ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಸರ್ಕಾರದಿಂದ ನಿವೇಶನ, ಮನೆ: ಸಿಎಂ ಬೊಮ್ಮಾಯಿ

ಸ್ವಯಂ ಉದ್ಯೋಗಕ್ಕೂ ನೆರವು
Last Updated 13 ಮೇ 2022, 12:33 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಆ್ಯಸಿಡ್ ದಾಳಿಯಿಂದ ಸಂತ್ರಸ್ತರಾದ ಎಲ್ಲ ಮಹಿಳೆಯರಿಗೆ ಸರ್ಕಾರದಿಂದ ನಿವೇಶನ, ಮನೆ ಮತ್ತು ಸ್ವಯಂ ಉದ್ಯೋಗಕ್ಕೆ ತಲಾ ₹ 5 ಲಕ್ಷ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.‌

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶುಕ್ರವಾರ ಕಂದಾಯ ಇಲಾಖೆಯ ವತಿಯಿಂದ ಆಯೋಜಿಸಿದ್ದ 'ಹಲೋ ಕಂದಾಯ ಸಚಿವರೇ' ಸಹಾಯವಾಣಿ ಉದ್ಘಾಟನೆ ಮತ್ತು ವಿವಿಧ ಸಾಮಾಜಿಕ ಪಿಂಚಣಿ ಯೋಜನೆಗಳ ಫಲಾನುಭವಿಗಳಿಗೆ ಪರಿಷ್ಕೃತ ದರದ ಪಿಂಚಣಿ ಆದೇಶ ವಿತರಿಸಿದ ಬಳಿಕ ಅವರು ಮಾತನಾಡಿದರು.

ಆ್ಯಸಿಡ್ ದಾಳಿ ಸಂತ್ರಸ್ತರಿಗೆ ನೀಡುತ್ತಿದ್ದ ಮಾಸಿಕ ಪಿಂಚಣಿ ಮೊತ್ತವನ್ನು ₹3,000ದಿಂದ ₹10,000ಕ್ಕೆ ಹೆಚ್ಷಿಸಲಾಗಿದೆ. ಸಮಾರಂಭದಲ್ಲಿ ಕೆಲವು ಸಂತ್ರಸ್ತರಿಗೆ ಮುಖ್ಯಮಂತ್ರಿ ಪಿಂಚಣಿ ಆದೇಶ ವಿತರಿಸಿದರು. ಆಗ ಸಂತ್ರಸ್ತೆಯರು ತಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿಯವರ ಬಳಿ ಹೇಳಿಕೊಂಡರು. ಬಳಿಕ ಸಮಾರಂಭ ಉದ್ದೇಶಿಸಿ ಮಾತನಾಡಿದ ಬೊಮ್ಮಾಯಿ, ಆ್ಯಸಿಡ್ ದಾಳಿಯ ಸಂತ್ರಸ್ತರಿಗೆ ನಿವೇಶನ, ಮನೆ ಮತ್ತು ಸ್ವಯಂ ಉದ್ಯೋಗಕ್ಕೆ ನೆರವು ನೀಡುವ ಘೋಷಣೆ ಮಾಡಿದರು.

'ಆ್ಯಸಿಡ್ ದಾಳಿಯಿಂದ ಸಂತ್ರಸ್ತರಾದ ಎಲ್ಲ ಮಹಿಳೆಯರಿಗೂ ಸರ್ಕಾರದಿಂದ ನಿವೇಶನ ಮಂಜೂರು ಮಾಡಿ, ಮನೆಯನ್ನೂ ನಿರ್ಮಿಸಿ ಕೊಡಲಾಗುವುದು. ಸ್ವಯಂ ಉದ್ಯೋಗ ಯೋಜನೆಯಡಿ ತಲಾ ₹ 5 ಲಕ್ಷ ನೆರವು ನೀಡಲಾಗುವುದು. ಶನಿವಾರವೇ ಈ ಸಂಬಂಧ ಆದೇಶ ಹೊರಡಿಸಲಾಗುವುದು' ಎಂದರು.

'ರಕ್ಷಿಸಬೇಕಾದ ಪುರುಷರೇ ಮಹಿಳೆಯರ ಮೇಲೆ ಆ್ಯಸಿಡ್ ದಾಳಿ ನಡೆಸಿ ಅವರು ಜೀವನಪರ್ಯಂತ ನರಳುವಂತೆ ಮಾಡಿದ್ದಾರೆ. ಇಂತಹ ಕೃತ್ಯಗಳು ಪುರುಷರು ತಲೆ‌ ತಗ್ಗಿಸುವಂತೆ ಮಾಡಿವೆ. ನೋವು ತುಂಬಿಕೊಂಡು ಜೀವನ ನಡೆಸುವ ಸಂತ್ರಸ್ತೆಯರ ಧೈರ್ಯವನ್ನು ಶ್ಲಾಘಿಸಬೇಕಿದೆ. ಈಗ ಸರ್ಕಾರ ಅವರ ನೆರವಿಗೆ ಬರುತ್ತಿದೆ' ಎಂದರು.

ಗದ್ಗದಿತರಾತ ಅಶೋಕ: ಮುಖ್ಯಮಂತ್ರಿ ಮಾತನಾಡಿದ ಬಳಿಕ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್.‌ ಅಶೋಕ, 'ಸರಿಯಾದ ಉದ್ಯೋಗವಿಲ್ಲದೆ ಜೀವನ ನಿರ್ವಹಣೆಗೆ ಕಷ್ಟವಾಗಿದೆ ಎಂದು ಸಂತ್ರಸ್ತೆಯರು ನನ್ನ ಬಳಿ ಹೇಳಿಕೊಂಡಿದ್ದರು. ಅವರಿಗೆ ಸ್ವಯಂ ಉದ್ಯೋಗಕ್ಕೆ ಸಾಲ ನೀಡುವಂತೆ ನಾನು ಮುಖ್ಯಮಂತ್ರಿಯವರಲ್ಲಿ ಮಮವಿ ಮಾಡಿದ್ದೆ. ಅವರು ವಸತಿ ಸೌಕರ್ಯ ಮತ್ತು ಸ್ವಯಂ ಉದ್ಯೋಗ ಎರಡಕ್ಕೂ ನೆರವು ಘೋಷಿಸಿ ತಾಯಿ ಹೃದಯ ಪ್ರದರ್ಶಿಸಿದ್ದಾರೆ' ಎಂದು ಗದ್ಗದಿತರಾದರು.

ಸಂಸದ ಪಿ.ಸಿ.ಮೋಹನ್, ಶಾಸಕರಾದ ರಿಜ್ವಾನ್ ಅರ್ಷದ್, ಎಂ.ಪಿ.‌ ಕುಮಾರಸ್ವಾಮಿ, ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಕೃಷ್ಣಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT