ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯ: ಹೈಕೋರ್ಟ್ ನೋಟಿಸ್

Last Updated 13 ಏಪ್ರಿಲ್ 2021, 4:59 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಮೀಣ ಸೇವೆ ಕಡ್ಡಾಯ ಕುರಿತು ಎಂಬಿಬಿಎಸ್ ಪದವೀಧರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ (ಆರ್‌ಜಿಯುಎಚ್ಎಸ್‌) ನೋಟಿಸ್ ನೀಡಲು ಹೈಕೋರ್ಟ್ ಆದೇಶಿಸಿದೆ.

ಗ್ರಾಮೀಣ ಸೇವೆ ಪೂರೈಸುವವರೆಗೂ ಪ್ರಮಾಣ ಪತ್ರಗಳನ್ನು ವಿತರಿಸದಂತೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ 2021ರ ಫೆ.21ರಂದು ಹೊರಡಿಸಿರುವ ಸುತ್ತೋಲೆ ಪ್ರಶ್ನಿಸಿ ಡಾ. ಬಿ.ಆರ್. ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾದ ಡಾ. ಶರಣ್ಯ ಮೋಹನ್ ಮತ್ತು ಇತರ 43 ಮಂದಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

‘2015ರಲ್ಲಿ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆಯಲಾಗಿದ್ದು, ಹೈಕೋರ್ಟ್ ವಿಭಾಗೀಯ ಪೀಠದ ಇತ್ತೀಚಿನ ಆದೇಶ ಪ್ರಕಾರ ಕಡ್ಡಾಯ ಗ್ರಾಮೀಣ ಸೇವೆಯ ನಿಯಮ ನಮಗೆ ಅನ್ವಯ ಆಗುವುದಿಲ್ಲ’ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

‘ಕಡ್ಡಾಯ ಗ್ರಾಮೀಣ ಸೇವೆ ಕಾಯ್ದೆ 2012ರಲ್ಲಿ ರೂಪುಗೊಂಡರೂ, ನಿಯಮಾವಳಿಗಳು ಸಿದ್ಧಗೊಂಡು 2015ರ ಜುಲೈ 24ರಿಂದ ಜಾರಿಗೆ ಬಂದಿದೆ. ನಿಯಮಾವಳಿ ಜಾರಿಗೆ ಬಂದ ನಂತರದ ವಿದ್ಯಾರ್ಥಿಗಳಿಗೆ ಮಾತ್ರ ಈ ಕಾಯ್ದೆ ಅನ್ವಯಾಗುತ್ತದೆ ಎಂಬುದನ್ನು ವಿಭಾಗೀಯ ಪೀಠ ಹೇಳಿದೆ. ಅಲ್ಲದೇ, 2019ರಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‍ಎಂಸಿ) ಹಲವು ಬದಲಾವಣೆಗಳೊಂದಿಗೆ ಕಾಯ್ದೆಯೊಂದನ್ನು ಜಾರಿಗೆ ಬಂದಿದೆ. ಅದರ ಪ್ರಕಾರ, ವೈದ್ಯಕೀಯ ಶಿಕ್ಷಣದ ಪ್ರವೇಶ ನಿಯಂತ್ರಿಸಲು ರಾಜ್ಯಗಳಿಗೆ ಯಾವುದೇ ಅಧಿಕಾರ ಇಲ್ಲ’ ಎಂದು ಅರ್ಜಿದಾರರು ವಿವರಿಸಿದ್ದಾರೆ.

‘ಅನೇಕ ರಾಜ್ಯಗಳಲ್ಲಿ ಗ್ರಾಮೀಣ ಸೇವೆ ಕಡ್ಡಾಯ ಇಲ್ಲ. ಹೀಗಾಗಿ, ಈ ಕಾಯ್ದೆ ಹೇರುವುದು ಸಮಾನತೆಗೆ ವಿರುದ್ಧವಾದ ಕೆಲಸ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆ’ ಎಂದು ಹೇಳಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ಪೀಠ, ವಿಚಾರಣೆಯನ್ನು ಏ.21ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT