ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತೃಪ್ತರು ಪಕ್ಷದ ವರಿಷ್ಠರಿಗೆ ದೂರು ನೀಡಲಿ, ಅಭ್ಯಂತರವಿಲ್ಲ: ಬಿಎಸ್‌ವೈ

ಸಚಿವ ಸಂಪುಟ ವಿಸ್ತರಣೆ
Last Updated 14 ಜನವರಿ 2021, 6:41 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಯಾವ ಶಾಸಕರಿಗೆ ಅಸಮಾಧಾನ ಇದೆಯೋ ಅಂಥವರು ದೆಹಲಿಗೆ ಹೋಗಿ ಪಕ್ಷದ ವರಿಷ್ಠರಿಗೆ ದೂರು ನೀಡಲಿ ನನಗೆ ಅಭ್ಯಂತರವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅತೃಪ್ತ ಶಾಸಕರು ಮನಸ್ಸಿಗೆ ಬಂದಂತೆ ಮಾತನಾಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡಬಾರದು. ಯಾವುದೇ ಬೆಳವಣಿಗೆಯಾದರೂ ಪಕ್ಷದ ವರಿಷ್ಠರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ’ ಎಂದರು ಹೇಳಿದರು.

ಪಕ್ಷದ ವರಿಷ್ಠರಿಗೆ ಯಾವುದು ಸರಿ ತಪ್ಪು ಎಂಬುದು ತಿಳಿದಿದೆ. ನಮ್ಮ ಶಾಸಕರು ವಿನಾಕಾರಣ ಹೇಳಿಕೆ ನೀಡುವ ಬದಲು ದೂರು ನೀಡಲಿ ಎಂದರು.

ಕೇಂದ್ರದ ನಾಯಕರಿಗೆ ದೂರು ನೀಡಲಿ

ದಾವಣಗೆರೆ ವರದಿ: ‘ಸಚಿವ ಸಂಪುಟ ವಿಸ್ತರಣೆಗೆ ಬಗ್ಗೆ ನನ್ನ ವಿರುದ್ಧ ಮಾಡುತ್ತಿರುವ ಆರೋಪಗಳು ಸತ್ಯವಾಗಿದ್ದರೆ ಅತೃಪ್ತ ಶಾಸಕರು ಪಕ್ಷದ ಕೇಂದ್ರ ನಾಯಕರಿಗೆ ದೂರು ನೀಡಲಿ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಹರಿಹರದಲ್ಲಿ ಗುರುವಾರ ಆರಂಭಗೊಂಡ ‘ಹರ ಜಾತ್ರೆ’ಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿದ್ದ ಮುಖ್ಯಮಂತ್ರಿ, ಸುದ್ದಿಗಾರರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.

‘ನನ್ನ ಇತಿ–ಮಿತಿಗಳಲ್ಲಿ ಸಚಿವ ಸಂಪುಟದ ವಿಸ್ತರಣೆ ಮಾಡಿದ್ದೇನೆ. ಕೇಂದ್ರದ ನಾಯಕರ ಅಪೇಕ್ಷೆಯಂತೆ ಒಂದು ಸ್ಥಾನವನ್ನು ಖಾಲಿ ಇಟ್ಟುಕೊಂಡಿದ್ದೇನೆ. 10–12 ಜನ ತಮ್ಮನ್ನು ಮಂತ್ರಿ ಮಾಡಿಲ್ಲ ಎಂದು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರು ಇಲ್ಲಿ ಆರೋಪ ಮಾಡುವ ಬದಲು ಕೇಂದ್ರದ ನಾಯಕರ ಬಳಿಗೆ ಹೋಗಿ ಮಾತನಾಡಲಿ. ಇದಕ್ಕೆ ಯಾರೂ ಅಡ್ಡಿ ಮಾಡುವುದಿಲ್ಲ. ಇಲ್ಲಿ ಈ ರೀತಿ ಹೇಳಿಕೆ ಕೊಡುವ ಮೂಲಕ ಗೊಂದಲ ಸೃಷ್ಟಿಸಿ ವಾತಾವರಣ ಕೆಡಿಸುವ ಪ್ರಯತ್ನ ಮಾಡುವುದು ಪಕ್ಷದ ಶಿಸ್ತಿಗೆ ಧಕ್ಕೆ ತಂದಂತಾಗುತ್ತದೆ. ಪಕ್ಷದಲ್ಲಿ ಇದು ನಡೆಯುವುದಿಲ್ಲ. ಇದಕ್ಕೆ ಯಾರೂ ಅವಕಾಶ ಮಾಡಿಕೊಡಬೇಡಿ’ ಎಂದು ಅವರು ಅತೃಪ್ತ ಶಾಸಕರಿಗೆ ಮನವಿ ಮಾಡಿದರು.

‘ಯಾರು ಏನೇ ಹೇಳಿದರೂ ಮುಂದಿನ ಎರಡೂಕಾಲು ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದು, ರಾಜ್ಯದ ಅಭಿವೃದ್ಧಿಗೆ ವಿಶೇಷ ಗಮನ ಕೊಡುತ್ತೇನೆ. ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಕೇಂದ್ರದ ನಾಯಕರ ಆಶೀರ್ವಾದ ನನ್ನ ಮೇಲಿದೆ. ಹಣಕಾಸಿನ ಇತಿಮಿತಿಯಲ್ಲಿ ಮಾರ್ಚ್‌ನಲ್ಲಿ ಒಳ್ಳೆಯ ರೈತಪರ ಬಜೆಟ್‌ ನೀಡಲು ಪ್ರಯತ್ನಿಸುತ್ತೇನೆ’ ಎಂದು ಹೇಳುವ ಮೂಲಕ ಯಡಿಯೂರಪ್ಪ ಅವರು ನಾಯಕತ್ವ ಬದಲಾವಣೆ ಆಗುವುದಿಲ್ಲ ಎಂಬ ಸಂದೇಶವನ್ನು ಸಾರಿದರು.

ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯತೆ ಸಾಧಿಸಲು ಸಮನ್ವಯ ಸಮಿತಿ ಅಗತ್ಯವಿದೆಯೇ ಎಂಬ ಪ್ರಶ್ನೆಗೆ, ‘ಅದರ ಅಗತ್ಯವೇನೂ ಇಲ್ಲ’ ಎನ್ನುವ ಮೂಲಕ ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಮರ್ಥಿಸಿಕೊಂಡರು.

ಸಿಡಿ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಏನೇ ಆರೋಪ ಮಾಡುವುದಿದ್ದರೂ ಕೇಂದ್ರದ ನಾಯಕರಿಗೆ ದೂರು ಕೊಡಲಿ’ ಎಂದು ಪುನರುಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT