ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಮ್‌ಡಿಸಿವಿರ್ ಕೃತಕ ಅಭಾವಕ್ಕೆ ಅವಕಾಶ ಕೊಡಬೇಡಿ: ಯಡಿಯೂರಪ್ಪ

ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ
Last Updated 29 ಏಪ್ರಿಲ್ 2021, 21:13 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್ ರೋಗಿಗಳ ಪೈಕಿ, ಅಗತ್ಯ ಇರುವವರಿಗೆ ಮಾತ್ರ ರೆಮ್‌ಡಿಸಿವಿರ್ ಚುಚ್ಚುಮದ್ದು ಮತ್ತು ಆಮ್ಲಜನಕ ಸಹಿತ ಹಾಸಿಗೆ ಸೌಲಭ್ಯ ಒದಗಿಸಬೇಕು. ಕೃತಕ ಅಭಾವ ಸೃಷ್ಟಿ ಆಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದರು.

ಕೋವಿಡ್‌ ಪರಿಸ್ಥಿತಿ ಅವಲೋಕಿಸಲು ಎಲ್ಲ ಜಿಲ್ಲೆಗಳ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಗುರುವಾರ ಅವರು ವಿಡಿಯೊ ಸಂವಾದ ನಡೆಸಿದರು.

‘ಪ್ರತಿ ಆಸ್ಪತ್ರೆಯಲ್ಲಿ ರೆಮ್‌ಡಿಸಿವರ್ ಔಷಧ ಮತ್ತು ಆಮ್ಲಜನಕ ಸಂಗ್ರಹದ ಬಗ್ಗೆ ಲೆಕ್ಕ ಪರಿಶೋಧನೆ ಆಗಬೇಕು. ವೆಂಟಿಲೇಟರ್ ಹಾಸಿಗೆಗಳನ್ನು ಕೂಡಾ ವಿವೇಚನೆಯಿಂದ ಬಳಸಬೇಕು. ಎಲ್ಲ ಆಸ್ಪತ್ರೆಗಳಿಗೆ ಆಮ್ಲಜನಕ ಕೊರತೆಯಾದರೆ ಅಥವಾ ತುರ್ತು ಸಂದರ್ಭದಲ್ಲಿ ನೆರೆಯ ಜಿಲ್ಲೆಯಿಂದ ಪಡೆದುಕೊಳ್ಳುವಂತೆ ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು' ಎಂದು ಸಲಹೆ ನೀಡಿದರು.

‘ಕೋವಿಡ್ ಸೋಂಕು ತಡೆಯಲು ಅಗತ್ಯ ಕ್ರಮಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು. ರೋಗಲಕ್ಷಣ ಇದ್ದವರನ್ನು ಮಾತ್ರ ಪರೀಕ್ಷೆಗೆ ಒಳಪಡಿಸಿ, 24 ಗಂಟೆಗಳಲ್ಲಿ ಫಲಿತಾಂಶ ಕೊಡಬೇಕು. ಬಾಕಿ ಇರುವ ಪರೀಕ್ಷೆಗಳನ್ನು ಕೂಡಲೇ ಪೂರ್ಣಗೊಳಿಸಬೇಕು' ಎಂದು ಸೂಚಿಸಿದರು.

‘ಕೆಲವು ಜಿಲ್ಲೆಗಳಲ್ಲಿ ಇನ್ನೂ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆದಿಲ್ಲ. ಅಂಥ ಜಿಲ್ಲೆಗಳಲ್ಲಿ ಆದ್ಯತೆಯ ಮೇರೆಗೆ ತೆರೆಯುಬೇಕು. ಎಲ್ಲ ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರದಲ್ಲಿ ಸೆಂಟರ್‌ಗಳನ್ನು ತೆರೆಯಬೇಕು. ಈ ಉದ್ದೇಶಕ್ಕೆ ವಸತಿ ಶಾಲೆಗಳು, ಹಾಸ್ಟೆಲ್‌ಗಳನ್ನು ಬಳಸಿಕೊಳ್ಳಬಹುದು. ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕುಮಟ್ಟದಲ್ಲಿ ಕಾರ್ಯಪಡೆ ರಚಿಸಿ, ರೋಗಿಗಳ ಮೇಲೆ ಕಾಳಜಿ ವಹಿಸಬೇಕು' ಎಂದೂ ಮುಖ್ಯಮಂತ್ರಿ ನಿರ್ದೇಶನ ನೀಡಿದರು.

'ಕೋವಿಡ್‌ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದರು.

***

ಕೋವಿಡ್ ಪರಿಹಾರ ನಿಧಿಗೆ ಸಚಿವರು ಒಂದು ವರ್ಷದ ಹಾಗೂ ಶಾಸಕರು ಒಂದು ತಿಂಗಳ ವೇತನವನ್ನು ದೇಣಿಗೆ ನೀಡಲು ಮುಂದಾಗಬೇಕು.
-ಬಿ.ಎಸ್‌. ಯಡಿಯೂರಪ್ಪ,ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT