ಬುಧವಾರ, ಮಾರ್ಚ್ 22, 2023
26 °C
ಮುರುಘಾಮಠ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿದ ರಿಟ್‌

'ಶೂನ್ಯ ಪೀಠದಲ್ಲಿ ಆವರಿಸಿದ ಶೂನ್ಯ–ಶರಣರ ಸ್ವಾಮಿತ್ವಕ್ಕೆ ಕವಿದ ಮೋಡ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೊಕ್ಸೊ), ಅತ್ಯಾಚಾರ, ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಗಂಭೀರವಾದ ಕ್ರಿಮಿನಲ್‌ ಪ್ರಕರಣಗಳಲ್ಲಿ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಮುರುಘಾ ಶರಣರ ಸ್ವಾಮಿತ್ವಕ್ಕೆ ಮೋಡ ಕವಿದಿದೆ. ಶೂನ್ಯಪೀಠದಲ್ಲಿ ಶೂನ್ಯ ಆವರಿಸಿದೆ! ಹಾಗಾಗಿಯೇ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಲಾಗಿದ್ದು ಸರ್ಕಾರದ ಕ್ರಮ ಯೋಗ್ಯವಾಗಿದೆ’ ಎಂದು ಆಡಳಿತಾಧಿಕಾರಿ ಪಿ.ಎಸ್‌. ವಸ್ತ್ರದ ಪರ ವಕೀಲರು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದರು.

ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎಸ್‌.ವಸ್ತ್ರದ ಅವರನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ (ಎಸ್‌ಜೆಎಂ) ಬೃಹನ್ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷ, ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು ಸಲ್ಲಿಸಿರುವ ರಿಟ್‌ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಮುಂದುವರಿಸಿತು.

ಪಿ.ಎಸ್.ವಸ್ತ್ರದ ಪರ ಹಾಜರಾಗಿ ಸುಮಾರು ಎರಡೂವರೆ ಗಂಟೆಗೂ ಹೆಚ್ಚು ಕಾಲ ಸುದೀರ್ಘ ವಾದ ಮಂಡಿಸಿದ ಹೈಕೋರ್ಟ್‌ನ ಹಿರಿಯ ವಕೀಲ ಗಂಗಾಧರ ಗುರುಮಠ ಅವರು, ‘ಸರ್ಕಾರ ಹೊರಡಿಸುವ ಒಂದು ಪ್ರಕಟಣೆಯೂ ಕಾನೂನೇ ಆಗುತ್ತದೆ. ಶರಣರು ನೋಂದಾಯಿತ ವಿದ್ಯಾಪೀಠ ಮತ್ತು ಟ್ರಸ್ಟ್‌ ಡೀಡ್‌ ಅನ್ನು ಸ್ಥಾಪಿಸಿದ್ದಾರೆ. ಹಾಗಾಗಿ, ಮಠದ ಆಡಳಿತದಲ್ಲಿ ಸರ್ಕಾರದ ಮಧ್ಯಪ್ರವೇಶ ಇಲ್ಲ ಎಂಬ ಅವರ ನಡೆಗೆ ಅವಕಾಶ ನೀಡಿದರೆ ಸರ್ಕಾರದ ಆದೇಶವನ್ನು ಅನೂರ್ಜಿತಗೊಳಿಸಿದಂತಾಗುತ್ತದೆ’ ಎಂದರು.

‘ಶರಣರು ತಮ್ಮ ಉತ್ತರಾಧಿಕಾರಿ ಪತ್ರದಲ್ಲಿ ಬರೆದಿರುವಂತೆ ವಿದ್ಯಾಪೀಠ ಮಠದ ಅವಿಭಾಜ್ಯ ಅಂಗ. ಮಠದ ವಿಸ್ತೃತ ಭಾಗವೇ ವಿದ್ಯಾಪೀಠ ಮತ್ತು ಟ್ರಸ್ಟ್‌. ಇವರೆಡನ್ನೂ ಹೊರಗಿಟ್ಟು ನೋಡಲು ಬರುವುದಿಲ್ಲ. ವಿದ್ಯಾಪೀಠ ಮತ್ತು ಟ್ರಸ್ಟ್‌ನಲ್ಲಿ ಶರಣರು ಏಕೈಕ ಟ್ರಸ್ಟಿ. ವಿದ್ಯಾಪೀಠದಲ್ಲಿ ಅವರ ಅನುಮತಿ ಇಲ್ಲದೇ ಯಾರೂ ಯಾವುದೇ ತೀರ್ಮಾನ ಕೈಗೊಳ್ಳುವಂತಿಲ್ಲ. ಹೀಗಾಗಿ ಮಠ, ವಿದ್ಯಾಪೀಠ ಮತ್ತು ಟ್ರಸ್ಟ್‌ಗಳಿಗೆ ತೀರ್ಮಾನ ಕೈಗೊಳ್ಳುವ ಏಕೈಕ ವ್ಯಕ್ತಿ ಶರಣರೇ ಆಗಿದ್ದಾರೆ. ಈ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಎರಡೂ ಜಿಪಿಎಗಳಲ್ಲಿ ಎಲ್ಲಿಯೂ ಅವರು ಯಾರಿಗೂ ಹಸ್ತಾಂತರಿಸಿಲ್ಲ. ಆದ್ದರಿಂದ, ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ನೇಮಕಕ್ಕೆ ಅವಕಾಶ ನೀಡಲಾಗಿದೆ’ ಎಂದು ಸಮರ್ಥಿಸಿಕೊಂಡರು. 

‘ಶರಣರು ಬೇರೊಬ್ಬರಿಗೆ ಜಿಪಿಎ (ಸಾಮಾನ್ಯ ಅಧಿಕಾರ ಪತ್ರ) ನೀಡಿರುವುದು ವಿದ್ಯಾಪೀಠ ಮತ್ತು ಟ್ರಸ್ಟ್‌ ನಡೆಸಲು ಅಲ್ಲ. ಕೇವಲ ಚೆಕ್‌ಗಳಿಗೆ ಸಹಿ ಮಾಡಲು ಮಾತ್ರ. ಅಂತೆಯೇ ಅವರು ಜಿಪಿಎ ಕೊಟ್ಟಿರುವುದು ಅವರು ಜೈಲಿಗೆ ಹೋದ ನಂತರ. ಕರ್ನಾಟಕ ಕೈದಿಗಳ ಕಾಯ್ದೆ–1974ರ ಕಲಂ 166ರ ಅನುಸಾರ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಯು ಇಂತಹ ಜಿಪಿಎ ನೀಡುವ ಮುನ್ನ ಜೈಲು ಸೂಪರಿಂಟೆಂಡೆಂಟ್‌ ಅವರ ಪೂರ್ವಾನುಮತಿ ಪಡೆದಿರಬೇಕು. ಹಾಗಾಗಿ, ಶರಣರ ಜಿಪಿಎ ಲೋಪದಿಂದ ಕೂಡಿದ್ದು ಅದಕ್ಕೆ ಕಾನೂನಿನ ಮಾನ್ಯತೆ ಇಲ್ಲ’ ಎಂದು ವಿವರಿಸಿದರು.

‘ಶರಣರು ಸಾಮಾನ್ಯ ಪ್ರಜೆ ಮತ್ತು ಮಠಾಧಿಪತಿಯಾಗಿ ಎರಡು ವ್ಯಕ್ತಿತ್ವಗಳನ್ನು ಹೊಂದಿರಲು ಸಾಧ್ಯವಿಲ್ಲ ಹಾಗೂ ಮಠಾಧಿಪತಿಯಾಗಿ ಜೈಲಿನಲ್ಲಿ ಇರುವ ಕಾರಣ ಮಠಾಧಿಪತಿ ಅಧಿಕಾರ ಅಥವಾ ಕಾನೂನಿನ ರಕ್ಷಣೆಯಲ್ಲಿ ಕೋರ್ಟ್‌ ಮೊರೆ ಹೊಕ್ಕು ರಕ್ಷಣೆ ಪಡೆಯಲು ಅವಕಾಶವೇ ಇಲ್ಲ. ಒಂದು ವೇಳೆ 162ನೇ ವಿಧಿಯ ಅನುಸಾರ ಆಡಳಿತಾಧಿಕಾರಿ ನೇಮಕ ಮಾಡಲು ಸಾಧ್ಯವಿಲ್ಲ ಎನ್ನುವಾದರೆ ಅನಾಥೋ ದೈವ ರಕ್ಷಕ ಎಂಬ (ಪೇರೆನ್ಸ್ ಪೇಟ್ರಿಯಾ) ನಿಯಮದ ಅನುಸಾರ ಆಡಳಿತಾಧಿಕಾರಿಯನ್ನು ನೇಮಿಸುವ ಅಧಿಕಾರ ಸರ್ಕಾರಕ್ಕೆ ಯಾವತ್ತೂ ಇದೆ’ ಎಂದರು.

‘ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್‌ನ ಎರಡನೇ ಹೆಚ್ಚುವರಿ ನ್ಯಾಯಾಲಯವು ಶರಣರನ್ನು; ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ–1988ರ ಕಲಂ 8 (2)ರ ಅನ್ವಯ ದೋಷಾರೋಪಕ್ಕೆ ಒಳಗಾಗಿರುವ ಮಠಾಧಿಪತಿ ಯಾವುದೇ ಅಧಿಕಾರ ಚಲಾಯಿಸುವಂತಿಲ್ಲ ಎಂದು ಅವರ ಅಧಿಕಾರವನ್ನು ನಿರ್ಬಂಧಿಸಿರುವ ಕಾರಣ ಮಠದ ಆಡಳಿತ ವ್ಯವಸ್ಥೆಯಲ್ಲಿ ನಿರ್ವಾತ ಉಂಟಾಗಿದೆ’ ಎಂದರು.

‘ಶರಣರಿಗೆ ವ್ಯಕ್ತಿಗತವಾಗಿ ಲಭಿಸಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ಅಂದರೆ, ಎಡಗೈಯಲ್ಲಿ ಇಷ್ಟಲಿಂಗ ಇರಿಸಿಕೊಂಡು ಪೂಜೆ ಮಾಡುವ ಧಾರ್ಮಿಕ ಸ್ವಾತಂತ್ರ್ಯವನ್ನು ಮುಂದುವರಿಸಲಾಗಿದೆ. ಇದಕ್ಕೆ ಯಾವ ನಿರ್ಬಂಧವೂ ಇಲ್ಲ. ಅಷ್ಟರಮಟ್ಟಿಗೆ ಮಾತ್ರ ಅವರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಆದರೆ, ಜೈಲಿನಲ್ಲಿ ಇರುವ ಮಠಾಧಿಪತಿಗೆ ಸಂವಿಧಾನ ಅಥವಾ ಇತರೆ ಕಾನೂನುಗಳ ರಕ್ಷಣೆ ಮತ್ತು ಸವಲತ್ತುಗಳು ಸಿಗುವುದಿಲ್ಲ’ ಎಂದರು. 

‘ಸಿವಿಲ್‌ ಪ್ರಕ್ರಿಯಾ ಸಂಹಿತೆಯ (ಸಿಪಿಸಿ) ಕಲಂ 92ರ ಅನುಸಾರ ಸಿವಿಲ್‌ ದಾವೆ ಹೂಡಿ ನ್ಯಾಯ ಪಡೆಯಬಹುದು ಎಂದು ಅರ್ಜಿದಾರರ ವಾದ ಸಾಧುವಲ್ಲ. ಅದು ರಾಜ್ಯ ನಿರ್ದೇಶಕ ತತ್ವಗಳ ಅಡಿಯಲ್ಲಿ ಬರುತ್ತದೆ. ಈ ನಿಟ್ಟಿನಲ್ಲಿ ಟ್ರಸ್ಟ್‌ನ ಸದಸ್ಯ ಅಥವಾ ಅಡ್ವೊಕೇಟ್‌ ಜನರಲ್‌ಗೆ ಈ ಅವಕಾಶವಿದೆ. ಆದರೆ 162ನೇ ವಿಧಿಯ ಅಧಿಕಾರವೇ ಬೇರೆ. ಆದ್ದರಿಂದ, ಅರ್ಜಿದಾರರ ವಾದ ತಪ್ಪು ಗ್ರಹಿಕೆಯಿಂದ ಕೂಡಿದೆ. ಅಷ್ಟಕ್ಕೂ ಶರಣರು ಮಠದ ಪರಂಪರೆಯ ಅನುಸಾರ ತಮ್ಮ ಜೀವಿತಾವಧಿಯಲ್ಲಿ ಉತ್ತರಾಧಿಕಾರಿ ನೇಮಿಸಿದ ಪತ್ರಕ್ಕೆ ಸರ್ಕಾರದ ಅನುಸಮರ್ಥನೆ ಕೋರುವ ಸಂಪ್ರದಾಯವಿದೆ. ಹೀಗಾಗಿ, ಆಡಳಿತಾಧಿಕಾರಿ ನೇಮಕ ಪ್ರಶ್ನಿಸಲು ಬರುವುದಿಲ್ಲ. ಅಲ್ಲದೇ, ಧಾರ್ಮಿಕ ದತ್ತಿ ಕಾಯ್ದೆ–1997ರ ಕಲಂ 78ರ ಅಡಿಯಲ್ಲಿ ಸಂಪ್ರದಾಯವನ್ನು ಕಾನೂನಿನ ಭಾಗವೆಂದೇ ಪರಿಗಣಿಸಬೇಕಾಗಿರುತ್ತದೆ. ಆದ್ದರಿಂದ, ಆಡಳಿತಾಧಿಕಾರಿ ನೇಮಕ ಅನೂರ್ಜಿತಗೊಳಿಸಲು ಸಾಧ್ಯವಿಲ್ಲ’ ಎಂದರು. ವಿಚಾರಣೆಯನ್ನು ಇದೇ 13ಕ್ಕೆ ಮುಂದೂಡಲಾಗಿದೆ. 

ಪ್ರಕರಣವೇನು?: ‘ಚಿತ್ರದುರ್ಗ ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು, ಪೊಕ್ಸೊ ಪ್ರಕರಣದಲ್ಲಿ ಜೈಲು ಸೇರಿದ್ದು, ರಾಜ್ಯ ಸರ್ಕಾರ ಪಿ.ಎಸ್.ವಸ್ತ್ರದ ಅವರನ್ನು 2022ರ ಡಿಸೆಂಬರ್ 13ರಂದು ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿತ್ತು. ಅವರು 2022ರ ಡಿಸೆಂಬರ್ 15ರಂದು ಅಧಿಕಾರ ಸ್ವೀಕರಿಸಿದ್ದಾರೆ. ಸಂವಿಧಾನದ 162ನೇ ವಿಧಿಯ ಅನುಸಾರ ಆಡಳಿತಾಧಿಕಾರಿ ನೇಮಕ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಸಂವಿಧಾನಬಾಹಿರ’ ಎಂಬುದು ಅರ್ಜಿದಾರರ ವಾದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು