಕಾರ ₹ 683 ಕೋಟಿ ಒದಗಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಶಿವಮೊಗ್ಗ ರೈಲುನಿಲ್ದಾಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೈಲ್ವೆ ಮಾರ್ಗದ ₹ 116.31 ಕೋಟಿ ವೆಚ್ಚದ ಮೂರು ಮೇಲುಸೇತುವೆ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ರೈಲ್ವೆ ಇಲಾಖೆ ಜತೆ 50:50ರ ಅನುಪಾತದಲ್ಲಿ ವೆಚ್ಚ ಹಂಚಿಕೆ ಒಪ್ಪಂದ ಮಾಡಿಕೊಳ್ಳುತ್ತಿದೆ. ಅಗತ್ಯವಿರುವ ಭೂಮಿಯನ್ನು ತನ್ನ ವೆಚ್ಚದಲ್ಲಿ ಖರೀದಿ ಮಾಡುತ್ತಿದೆ. 46 ಲೆವೆಲ್ ಕ್ರಾಸಿಂಗ್ ಗೇಟ್‍ಗಳನ್ನು ತೆರವುಗೊಳಿಸಿ ಮೇಲು ಸೇತುವೆಗಳನ್ನು ನಿರ್ಮಿಸಲು ಅನುಮೋದನೆ ನೀಡಿದೆ ಎಂದರು.

ಶಿವಮೊಗ್ಗ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ನಗರ. ರೈಲ್ವೆ, ರಸ್ತೆ, ವಿಮಾನ ನಿಲ್ದಾಣ ಮತ್ತಿತರ ಮೂಲಸೌಲಭ್ಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಶಿಕಾರಿಪುರ-ಶಿವಮೊಗ್ಗ ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. 2021-22ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ₹ 100 ಕೋಟಿ ಮಿಸಲಿಟ್ಟಿದೆ. ಗಿಣಿಗೆರಾ-ರಾಯಚೂರು, ಗದಗ-ವಾಡಿ, ತುಮಕೂರು-ಚಿತ್ರದುರ್ಗ-ದಾವಣಗೆರೆ, ತುಮಕೂರು-ರಾಯದುರ್ಗ, ಚಿಕ್ಕಮಗಳೂರು-ಬೇಲೂರು, ಧಾರವಾಡ-ಬೆಳಗಾವಿ, ಶಿವಮೊಗ್ಗ-ರಾಣಿಬೆನ್ನೂರು ನೂತನ ರೈಲು ಮಾರ್ಗ ಸೇರಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹ 148 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂದರು.

ವರ್ಚುವಲ್ ಮೀಡಿಯಾ ಮೂಲಕ ರೈಲ್ವೆ ಸಚಿವ ಪಿಯೂಷ್‍ಗೋಯಲ್ ಮಾತನಾಡಿ, ರಾಜ್ಯದಲ್ಲಿ ರೈಲ್ವೇ ಕ್ಷೇತ್ರದ ವಿಕಾಸಕ್ಕಾಗಿ ಕೈಗೊಂಡಿರುವ ಎಲ್ಲಾ ಕಾಮಗಾರಿಗಳೂ ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳ್ಳಲಿವೆ. ಅನುದಾನದ ಕೊರತೆಯಾಗದಂತೆ ಕ್ರಮಕೈಗೊಳ್ಳಲಾಗುವುದು. ರೈಲ್ವೆ ಕ್ಷೇತ್ರದ ವಿಕಾಸದಿಂದಾಗಿ ಪ್ರವಾಸೋದ್ಯಮ, ತಂತ್ರಜ್ಞಾನಾಧಾರಿತ ಉದ್ಯಮಗಳ ವಿಕಾಸಕ್ಕೆ ಅನುಕೂಲವಾಗಿದೆ. ಜಿಲ್ಲೆಯಲ್ಲಿ  ಕೋಚಿಂಗ್ ಡಿಪೋ, ಶಿವಮೊಗ್ಗ-ರಾಣೆಬೆನ್ನೂರು ರೈಲ್ವೆ ಕಾಮಗಾರಿಗಳು 2022ರ ಹೊತ್ತಿಗೆ ಪೂರ್ಣಗೊಳ್ಳಲಿವೆ ಎಂದರು.

ಪ್ರಸ್ತಾವಿಕ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಮೀಪದ ಕಡದಕಟ್ಟೆ ಬಳಿ ₹ 26 ಕೋಟಿ, ಉಷಾ ನರ್ಸಿಂಗ್ ಹೋಂ ಬಳಿ ₹ 60.76 ಕೋಟಿ, ಕಾಶೀಪುರ ಬಳಿ ₹ 29.76 ಕೋಟಿ ವೆಚ್ಚದಲ್ಲಿ ಮೂರು ಮೇಲು ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

ಶಾಸಕರಾದ ಬಿ.ಕೆ.ಸಂಗಮೇಶ್ವರ, ಎಸ್.ಕುಮಾರ್ ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಭಾರತಿಶೆಟ್ಟಿ, ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಮೇಯರ್ ಸುವರ್ಣಾ ಶಂಕರ್, ‘ಕಾಡಾ’ ಅಧ್ಯಕ್ಷೆ ಪವಿತ್ರಾ ರಾಮಯ್ಯ, ‘ಸೂಡಾ’ ಅಧ್ಯಕ್ಷ ಜ್ಯೋತಿ ಪ್ರಕಾಶ್, ಎಸ್‌.ಎನ್‌.ಚನ್ನಬಸಪ್ಪ, ಮೂಲ ಸೌಕರ್ಯ ಇಲಾಖೆ ಕಾರ್ಯದರ್ಶಿ ಕಪಿಲ್ ಮೋಹನ್, ಮುಖ್ಯಮಂತ್ರಿ ಕಾರ್ಯದರ್ಶಿ ಸೆಲ್ವಕುಮಾರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಕಾಂತರಾಜು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು