ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಣಿವರಿಯದ ಹೋರಾಟಗಾರ ಮಾರುತಿ ಮಾನ್ಪಡೆ

Last Updated 20 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಕಮ್ಯುನಿಸ್ಟ್ ನಾಯಕ ಮಾರುತಿ ಮಾನ್ಪಡೆ ಅವರ ಅಗಲಿಕೆಯೊಂದಿಗೆ ಕಲ್ಯಾಣ ಕರ್ನಾಟಕ ಮಾತ್ರವಲ್ಲ, ಇಡೀ ಕನ್ನಡ ನಾಡಿನ ಸಹಸ್ರಾರು ನೊಂದವರ ವೇದನೆಗೆ ಅಭಿವ್ಯಕ್ತಿ ನೀಡಿದ ಹೋರಾಟದ ಧ್ವನಿಯೊಂದು ಮೌನವಾದಂತಾಗಿದೆ.

ಬದುಕಿನ ಪ್ರತಿ ನಿಮಿಷವನ್ನೂ ಹೋರಾಟಕ್ಕೆ ಮೀಸಲಾಗಿರಿಸಿದ್ದ ಮಾನ್ಪಡೆಯವರು ದಣಿವರಿಯದ ಹೋರಾಟಗಾರ. ಅಸಹಾಯಕ ಜನರ ನೋವಿಗೆ ಸದಾ ಸ್ಪಂದಿಸುತ್ತಿದ್ದ ಅವರಿಗೆ ಚಳವಳಿ ಎಂದರೆ ನೂರ್ಮಡಿ ಉತ್ಸಾಹ. ಕೊರೊನಾ ಸೋಂಕು ಎಲ್ಲೆಡೆ ವ್ಯಾಪಿಸಿದಾಗ, ಜನಪ್ರತಿನಿಧಿಗಳೂ ಮನೆ ಬಿಟ್ಟು ಹೊರಗೆ ಬರಲಾರದ ಸಂದರ್ಭದಲ್ಲಿ ಮಾನ್ಪಡೆ ಬೀದಿಗೆ ಬಂದು ಕಲಬುರ್ಗಿ ಸೇರಿದಂತೆ ವಿವಿಧೆಡೆ ಹಲವಾರು ಹೋರಾಟಗಳನ್ನು ಸಂಘಟಿಸಿದರು.

ಕಲಬುರ್ಗಿ ಜಿಲ್ಲೆಯ ಅವಿಭಜಿತ ಆಳಂದ ತಾಲ್ಲೂಕಿನ ಲೆಂಗಟಿ ಎಂಬ ಚಿಕ್ಕ ಹಳ್ಳಿಯ ತಳ ಸಮುದಾಯದ ಕುಟುಂಬದಲ್ಲಿ ಜನಿಸಿದ ಅವರು, ಮೊದಲು ಆರೋಗ್ಯ ಇಲಾಖೆಯಲ್ಲಿ ಸಹಾಯಕ ಆರೋಗ್ಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದರು. ನಂತರ 1981ರಲ್ಲಿ ಕಮ್ಯುನಿಸ್ಟ್ ಪಕ್ಷದ ಮೂಲಕ ಜನಪರ ಚಳವಳಿಗೆ ಧುಮುಕಿದರು.

ಅವರ ಹೋರಾಟ ಕಲಬುರ್ಗಿಗೆ ಮಾತ್ರ ಸೀಮಿತವಾಗಿರಲಿಲ್ಲ. ಕರ್ನಾಟಕದ ಎಲ್ಲೇ ಅನ್ಯಾಯ ನಡೆದರೂ ಅಲ್ಲಿಗೆ ಧಾವಿಸುತ್ತಿದ್ದರು. ತೊಗರಿ, ಭತ್ತ, ಹೆಸರು–ಹೀಗೆ ಯಾವುದೇ ಬೆಳೆಗಾರರ ಸಮಸ್ಯೆಗಳಿರಲಿ, ಗ್ರಾಮ ಪಂಚಾಯಿತಿ ನೌಕರರ ಹೋರಾಟವಿರಲಿ, ದಿನಗೂಲಿಗಳ ತಾಪತ್ರಯವಿರಲಿ, ಅಲ್ಲಿ ಅವರು ಇರುತ್ತಿದ್ದರು. ಯಾವುದೇ ಹೋರಾಟವಿದ್ದರೂ ಅದನ್ನು ಅವರು ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತಿದ್ದರು.

ಕಲಬುರ್ಗಿಯಲ್ಲಿ ಪುಟ್ಟಮನೆಯಲ್ಲಿ ವಾಸವಿದ್ದ ಅವರು ಸಾರ್ವಜನಿಕ ಬದುಕಿಗೆ ಬರಿಗೈಯಲ್ಲಿ ಬಂದು, ಬರಿಗೈಯಲ್ಲೇ ಹೋದವರು. ಮುಂಜಾನೆ ಎದ್ದು ವಾಯುವಿಹಾರ ಮುಗಿಸಿ ಪತ್ನಿ ರಾಧಾಬಾಯಿ ಮಾಡಿಕೊಡುತ್ತಿದ್ದ ಜೋಳದ ರೊಟ್ಟಿ ತಿಂದು ಮನೆಯಿಂದ ಹೊರಬಿದ್ದರೆ, ಅವರು ಮರಳುತ್ತಿದ್ದದ್ದು ಮಧ್ಯರಾತ್ರಿ ಬಳಿಕ. ಅಲ್ಲಿಯವರೆಗೆ ಕಾರ್ಮಿಕರ, ರೈತರ, ನೊಂದವರ ಕಣ್ಣೀರು ಒರೆಸುವುದೇ ನಿತ್ಯದ ದಿನಚರಿ.

