ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾಗದ ಆಮ್ಲಜನಕ ಹಂಚಿಕೆ ಸೂತ್ರ: ರಾಜ್ಯದ ಕೂಗಿಗೆ ಸಿಗದ ಮನ್ನಣೆ

Last Updated 7 ಮೇ 2021, 2:02 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಅಗತ್ಯಕ್ಕೆ ತಕ್ಕಂತೆ ಆಮ್ಲಜನಕ ಪೂರೈಸಲು ಮನಸ್ಸು ಮಾಡದ ಕೇಂದ್ರ ಸರ್ಕಾರ, ಇಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ಸ್ಥಳೀಯವಾಗಿ ಬಳಸಲು ಅವಕಾಶ ಮಾಡಿಕೊಡಬೇಕೆಂಬ ಕೋರಿಕೆಗೂ ಕಿವಿಗೊಟ್ಟಿಲ್ಲ.

ಹೈಕೋರ್ಟ್‌ಗೆ ಮೇ 5ರ ಸಂಜೆ ನೀಡಿದ್ದ ಮಾತಿನಂತೆ ರಾತ್ರಿ ವೇಳೆಗೇ ರಾಜ್ಯಕ್ಕೆ ಪ್ರತಿದಿನದ ಆಮ್ಲಜನಕ ಹಂಚಿಕೆ ಪಾಲು 865 ಟನ್‌ನಿಂದ 965 ಟನ್‌ಗೆ ಕೇಂದ್ರ ಸರ್ಕಾರ ಹೆಚ್ಚಿಸಿದೆ. ಆದರೆ,ಹೆಚ್ಚಿಸಿರುವ 100 ಟನ್‌ನಲ್ಲಿ 40 ಟನ್‌ ಒಡಿಶಾದಿಂದ ಬರಬೇಕಿದೆ.

ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ಸ್ಥಳೀಯವಾಗಿಯೇ ಬಳಸಲು ಕೇಂದ್ರ ಸರ್ಕಾರ ಅವಕಾಶ ನೀಡುವ ವಿಶ್ವಾಸವನ್ನು ಮುಖ್ಯಮಂತ್ರಿ ವ್ಯಕ್ತಪಡಿಸಿದ್ದರು.

‘ನಮ್ಮ ಬೇಡಿಕೆಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್‌ ಮತ್ತು ಪ್ರಲ್ಹಾದ ಜೋಶಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಬುಧವಾರ ಹೇಳಿದ್ದರು.

ರಾಜ್ಯದಲ್ಲಿರುವ ಪ್ರಮುಖ ಏಳು ಕಂಪನಿಗಳು ಉತ್ಪಾದಿಸುವ ಒಟ್ಟು ಆಮ್ಲಜನಕದಲ್ಲಿ 903 ಟನ್‌
ಅನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ.

ಈ ಪೈಕಿ, 735 ಅನ್‌ ಅನ್ನು ರಾಜ್ಯಕ್ಕೆ ಹಂಚಿಕೆ ಮಾಡಿದ್ದರೆ, ಉಳಿದ 168 ಟನ್‌ಗಳಲ್ಲಿ ಮಹಾರಾಷ್ಟ್ರ (80), ಆಂಧ್ರಪ್ರದೇಶ (63), ಕೇರಳ (10) ಮತ್ತು ಗೋವಾ (15) ಕ್ಕೆ ಹಂಚಿಕೆ ಮಾಡಿದೆ.

ಪರಿಷ್ಕೃತ ಹಂಚಿಕೆಯಲ್ಲಿ ರಾಜ್ಯ ಹೊರರಾಜ್ಯಗಳಿಂದ ಒಟ್ಟು 170 ಟನ್‌ (ಆಂಧ್ರಪ್ರದೇಶ– 20, ಕೇರಳ–30, ಒಡಿಶಾ–120) ತರಬೇಕಿದೆ. ಆಯಾ ರಾಜ್ಯಗಳಲ್ಲಿರುವ ಸಣ್ಣ, ಸಣ್ಣ ಘಟಕಗಳಲ್ಲಿ (ಎಂಎಸ್‌ಎಂಇ) ಉತ್ಪಾದಿಸುವ ಆಮ್ಲಜನಕವನ್ನು ಆಯಾ ರಾಜ್ಯಗಳಿಗೇ ಕೇಂದ್ರ ಹಂಚಿಕೆ ಮಾಡಿದೆ. ಹೀಗಾಗಿ, ಕರ್ನಾಟಕದಲ್ಲಿರುವ ಈ ಘಟಕಗಳಲ್ಲಿ ಉತ್ಪಾದನೆಯಾಗುವ 60 ಟನ್‌ ರಾಜ್ಯದ ಬಳಕೆಗೆ ಸಿಕ್ಕಿದೆ.

ಕೇಂದ್ರ ಸರ್ಕಾರ ಮೇ 1ರಂದು ರಾಜ್ಯಕ್ಕೆ 865 ಟನ್‌ ಹಂಚಿಕೆ ಮಾಡಿತ್ತು. ಆಗ ಬಳ್ಳಾರಿಯ ಜೆಎಸ್‌ಡಬ್ಲ್ಯೂ ಕಂಪನಿಯಿಂದ 80 ಟನ್‌ ಹಂಚಿಕೆ ಮಾಡಲಾಗಿತ್ತು. ಹೊಸ ಹಂಚಿಕೆಯಲ್ಲಿ ಆ ಪ್ರಮಾಣವನ್ನು 130 ಟನ್‌ಗೆ ಹೆಚ್ಚಿಸಲಾಗಿದೆ. ಬಳ್ಳಾರಿಯಲಿಂಡೆ ಬೆಲ್ಲೋಕ್ಸಿ ಘಟಕದಿಂದ ಹಂಚಿಕೆ ಮಾಡಿದ್ದ 15 ಟನ್‌ ಅನ್ನು 25 ಟನ್‌ಗೆ ಹೆಚ್ಚಿಸಲಾಗಿದೆ.

ಆಮ್ಲಜನಕ ಪೂರೈಕೆ ಸರಪಳಿಯ ಭಾಗವಾಗಿ ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಹರಿಯಾಣ, ಪಂಜಾಬ್‌, ಕೇರಳ, ರಾಜಸ್ಥಾನ, ಆಂಧ್ರಪ್ರದೇಶ, ಉತ್ತರಖಂಡ, ಗೋವಾ, ಒಡಿಶಾ, ಪುದುಚೇರಿ ಮತ್ತು ಜಮ್ಮು ಕಾಶ್ಮೀರಕ್ಕೆ ಆಮ್ಲಜನಕ ಪ್ರಮಾಣದ ಹಂಚಿಕೆಯನ್ನು ಕೇಂದ್ರ ಪರಿಷ್ಕರಿಸಿದೆ. ಕೋವಿಡ್‌ ತೀವ್ರಗೊಳ್ಳುತ್ತಿದ್ದು, ಆಮ್ಲಜನಕ ಪ್ರಮಾಣ ಹೆಚ್ಚಿಸುವಂತೆ ಈ ರಾಜ್ಯಗಳಿಂದ ಬೇಡಿಕೆ ಬಂದ ಕಾರಣ ಆಯಾ ರಾಜ್ಯಗಳ ಸಂಬಂಧಿಸಿದ ಸಚಿವಾಲಯಗಳು, ಆಮ್ಲಜನಕ ಉತ್ಪಾದಕರು ಮತ್ತು ಅಖಿಲ ಭಾರತ ಕೈಗಾರಿಕಾ ಅನಿಲ ತಯಾರಕರ ಸಂಘ (ಎಐಐಜಿಎಂಎ) ಜೊತೆ ಸಮಾಲೋಚನೆ ನಡೆಸಿ ಕೇಂದ್ರ ಸರ್ಕಾರದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ (ಡಿಪಿಐಐಟಿ) ಉನ್ನತಾಧಿಕಾರ ಸಮಿತಿ ಈ ಸೂತ್ರ ರೂಪಿಸಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇಡೀ ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣಕ್ಕೆ ಎಲ್ಲ ರಾಜ್ಯಗಳಿಗೆ ಅಗತ್ಯವಾದ ವೈದ್ಯಕೀಯ ಪರಿಕರಗಳು, ಆಮ್ಲಜನಕವೂ ಸೇರಿದಂತೆ ಔಷಧ ಪೂರೈಸುವ ಹೊಣೆಯನ್ನು ಡಿಪಿಐಐಟಿ ಕಾರ್ಯದರ್ಶಿಯ ನೇತೃತ್ವದ ಉನ್ನತಾಧಿಕಾರ ಸಮಿತಿಗೆ ಕೇಂದ್ರ ಸರ್ಕಾರ ವಹಿಸಿದೆ. ಅತೀ ಹೆಚ್ಚು ಪ್ರಕರಣ ಪತ್ತೆಯಾದ 12 ರಾಜ್ಯಗಳಿಗೆ ವೈದ್ಯಕೀಯ ಆಮ್ಲಜನಕವನ್ನು ಹಂಚುವ ಬಗ್ಗೆ ಆಯಾ ರಾಜ್ಯಗಳ ಆರೋಗ್ಯ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಏ. 15ರಂದು ಪತ್ರ ಬರೆದಿತ್ತು. ನಂತರ ಸಂಬಂಧಿಸಿದ ರಾಜ್ಯಗಳು, ಅಲ್ಲಿನ ಆಮ್ಲಜನಕ ಉತ್ಪಾದಕರು ಮತ್ತು ಎಐಐಜಿಎಂಎ ಜೊತೆ ಚರ್ಚಿಸಿ ಆಮ್ಲಜನಕ ಹಂಚಿಕೆ ಪ್ರಮಾಣ ಪರಿಷ್ಕರಿಸಿದೆ.

ಕೋವಿಡ್‌ ನಿರ್ವಹಣೆ ಉದ್ದೇಶದಿಂದ ಜಾರಿಗೊಳಿಸುವ ಈ ಹಂಚಿಕೆ ಯೋಜನೆಯನ್ನು ಎಲ್ಲ ರಾಜ್ಯಗಳು ಮತ್ತು ಸಂಬಂಧಿಸಿದ ಏಜೆನ್ಸಿಗಳು ಪಾಲಿಸಬೇಕು ಎಂದು ಏ. 18ರ ಆದೇಶದಲ್ಲಿ ಸೂಚಿಸಿತ್ತು. ಆದರೆ, ಹಂಚಿಕೆ ಸೂತ್ರಕ್ಕೆ ಕರ್ನಾಟಕವೂ ಸೇರಿದಂತೆ ಯಾವುದೇ ರಾಜ್ಯಗಳು ವಿರೋಧ ವ್ಯಕ್ತಪಡಿಸಿಲ್ಲ. ಹೀಗಾಗಿ, ರಾಜ್ಯಗಳಿಗೆ ತಮ್ಮಲ್ಲಿ ಸಾಕಷ್ಟು ಪ್ರಮಾಣದ ಆಮ್ಲಜನಕದ ಉತ್ಪಾದನೆ ಆಗುತ್ತಿದ್ದರೂ, ಕೇಂದ್ರ ಹಂಚಿಕೆ ಮಾಡಿದ ಪಾಲು ಮಾತ್ರ ಪಡೆಯಲು ಅವಕಾಶವಿದೆ.

ಕೋವಿಡ್‌ ರೋಗಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕದ ಅಗತ್ಯ ಇದೆ ಎಂದು ಏ. 20ರ ವೇಳೆಗೆ ರಾಜ್ಯ ಸರ್ಕಾರಕ್ಕೆ ಅರಿವಾಗಿತ್ತು. ಹಂಚಿಕೆಗಿಂತ ಹೆಚ್ಚುವರಿ ಪೂರೈಸುವಂತೆ ಕೇಂದ್ರ ಆರೋಗ್ಯ ಸಚಿವ ಮತ್ತು ರೈಲ್ವೆ ಸಚಿವರಿಗೆ ಮುಖ್ಯಮಂತ್ರಿ ಪತ್ರ ಬರೆದಿದ್ದರು. ಏ 30ರ ವೇಳೆಗೆ 1,471 ಟನ್‌ ಅಗತ್ಯವಿದೆ ಎಂದೂ ಕೋರಿದ್ದರು.

ಕೇಂದ್ರ ಸರ್ಕಾರದ ನಿಯಮದ ಪ್ರಕಾರ, ಸಕ್ರಿಯ ಪ್ರಕರಣಗಳ ಶೇ 17ರಷ್ಟು ರೋಗಿಗಳಿಗೆ ಆಮ್ಲಜನಕ ಸೌಲಭ್ಯದ ಹಾಸಿಗೆ, ಶೇ 3ರಷ್ಟು ರೋಗಿಗಳಿಗೆ ಐಸಿಯು ಹಾಸಿಗೆ ಬೇಕಾಗುತ್ತದೆ. ಅದರ ಅನ್ವಯ ಮೇ 5ಕ್ಕೆ 1,792 ಟನ್‌ ಆಮ್ಲಜನಕ ಬೇಕಾಗುತ್ತದೆ. ಅದೇ ನಿಯಮದ ಪ್ರಕಾರ ಕನಿಷ್ಠ 1,162 ಟನ್ ಹಂಚಿಕೆ ಮಾಡಲೇಬೇಕು ಎಂದು ಡಿಪಿಐಐಟಿ ಕಾರ್ಯದರ್ಶಿ ಎ ಗಿರಿಧರ್‌ ಅವರಿಗೆ ರಾಜ್ಯದ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಏ.30 ರಂದೇ ಪತ್ರ ಬರೆದಿದ್ದಾರೆ.

ಈ ಬೇಡಿಕೆಗೆ ಕೇಂದ್ರ ಸಕಾರಾತ್ಮಕವಾಗಿ ಸ್ಪಂದಿಸದೇ ಇರುವುದು ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ.

ಕಾಳಸಂತೆಯಲ್ಲಿ ‘ಪ್ರಾಣವಾಯು’!:

ಉತ್ಪಾದಕ ಕಂಪನಿಗಳು, ಮರು ಭರ್ತಿ (ರೀ ಫಿಲ್ಲಿಂಗ್‌) ಏಜೆನ್ಸಿಗಳು ಆಮ್ಲಜನಕ ಪ್ರಮಾಣದ ಸುಳ್ಳು ಲೆಕ್ಕ ತೋರಿಸಿ, ಭಾರಿ ಮೊತ್ತಕ್ಕೆ ಕಾಳಸಂತೆಯಲ್ಲಿ ಮಾರುತ್ತಿರುವುದು ಬಹಿರಂಗವಾಗಿದೆ. ರಾಜ್ಯದಲ್ಲಿ ನಿತ್ಯ 2,400 ಟನ್‌ಗೂ ಹೆಚ್ಚು ಆಮ್ಲಜನಕ ಉತ್ಪಾದನೆಯಾಗುತ್ತಿದೆ ಎನ್ನಲಾಗಿದೆ. ಆದರೆ, ಸರ್ಕಾರದ ಮಾಹಿತಿ ಪ್ರಕಾರ 1,043 ಟನ್‌ ಮಾತ್ರ!. ಆದರೆ ನಿತ್ಯವು ಉತ್ಪಾದನೆ ಪ್ರಮಾಣ ಬದಲಾಗುತ್ತಿರುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

‘ತುರ್ತು ಅಗತ್ಯಕ್ಕೆ 4–5 ಪಟ್ಟು ಹೆಚ್ಚು ಹಣ ಕೊಟ್ಟು ಮರು ಭರ್ತಿ ಏಜೆನ್ಸಿಗಳಿಂದ ಖರೀದಿಸಲೇ ಬೇಕಾಗಿದೆ. ಈ ಏಜೆನ್ಸಿಗಳು ಆಮ್ಲಜನಕ ಸಿಲಿಂಡರ್‌ಗಳನ್ನುಸಾರ್ವಜನಿಕರಿಗೆ ಮಾರಲು ಅವಕಾಶವಿಲ್ಲ. ಆದರೆ, ಬೆಂಗಳೂರಿನ ಹಲವು ಅಪಾರ್ಟ್‌ಮೆಂಟ್‌ಗಳು, ಮನೆಗಳಲ್ಲಿ ಆಮ್ಲಜನಕ ಸಿಲಿಂಡರ್‌ ಸಂಗ್ರಹವಿದೆ. ಹೀಗಾಗಿ, ಸಿಲಿಂಡರ್‌ಗಳ ಕೊರತೆ ಆಗಿದೆ’ ಎಂದು ಖಾಸಗಿ ಆಸ್ಪತ್ರೆಯೊಂದರ ಮಾಲೀಕರು ವಸ್ತುಸ್ಥಿತಿ ಹಂಚಿಕೊಂಡರು. ‘ಕಲಬುರ್ಗಿ ಜಿಲ್ಲೆಯ ನಂದೂರು ಕೈಗಾರಿಕಾ ಪ್ರದೇಶದಿಂದ ಆಮ್ಲಜನಕ ಸಿಲಿಂಡರ್‌ಗಳನ್ನು ಮಹಾರಾಷ್ಟ್ರ, ತೆಲಂಗಾಣ ರಾಜ್ಯಕ್ಕೆ ಕಾಳಸಂತೆಯಲ್ಲಿ ಮಾರಿದ ಬಗ್ಗೆ ಪ್ರಕರಣ ದಾಖಲಾಗಿದೆ. ಪೀಣ್ಯದ ಮರು ಭರ್ತಿ ಕೇಂದ್ರವೊಂದರ ಮೇಲೂ ಎಫ್‌ಐಆರ್‌ ದಾಖಲಾಗಿದೆ’ ಎಂದು ಔಷಧ ನಿಯಂತ್ರಕರ ಕಚೇರಿಯ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT