ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಯುವ ನೀತಿ ಬಜೆಟ್‌ನಲ್ಲಿ ಘೋಷಣೆ: ಬೊಮ್ಮಾಯಿ

ಸ್ವಾಮಿ ವಿವೇಕಾನಂದರ 159ನೇ ಜನ್ಮದಿನ ಆಚರಣೆ
Last Updated 13 ಜನವರಿ 2022, 19:59 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ಯುವನೀತಿಯನ್ನು ಜಾರಿಗೆ ತರಲು ಸರ್ಕಾರ ಉದ್ದೇಶಿಸಿದೆ. ಯುವ ಜನರ ಕ್ರಿಯಾಶೀಲತೆಗೆ ಉತ್ತೇಜನ ನೀಡುವ ಹಲವು ಯೋಜನೆಗಳು ಇದ್ದು, ಅವುಗಳನ್ನು ಮುಂಬರುವ ಬಜೆಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಬುಧವಾರಸ್ವಾಮಿ ವಿವೇಕಾನಂದರ 159 ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಭಾಗವಹಿಸಿ ಮಾತನಾಡಿದರು.

ಯುವ ಜನರಿಗೆ ತತ್ವಾಧಾರಿತವಾದ ವೈಚಾರಿಕ ನೆಲೆಯಲ್ಲಿ ಹೆಚ್ಚಿನ ಬೆಂಬಲ, ಪ್ರೋತ್ಸಾಹ ನೀಡಲು ಸರ್ಕಾರ ಸಿದ್ಧವಿದೆ. ಇದಕ್ಕಾಗಿ ವಿಶೇಷ ಯೋಜನೆ ರೂಪಿಸುತ್ತಿದ್ದು,ಉನ್ನತ ಮಟ್ಟದಲ್ಲಿ ಸಮಾಲೋಚನೆಗಳು ನಡೆದಿವೆ. ಅವುಗಳನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗುವುದು ಎಂದರು.

‘ವಿವೇಕಾನಂದರು ಯುಗ ಪುರುಷರಾಗಿದ್ದರು. ಅವರು ದೇಶದ ಯುವ ಸಮೂಹದ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದರು. ವಿವೇಕಾನಂದರ ಚಿಂತನೆಗಳಿಗೆ ತಕ್ಕಂತೆ ನಮ್ಮ ಸರ್ಕಾರವು ಯುವಜನರ ಭವಿಷ್ಯವನ್ನು ರೂಪಿಸಲಿದೆ. ಸ್ವತಃ ನಾನು ವಿವೇಕಾನಂದರ ವಿಚಾರಗಳ ವಿದ್ಯಾರ್ಥಿಯಾಗಿದ್ದೇನೆ. ಅವರದು ಕಾಲ ಮತ್ತು ದೇಶಗಳನ್ನು ಮೀರಿದ ಚಿಂತನೆಗಳಾಗಿದ್ದವು. ಪ್ರತಿದಿನವೂ ಅವರು ಹೊಸ ಹಾದಿಯಲ್ಲಿ ಮುನ್ನಡೆಯುತ್ತಿದ್ದರು. ಮನುಷ್ಯ ಭೌತಿಕವಾಗಿ ಕಣ್ಮರೆಯಾದರೂ ಚಿರಂತನವಾಗಿ ಹೇಗೆ ಬದುಕಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ’ ಎಂದು ಬೊಮ್ಮಾಯಿ ಹೇಳಿದರು.

ವಿವೇಕಾನಂದರಿಗೆ ರಾಮಕೃಷ್ಣ ಪರಮಹಂಸರು ಅನುಭಾವಿ ಗುರುವಾಗಿ ಸಿಕ್ಕಿದರು. ತಮ್ಮ ಶಿಷ್ಯನಿಗೆ ಪರಮಹಂಸರು ಒಳ್ಳೆಯ ಹೆಸರನ್ನೇ ಇಟ್ಟರು. ಎಲ್ಲೆಲ್ಲಿ ವಿವೇಕ ಇರುತ್ತದೆಯೋ ಅಲ್ಲೆಲ್ಲ ಆನಂದವಿರುತ್ತದೆ. ಇದು ವಿವೇಕಾನಂದರಿಗೆ ಅನ್ವರ್ಥವಾಗುತ್ತದೆ ಎಂದು ಅವರು ವ್ಯಾಖ್ಯಾನಿಸಿದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ, ರಾಜ್ಯವು ಇಂದು ಗುಣಮಟ್ಟದ ಶಿಕ್ಷಣ ಮತ್ತು ಉದ್ಯಮಶೀಲತೆಗೆ ಹೆಸರಾಗಿದ್ದು, ವಿವೇಕಾನಂದರ ಆಶಯದಂತೆ ಜಾಗತಿಕ ನಾಯಕತ್ವವನ್ನು ಸೃಷ್ಟಿಸುತ್ತಿದೆ. ಅಕ್ಷರ ಕಲಿಕೆಯಷ್ಟೇ ಶಿಕ್ಷಣವಲ್ಲ. ವಿದ್ಯೆಯಲ್ಲಿ ಆಧ್ಯಾತ್ಮಿಕ, ನೈತಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಆಯಾಮಗಳು ಇರಬೇಕು ಎಂದೂ ಅಭಿಪ್ರಾಯಪಟ್ಟರು.

ಬೆಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ತದ್ಯುಕ್ತಾನಂದ ಮಹಾರಾಜ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕ್ರೀಡಾ ಮತ್ತು ಯುವ ಜನ ಸಬಲೀಕರಣ ಸಚಿವ ನಾರಾಯಣಗೌಡ ಮತ್ತು ಹಿರಿಯ ಅಧಿಕಾರಿಗಳು, ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಯುವಜನರಿಗಾಗಿ ಇರುವ ವಿವಿಧ ಯೋಜನೆಗಳ ಕುರಿತ ಸಮಗ್ರ ಮಾಹಿತಿ ಒಳಗೊಂಡ ‘ಯುವಜನ ಕಣಜ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT