ಶುಕ್ರವಾರ, ಡಿಸೆಂಬರ್ 2, 2022
20 °C

ರಾಜ್ಯಕ್ಕೆ ಹೆಚ್ಚುವರಿ 30 ಲಕ್ಷ ಲೀಟರ್ ಸೀಮೆ ಎಣ್ಣೆ ಬಿಡುಗಡೆ: ಕೇಂದ್ರ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕರ್ನಾಟಕದ ಕರಾವಳಿ ಪ್ರದೇಶದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಮನವಿಗೆ ಸ್ಪಂದಿಸಿ, ರಾಜ್ಯಕ್ಕೆ ಹೆಚ್ಚುವರಿಯಾಗಿ 30 ಲಕ್ಷ ಲೀಟರ್ ಸೀಮೆ ಎಣ್ಣೆಯನ್ನು ಕೇಂದ್ರ ಸರ್ಕಾರ ಬುಧವಾರ ಬಿಡುಗಡೆ ಮಾಡಿದೆ. 

‘ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರುತ್ತಿರುವ ನಾಡದೋಣಿ ಮೀನುಗಾರಿಕೆಗೆ ಹಂಚಿಕೆಯಾಗಿದ್ದ ಸೀಮೆ ಎಣ್ಣೆ ಸಕಾಲದಲ್ಲಿ ಸಿಗುತ್ತಿಲ್ಲ. ಈ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆದು ಹಂಚಿಕೆಯಾಗಿರುವ ಸೀಮೆ ಎಣ್ಣೆಯನ್ನು ತ್ವರಿತವಾಗಿ ಬಿಡುಗಡೆಗೊಳಿಸಬೇಕು. ಈ ಮೂಲಕ ಕರಾವಳಿಯ ಮೀನುಗಾರರ ಹಿತ ಕಾಯಬೇಕು’ ಎಂದು ಉಡುಪಿಯ ಮೀನುಗಾರರ ಒಕ್ಕೂಟವು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿತ್ತು.

ಕರಂದ್ಲಾಜೆ ಅವರು ಕೇಂದ್ರ ಪೆಟ್ರೋಲಿಯಂ ಸಚಿವರ ಗಮನಕ್ಕೆ ತಂದು, ಅತೀ ಶೀಘ್ರದಲ್ಲಿ ಹೆಚ್ಚುವರಿ ಸೀಮೆ ಎಣ್ಣೆಯನ್ನು ಬಿಡುಗಡೆಗೊಳಿಸಿ, ಕರಾವಳಿಯ ಮೀನುಗಾರರ ಹಿತ ಕಾಯುವಂತೆ ಮನವಿ ಮಾಡಿದ್ದರು. 

ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ಕರ್ನಾಟಕ ಸರ್ಕಾರಕ್ಕೆ 2022-23ನೇ ಪಾಲಿನ 30 ಲಕ್ಷ ಲೀಟರ್ ಹೆಚ್ಚುವರಿ ಸೀಮೆ ಎಣ್ಣೆಯನ್ನು ಬಿಡುಗಡೆ ಮಾಡಿದೆ. 

ಈ ಸೀಮೆ ಎಣ್ಣೆಯನ್ನು ಮೀನುಗಾರಿಕಾ ಉದ್ದೇಶಕ್ಕೆ ರಾಜ್ಯದ ವಿತರಣಾ ವ್ಯವಸ್ಥೆ ವಿತರಿಸಲಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು