ಬೆಂಗಳೂರು: ಗಡಿ ಕನ್ನಡಿಗರಿಗೆ ಆರೋಗ್ಯ ವಿಮೆ ಯೋಜನೆ ವಿಸ್ತರಿಸುವ ಮಹಾರಾಷ್ಟ್ರ ಸಚಿವ ಸಂಪುಟ ಸಭೆಯ ನಿರ್ಣಯವನ್ನು ಖಂಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈ ವಿಷಯವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಮನಕ್ಕೆ ತರುವುದಾಗಿ ಹೇಳಿದ್ದಾರೆ.
ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕರ್ನಾಟಕದ ಗಡಿ ಭಾಗದ ಜನರಿಗೆ ಆರೋಗ್ಯ ಯೋಜನೆ ವಿಮೆ ಯೋಜನೆ ಜಾರಿ ಮಾಡುವುದಾಗಿ ಮಹಾರಾಷ್ಟ್ರ ಸಂಪುಟ ನಿರ್ಣಯ ತೆಗೆದುಕೊಂಡು ಪ್ರಕಟಿಸಿರುವುದು ಅಕ್ಷಮ್ಯ ಅಪರಾಧ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದಾಗ, ಸುಪ್ರೀಂಕೋರ್ಟ್ ಆದೇಶ ಬರುವವರೆಗೆ ಕಾಯಬೇಕು. ಅಲ್ಲಿಯವರೆಗೆ ಯಾವುದೇ ರೀತಿಯ ಪ್ರಚೋದನೆಗಳನ್ನು ಮಾಡಬಾರದು ಎಂಬ ಒಪ್ಪಂದಕ್ಕೆ ಬರಲಾಗಿತ್ತು. ಈಗ ಅದರ ಉಲ್ಲಂಘನೆ ಆಗಿದೆ. ಮಹಾರಾಷ್ಟ್ರ ಈ ನಿರ್ಣಯ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
‘ಈ ಎಲ್ಲ ವಿಚಾರಗಳನ್ನು ಅಮಿತ್ ಶಾ ಅವರ ಗಮನಕ್ಕೆ ತರಲಾಗುವುದು. ಈ ರೀತಿಯ ಯೋಜನೆಗಳನ್ನು ನಾವೂ ಪ್ರಕಟಿಸಬಹುದು. ಹಲವಾರು ತಾಲ್ಲೂಕುಗಳು, ಗ್ರಾಮ ಪಂಚಾಯಿತಿಗಳು ಮಹಾರಾಷ್ಟ್ರದಲ್ಲಿ ನಮಗೆ ನ್ಯಾಯ ಸಿಗುತ್ತಿಲ್ಲ. ಕರ್ನಾಟಕಕ್ಕೆ ಸೇರಬೇಕು ಎಂದು ಈಗಾಗಲೇ ನಿರ್ಣಯ ಮಾಡಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ ಸರ್ಕಾರ ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು’ ಎಂದು ಬೊಮ್ಮಾಯಿ ಹೇಳಿದರು.
ಕಾಳ್ಗಿಚ್ಚು ನಿಯಂತ್ರಣಕ್ಕೆ ಕ್ರಮ: ಬೇಸಿಗೆಯಿಂದಾಗಿ ರಾಜ್ಯದ ಹಲವು ಕಡೆಗಳಲ್ಲಿ ಕಾಳ್ಗಿಚ್ಚು ಆಗುತ್ತಿದೆ. ಸಾಧ್ಯ ಇರುವ ಕಡೆಗಳಲ್ಲಿ ಪೂರ್ವಭಾವಿ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ. ಪ್ರಸ್ತುತ ಕಾಳ್ಗಿಚ್ಚನ್ನು ನಂದಿಸುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ ಎಂದೂ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.