ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಬಜೆಟ್ 2021: ಮಹಿಳೆಯರಿಗೆ ಬಂಪರ್; ಜನರಿಗೆ ಹೊರೆಯಿಲ್ಲದ ಮುಂಗಡಪತ್ರ

Last Updated 8 ಮಾರ್ಚ್ 2021, 11:53 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಸಂಕಷ್ಟ ಕಾಲದಲ್ಲಿ ಒಂದಿಷ್ಟಾದರೂ ಸಮಾಧಾನ ದೊರೆಯಬಹುದೆಂಬ ನಿರೀಕ್ಷೆಯಲ್ಲಿದ್ದ ಕರ್ನಾಟಕ ಜನತೆಯೆದುರು ರಾಜ್ಯದ ಆಯವ್ಯಯ ಪತ್ರ 2021-22 ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಮಂಡಿಸಿದ್ದಾರೆ. ಇದೇ ದಿನ ಅಂತರರಾಷ್ಟ್ರೀಯ ಮಹಿಳಾ ದಿನವೂ ಆಗಿರುವುದರಿಂದಲೋ ಏನೋ, ಮಹಿಳೆಯರಿಗೆ ಭರ್ಜರಿ ಕೊಡುಗೆ ನೀಡಲಾಗಿದೆ. ಯಾವುದೇ ತೆರಿಗೆ ಹೊರೆ ಹಾಕಿಲ್ಲ. ಆರ್ಥಿಕ ಸಂಕಷ್ಟದ ಕೊರೊನಾ ಕಾಲದಲ್ಲಿ ಜನಪ್ರಿಯ ಯೋಜನೆಗಳನ್ನು ಘೋಷಿಸದೆ ಇದ್ದಿದ್ದರಲ್ಲೇ ಸರಿದೂಗಿಸುವ ಪ್ರಯತ್ನ ಮಾಡಿದ್ದಾರೆ.

ಮಹಿಳೆಯರಿಗೆ ಬಂಪರ್: ವಿಶ್ವ ಮಹಿಳಾ ದಿನವಾದ ಇಂದು ಮಹಿಳೆಯರಿಗೆ ವಿಶೇಷ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಮಹಿಳೆಯರಿಗೆ 6 ತಿಂಗಳು ಪ್ರಸೂತಿ ರಜೆಯ ಜೊತೆ 6 ತಿಂಗಳು ಮಕ್ಕಳ ಆರೈಕೆ ರಜೆ, 60 ಸಾವಿರ ಮಹಿಳೆಯರಿಗೆ ಸ್ವಯಂ ಉದ್ಯೋಗ ಸೃಷ್ಟಿಗೆ ಸರ್ಕಾರ ಮುಂದಾಗಿದೆ. ಸೇವಾ ವಲಯದ ಮಹಿಳಾ ಉದ್ಯಮಿಗಳಿಗೆ ಶೇ. 4ರ ರಿಯಾಯಿತಿ ಬಡ್ಡಿದರದಲ್ಲಿ ಸಾಲ, ಮಹಿಳಾ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ₹ 2 ಕೋಟಿ ವರೆಗೆ ಸಾಲ ಸೌಲಭ್ಯ., “ಸಂಜೀವಿನಿ” ವ್ಯಾಪ್ತಿಯ ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳಿಗೆ ಆರು ಸಾವಿರ ಸಣ್ಣ ಉದ್ಯಮ ಸ್ಥಾಪನೆಗೆ ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಬೆಂಬಲ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಲೈಸನ್ಸ್‌ ಪಡೆದ ಮಹಿಳೆಯರಿಗೆ ಪ್ರಾಂಗಣದಲ್ಲಿನ ನಿವೇಶನ, ಗೋದಾಮು, ಅಂಗಡಿ, ಅಂಗಡಿ-ವ-ಗೋದಾಮುಗಳ ಹಂಚಿಕೆಯಲ್ಲಿ ಶೇ. 10ರಷ್ಟು ಮೀಸಲಾತಿ. ಗೋದಾಮುಗಳ ಹಂಚಿಕೆಯಲ್ಲಿ ಶೇ. 10ರಷ್ಟು ಮೀಸಲಾತಿ. ಮಹಿಳಾ ವಾಣಿಜ್ಯೋದ್ಯಮಿಗಳನ್ನು ಬೆಂಬಲಿಸಲು, ಐದು ಕೋಟಿ ರೂ. ವೆಚ್ಚದಲ್ಲಿ Elevate Women Entrepreneurship ಕಾರ್ಯಕ್ರಮ ಜಾರಿ ಮಾಡಿದ್ದಾರೆ.

ಫ್ಲ್ಯಾಟ್ ಖರೀದಿಸುವವರಿಗೆ ಸಿಹಿ: ಹೊಸದಾಗಿ ಫ್ಲ್ಯಾಟ್ ಖರೀದಿಸುವವರಿಗೆ ಯಡಿಯೂರಪ್ಪ ಸಿಹಿ ಸುದ್ದಿ ಕೊಟ್ಟಿದ್ದಾರೆ. ಕೈಗೆಟಕುವ ದರಗಳ ಮನೆಗಳನ್ನು ಪ್ರೋತ್ಸಾಹಿಸಲು 35 ಲಕ್ಷ ರೂ.ಗಳಿಂದ 45 ಲಕ್ಷ ರೂ. ಗಳವರೆಗಿನ ಅಪಾರ್ಟ್‌ಮೆಂಟ್‌ಗಳ ಮೊದಲನೇ ನೋಂದಣಿಗೆ ಮುದ್ರಾಂಕ ಶುಲ್ಕ ಶೇ.5 ರಿಂದ ಶೇ.3 ಕ್ಕೆ ಇಳಿಕೆ ಮಾಡಿದ್ದಾರೆ.

ಪ್ರತಿ ಜಿಲ್ಲೆಗೆ ಗೋಶಾಲೆ: ಇತ್ತೀಚೆಗೆ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿ ಮಾಡಲಾಗಿತ್ತು. ಗೋ ಸಂಪತ್ತಿನ ರಕ್ಷಣೆಗಾಗಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಗೋಶಾಲೆ ನಿರ್ಮಾಣ ಮಾಡಲಾಗುವುದು ಎಂದು ಯಡಿಯೂರಪ್ಪ ಘೋಷಿಸಿದ್ದಾರೆ. ದೇಶೀಯ ಪಶು ಸಂಪತ್ತಿನ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ದೇಶೀಯ ಗೋ ಸಂಪತ್ತಿನ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ತರಬೇತಿ ನೀಡಲು ಹೆಸರಘಟ್ಟದಲ್ಲಿ ಥೀಮ್ ಪಾರ್ಕ್ ಸ್ಥಾಪನೆ ಮಾಡಲಾಗುವುದು ಎಮದರು.

ಧರ್ಮ, ಸಮುದಾಯಗಳಿಗೆ ಹಣ: ಸಮುದಾಯಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಬಜೆಟ್‌ನಲ್ಲಿ ಹಣ ನೀಡಿದ್ದಾರೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹1500 ಕೋಟಿ ಘೋಷಿಸಿದ್ದು, ಇದರಲ್ಲಿ ಕ್ರೈಸ್ತ ಸಮುದಾಯಕ್ಕೆ ₹ 200 ಕೋಟಿ ನೀಡಿದ್ದಾರೆ. ಒಕ್ಕಲಿಗ ಮತ್ತು ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ತಲಾ ₹500 ಕೋಟಿ ಅನುದಾನ ಘೋಷಿಸಿದ್ದಾರೆ. ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಕಾರ್ಯಕ್ರಮಗಳಿಗೆ ₹ 50 ಕೋಟಿ ನೀಡಿದ್ದಾರೆ.

ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ: ಇನ್ನೂ ಏರುಗತಿಯಲ್ಲಿರುವ ತೈಲ ಬೆಲೆ ಮೇಲೆ ತೆರಿಗೆ ಇಳಿಸಿ ಕೊಂಚ ನೆಮ್ಮದಿ ನೀಡಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ದಕ್ಷಿಣದ ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸುತ್ತಿರುವ ಮಾರಾಟ ತೆರಿಗೆಯು ಕಡಿಮೆ ಇದೆ. ಹಾಗಾಗಿ, ಈ ಸಾಲಿನಲ್ಲಿ ಪೆಟ್ರೋಲ್, ಡೀಸೆಲ್ ಮೇಲೆ ಯಾವುದೇ ತೆರಿಗೆ ವಿಧಿಸುವುದಿಲ್ಲ ಹಾಗೂ ತೆರಿಗೆ ಕಡಿತವನ್ನೂ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು ಅಭಿವೃದ್ಧಿಗೂ ಒತ್ತು: ಮುಂಬರುವ ಬಿಬಿಎಂಪಿ ಚುನಾವಣೆ ಗಮನದಲ್ಲಿಟ್ಟುಕೊಂಡು ಬೆಂಗಳೂರು ಅಭಿವೃದ್ಧಿಗೆ ಭರಪೂರ ಹಣ ನೀಡಿದ್ದಾರೆ. ನಗರದ ಸಮಗ್ರ ಅಭಿವೃದ್ಧಿಗೆ 7795 ಕೋಟಿ ನೀಡಿದ್ದಾರೆ. ಉಪನಗರ ರೈಲಿಗೆ ₹ 850 ಕೋಟಿ, ಮೆಟ್ರೋ ರೈಲು ಅಭಿವೃದ್ಧಿಗೆ ₹ 14,778 ಕೋಟಿ ಮೀಸಲಿಟ್ಟಿದ್ದಾರೆ.

ಕೃಷಿಗೆ ಆದ್ಯತೆ: ಇನ್ನೂ ಕೃಷಿ ವಲಯಕ್ಕೆ ಮುಖ್ಯಮಂತ್ರಿ ಬಜೆಟ್‌ನಲ್ಲಿ 31,021 ಕೋಟಿ ಮೀಸಲಿಟ್ಟಿದ್ದಾರೆ. ಸಾವಯವ ಕೃಷಿ ಉತ್ತೇಜನಕ್ಕೆ ₹500 ಕೋಟಿ ವೆಚ್ಚದಲ್ಲಿ ಯೋಜನೆ. ವಿಜಯಪುರ ಜಿಲ್ಲೆ ಇಟ್ಟಂಗಿಹಾಳ ಗ್ರಾಮದಲ್ಲಿ ಆತ್ಮನಿರ್ಭರ ಭಾರತ ಅಭಿಯಾನ ಯೋಜನೆಯಡಿ ಆಹಾರ ಪಾರ್ಕ್ ಸ್ಥಾಪನೆ, ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ ಇರುವ ಮೀಸಲಾತಿ ಶೇ 50ಕ್ಕೆ ಹೆಚ್ಚಿಸಲಾಗಿದೆ..

ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಬೇಡಿಕೆಯಂತೆ ಅನುಗ್ರಹ ಯೋಜನೆ(ಕುರಿ ಸತ್ತರೆ ₹ 5 ಸಾವಿರ ಪರಿಹಾರ ) ಮುಂದುವರೆಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT