ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

500 ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್: ಡಾ.ಕೆ. ಸುಧಾಕರ್

ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾಹಿತಿ * ಈ ವರ್ಷ 1,939 ಮಕ್ಕಳಲ್ಲಿ ಶ್ರವಣ ದೋಷ ಪತ್ತೆ
Last Updated 27 ನವೆಂಬರ್ 2022, 16:14 IST
ಅಕ್ಷರ ಗಾತ್ರ

ಬೆಂಗಳೂರು:‘ಜನಿಸುವಾಗಲೇ ಕಿವುಡುತನ ಸಮಸ್ಯೆ ಹೊಂದಿರುವ 500 ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್‌ಮಾಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಶ್ರವಣ ದೋಷ ನಿವಾರಣೆಗೆ ಸಂಬಂಧಿಸಿದಂತೆ ಇಲಾಖೆಯಡಿಯ ಯೋಜನೆಗಳ ಬಗ್ಗೆ ಪ್ರಗತಿ ಪರಿಶೀಲಿಸಿದ ಅವರು, ‘ಎಲ್ಲರಿಗೂ ಆರೋಗ್ಯ ಎಂಬ ಘೋಷಣೆಯನ್ನು ಸಾಕಾರಗೊಳಿಸಲು ಹಾಗೂ ಶ್ರವಣ ದೋಷ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. 6 ವರ್ಷದೊಳಗಿನ ಮಕ್ಕಳ ಶ್ರವಣ ದೋಷ ನಿವಾರಣೆಗೆ ವಿಶೇಷ ಗಮನ ಹರಿಸಲಾಗಿದೆ. ಈ ವರ್ಷ 500 ಮಕ್ಕಳಿಗೆ ಉಚಿತವಾಗಿ ಕಾಕ್ಲಿಯರ್ ಇಂಪ್ಲಾಂಟ್ ಮಾಡಲು ಸರ್ಕಾರ ಎಲ್ಲ ವ್ಯವಸ್ಥೆ ಮಾಡಿದೆ’ ಎಂದರು.

‘ಈ ವರ್ಷ 6 ವರ್ಷದೊಳಗಿನ 1,939 ಮಕ್ಕಳು ಶ್ರವಣ ದೋಷಕ್ಕೆ ಒಳಗಾಗಿದ್ದಾರೆ ಎಂದು ಗುರುತಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಜನ್ಮಜಾತ ಕಿವುಡು ಸಮಸ್ಯೆಗೆ ಸಿಲುಕಿದ್ದು, ಪ್ರಸವಪೂರ್ವ ಅವಧಿಯಲ್ಲಿ ಔಷಧ ಸೇವನೆ, ವೈರಾಣು ಸೋಂಕು, ಉಸಿರುಗಟ್ಟುವಿಕೆಯಂತಹ ಸಮಸ್ಯೆಗಳೇ ಇದಕ್ಕೆ ಮೂಲ ಕಾರಣ’ ಎಂದು ಹೇಳಿದರು.

20 ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ:

‘ಕಾಕ್ಲಿಯರ್ ಇಂಪ್ಲಾಂಟ್ ಒಂದು ಸಣ್ಣ ಎಲೆಕ್ಟ್ರಾನಿಕ್ ಸಾಧನವಾಗಿದ್ದು, ಈ ಸಾಧನವು ತೀವ್ರ ಮತ್ತು ಗಂಭೀರ ಪ್ರಮಾಣದಲ್ಲಿ ಶ್ರವಣ ದೋಷ ಹೊಂದಿರುವ ಮಕ್ಕಳಿಗೆ ಶಬ್ದಗಳನ್ನು ಕೇಳಲು ಸಹಾಯ ಮಾಡುತ್ತದೆ. ಶ್ರವಣ ದೋಷಕ್ಕೆ ಸರ್ಕಾರದಿಂದ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಶಸ್ತ್ರಚಿಕಿತ್ಸೆಗೆ ನೆರವಾಗುವ ಆಶಾ ಕಾರ್ಯಕರ್ತೆಯರಿಗೆ ₹ 250 ಗೌರವಧನ ನೀಡಲಾಗುತ್ತಿದೆ. ಇಂತಹ ಶಸ್ತ್ರಚಿಕಿತ್ಸೆಯನ್ನು ಕೆ.ಸಿ. ಜನರಲ್ ಆಸ್ಪತ್ರೆ, ಇಂದಿರಾಗಾಂಧಿ ಮಕ್ಕಳ ಸಂಸ್ಥೆ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಬೆಂಗಳೂರು ವೈದ್ಯಕೀಯ ಕಾಲೇಜು, ಹುಬ್ಬಳ್ಳಿಯ ಕಿಮ್ಸ್ ಸೇರಿ 20 ಆಸ್ಪತ್ರೆಗಳಲ್ಲಿ ನಡೆಸಲಾಗುತ್ತಿದೆ. ಇನ್ನಷ್ಟು ಆಸ್ಪತ್ರೆಗಳನ್ನು ಉಚಿತ ಶಸ್ತ್ರಚಿಕಿತ್ಸೆಗೆ ಸೇರ್ಪಡೆ ಮಾಡಲಾಗುವುದು’ ಎಂದು ತಿಳಿಸಿದರು.

‘ಕಿವುಡುತನ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮದಡಿ (ಎನ್.ಪಿ.ಪಿ.ಸಿ.ಡಿ.) ಕಾರ್ಯನಿರ್ವಹಿಸುವ ಶ್ರವಣಶಾಸ್ತ್ರ ತಂಡಗಳು, ರಾಷ್ಟ್ರೀಯ ಬಾಲ ಸುರಕ್ಷಾ ಕಾರ್ಯಕ್ರಮದಡಿ (ಆರ್.ಬಿ.ಎಸ್.ಕೆ.) ಸಂಚಾರಿ ಆರೋಗ್ಯ ತಂಡಗಳ ಸಹಯೋಗದೊಂದಿಗೆ ಫಲಾನುಭವಿಗಳನ್ನು ಗುರುತಿಸುತ್ತಿವೆ. ಆಯ್ಕೆಯಾದ ಅರ್ಹ ಮಕ್ಕಳನ್ನು ಹೆಚ್ಚಿನ ಮೌಲ್ಯಮಾಪನ ಮತ್ತು ನಿರ್ವಹಣೆಗೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT