ರಾಮನಗರ: ಗುತ್ತಿಗೆದಾರರ ಜೊತೆ ಶಾಮೀಲಾಗಿ ಕಮಿಷನ್ ವ್ಯವಹಾರ ನಡೆಸಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಮಾಗಡಿ ಶಾಸಕ ಎ. ಮಂಜುನಾಥ್ ಅವರ ಪತ್ನಿ ಲಕ್ಷ್ಮಿ ಮಂಗಳವಾರ ಮಾಗಡಿಯ ರಂಗನಾಥಸ್ವಾಮಿ ದೇಗುಲದ ಮುಂಭಾಗ ಕರ್ಪೂರ ಹಚ್ಚಿ, ಈಡುಕಾಯಿ ಒಡೆದು ಆಣೆ–ಪ್ರಮಾಣ ಮಾಡಿದರು.
‘ ಮಾಜಿ ಶಾಸಕರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಅವರ ಎಲ್ಲ ಆರೋಪಗಳು ಸುಳ್ಳು ಎಂಬುದನ್ನು ಸಾಬೀತುಪಡಿಸುವ ಸಲುವಾಗಿ ನಾನು ಇಂದು ದೇಗುಲದ ಮುಂಭಾಗ ಕರ್ಪೂರ ಹಚ್ಚಿದ್ದೇನೆ. ನಾನು ತಪ್ಪು ಮಾಡಿದ್ದರೆ ಭಗವಂತ ನನಗೆ ಶಿಕ್ಷೆ ನೀಡಲಿ. ನನ್ನ ಮೇಲೆ ಮಾಡಿರುವ ಎಲ್ಲ ಆರೋಪಗಳು ನಿಜ ಎಂದು ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಸಹ ದೇಗುಲಕ್ಕೆ ಬಂದು ಆಣೆ ಮಾಡಲಿ’ ಎಂದು ಅವರು ಸವಾಲು ಹಾಕಿದರು.
‘ ನನ್ನ ಪತಿಗೆ ಕಾರ್ಯಗಳ ಒತ್ತಡ ಇರುವ ಕಾರಣ ನಾನೂ ಅವರಿಗೆ ವಿವಿಧ ಕೆಲಸಗಳಲ್ಲಿ ಸಾಥ್ ನೀಡುತ್ತಿದ್ದೇನೆ. ಆದರೆ ಎಂದು ಗುತ್ತಿಗೆದಾರರ ಜೊತೆ ನೇರವಾಗಿ ವ್ಯವಹರಿಸಿಲ್ಲ. ಈ ಬಗ್ಗೆ ದಾಖಲೆಗಳು ಇದ್ದಲ್ಲಿ ಬಿಡುಗಡೆ ಮಾಡಲಿ’ ಎಂದು ಆಗ್ರಹಿಸಿದರು.
ಗುತ್ತಿಗೆದಾರ ಚಿಕ್ಕಣ್ಣ ಎಂಬುವರೂ ಗರುಡಗಂಬದ ಮುಂದೆ ಕರ್ಪೂರ ಹಚ್ಚಿ, ತಾವು ಯಾವುದೇ ಅವ್ಯವಹಾರ ನಡೆಸಿಲ್ಲ ಎಂದು ಆಣೆ ಮಾಡಿದರು.
ಆರೋಪವೇನು?: ‘ ಮಂಜುನಾಥ್ ಅವರ ಪತ್ನಿ ಹಾಗೂ ಗುತ್ತಿಗೆದಾರ ಚಿಕ್ಕಣ್ಣ ಎಂಬುವರು ಸೇರಿ ಸರ್ಕಾರದ ₹8 ಕೋಟಿ ಮೊತ್ತದ ಕಾಮಗಾರಿಗಳ ಗುತ್ತಿಗೆ ವ್ಯವಹಾರ ಮಾಡುತ್ತಿದ್ದಾರೆ. ಶಾಸಕರ ಪತ್ನಿ ಗುತ್ತಿಗೆದಾರರಿಂದ ಕಮಿಷನ್ ಪಡೆಯುತ್ತಿದ್ದಾರೆ. ಹಣ ಕೊಡದೇ ಇದ್ದರೆ ಕಾಮಗಾರಿ ನಿಲ್ಲಿಸುತ್ತಾರೆ ’ ಎಂದು ಮಾಗಡಿಯ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಈಚೆಗೆ ಆರೋಪ ಮಾಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.