ಕಳೆದ ಏಪ್ರಿಲ್ ತಿಂಗಳು ಎಲ್ಲೆಡೆ ಲಾಕ್‌ಡೌನ್. ರಸ್ತೆಯಲ್ಲಿ ಜನರೇ ಕಾಣುತ್ತಿರಲಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್‌ನಿಂದ ಎಲ್ಲವೂ ಅಸ್ತವ್ಯಸ್ತ. ಕೋವಿಡ್ ಬಿಟ್ಟು ಬೇರೆ ಕಾಯಿಲೆಗೆ ಚಿಕಿತ್ಸೆ ಸಿಗುತ್ತಿರಲಿಲ್ಲ. ಅಸಹಾಯಕ ಜನ ಕಂಗಾಲಾಗಿದ್ದರು. ಆಗ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕಲಬುರ್ಗಿಗೆ ಬಂದಿದ್ದರು. ಆಗ ಅಧಿಕಾರಿಗಳ ಸಭೆಗೆ ನುಗ್ಗಿದ ಮಾನ್ಪಡೆ ಅವರು, ‘ಮಂತ್ರಿಗಳೇ, ಸರ್ಕಾರಿ ದವಾಖಾನೆಯಲ್ಲಿ ಕೋವಿಡ್ ಬಿಟ್ಟು ಬೇರೆ ರೋಗಿಗಳನ್ನು ನೋಡು
ತ್ತಿಲ್ಲ’ ಎಂದು ಕೂಗಾಡಿದರು. ಅವರನ್ನು ಸಮಾಧಾನ ಮಾಡಿ ಕಳಿಸಲು ಸಚಿವರಿಗೆ ಸಾಕುಬೇಕಾಯಿತು.

65ರ ಇಳಿ ವಯಸ್ಸಿನಲ್ಲಿ ಮಧುಮೇಹವನ್ನು ಜೊತೆಗಿಟ್ಟುಕೊಂಡು ಬೀದಿ, ಬೀದಿಯಲ್ಲಿ ಪ್ರತಿಭಟನೆಗೆ ಬರುತ್ತಿದ್ದ ಮಾನ್ಪಡೆ ಅವರು ಆರೋಗ್ಯದತ್ತ ನಿರ್ಲಕ್ಷ್ಯ ವಹಿಸಿದರೇನೊ. ‘ಕೋವಿಡ್ ಕಾಲದಲ್ಲಿ ನೀವು ಹೀಗೆ ಓಡಾಡಬಾರದು. ಸಾರ್ವಜನಿಕ ಬದುಕಿಗೆ ನಿಮ್ಮ ಅಗತ್ಯವಿದೆ’ ಎಂದು ಹೇಳಿದಾಗೆಲ್ಲ, ‘ನಮ್ಮ ಜನರ ನೋವು, ಸಂಕಟಗಳನ್ನು ನೋಡಿ ಸುಮ್ಮನಿರಲಾಗುತ್ತಿಲ್ಲ. ಸತ್ತರೂ ನಾನು ಹೋರಾಟದಿಂದ ವಿರಮಿಸುವುದಿಲ್ಲ’ ಎನ್ನುತ್ತಿದ್ದರು.

ಉಗ್ರ ಹೋರಾಟಗಾರರಂತೆ ಕಂಡರೂ ಮಂತ್ರಿಗಳಿರಲಿ, ಅಧಿಕಾರಿಗಳಿರಲಿ, ಸಂಘಟನೆಯ ಸಾಮಾನ್ಯ ಕಾರ್ಯಕರ್ತನಿರಲಿ ಎಲ್ಲರೊಂದಿಗೆ ತುಂಬಾ ಸೌಜನ್ಯದಿಂದ ಮಾತಾಡುತ್ತಿದ್ದರು. ನಾಲ್ಕು ದಶಕಗಳಲ್ಲಿ ಮಾನ್ಪಡೆ ಅವರಿಲ್ಲದ ಒಂದು ಹೋರಾಟವೂ ಕಲಬುರ್ಗಿಯಲ್ಲಿ ನಡೆದಿಲ್ಲ. 70ರ ದಶಕದ ಕೊನೆಯವರೆಗೆ ಕಮ್ಯುನಿಸ್ಟ್ ನಾಯಕ ಗಂಗಾಧರ ನಮೋಶಿ ಇದೇ ರೀತಿ ಜನ ಹೋರಾಟಗಳಿಗೆ ಹೆಸರಾಗಿದ್ದರು. ಅವರ ನಂತರ ಕಮ್ಯುನಿಸ್ಟ್ ಚಳವಳಿಗೆ ಜೀವ ತುಂಬಿದ ಮಾನ್ಪಡೆ ಅವರಿಲ್ಲದ ಕಲಬುರ್ಗಿ ಊಹೆ ಮಾಡಿಕೊಳ್ಳುವುದು ಕಷ್ಟ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿ ನೀತಿ ವಿರುದ್ಧ ಬೆಂಗಳೂರಿನಲ್ಲಿ ನಡೆದ ರೈತ ಸಂಘಟನೆಗಳ ಪ್ರತಿಭಟನೆ ಮಾನ್ಪಡೆ ಅವರು ಪಾಲ್ಗೊಂಡ ಕೊನೆಯ ಹೋರಾಟ. ಅಲ್ಲಿಂದ ವಾಪಸು ಕಲಬುರ್ಗಿಗೆ ಬಂದ ನಂತರ ಕೋವಿಡ್ ತಗುಲಿ ಹೋರಾಡುತ್ತಲೇ ಇಲ್ಲವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT