ಸೋಮವಾರ, ಜನವರಿ 25, 2021
17 °C
ಬಿಡುಗಡೆಯಾದ ಮೊತ್ತದಲ್ಲಿ ಶೇ 75ರಷ್ಟು ಬಳಕೆ ಕಡ್ಡಾಯ

ಅನುದಾನ ಬಿಡುಗಡೆಗೆ ಆರ್ಥಿಕ ಇಲಾಖೆ ಷರತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಿಡುಗಡೆಯಾಗಿರುವ ಅನುದಾನದಲ್ಲಿ ಶೇ 75ರಷ್ಟು ಮೊತ್ತವನ್ನು ಅಕ್ಟೋಬರ್‌ ಅಂತ್ಯದೊಳಗೆ ವೆಚ್ಚ ಮಾಡಿರುವುದನ್ನು ಖಾತರಿಪಡಿಸಿಕೊಂಡು ಡಿಸೆಂಬರ್‌ನಿಂದ ಹೊಸ ಅನುದಾನ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆ ವಿವಿಧ ಇಲಾಖೆಗಳಿಗೆ ಆದೇಶಿಸಿದೆ.

2020ರ ಡಿಸೆಂಬರ್‌ನಿಂದ 2021ರ ಮಾರ್ಚ್‌ ಅಂತ್ಯದವರೆಗೆ ವಿವಿಧ ಯೋಜನೆಗಳು ಮತ್ತು ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವ ಸಂಬಂಧ ಆರ್ಥಿಕ ಇಲಾಖೆ ಕಾರ್ಯದರ್ಶಿ ಏಕರೂಪ್‌ ಕೌರ್‌ ನವೆಂಬರ್‌ 24ರಂದು ಅಧಿಕಾರ ಪ್ರತ್ಯಾಯೋಜನೆಯ ಆದೇಶ ಹೊರಡಿಸಿದ್ದಾರೆ.

‘ರಾಜ್ಯ ಸರ್ಕಾರದ ರಾಜಸ್ವ ಸಂಗ್ರಹಣೆಯು ಅಂದಾಜಿಸಿರುವ ಹಂತವನ್ನು ತಲುಪಲು ಇನ್ನಷ್ಟು ಕಾಲಾವಕಾಶ ಅಗತ್ಯವಿದೆ. ಈ ಕಾರಣದಿಂದ ಅಕ್ಟೋಬರ್‌ ಅಂತ್ಯದವರೆಗಿನ ವೆಚ್ಚಗಳನ್ನು ಆಧರಿಸಿ ಯೋಜನೆವಾರು ಅನುದಾನ ಹಂಚಿಕೆಯನ್ನು ಪರಿಷ್ಕರಿಸಬೇಕಾದ ಅನಿವಾರ್ಯತೆ ಇದೆ’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ವಾರ್ಷಿಕ ₹ 10 ಕೋಟಿಯವರೆಗಿನ ವೆಚ್ಚದ ವಿವಿಧ ಕಾಮಗಾರಿಗಳು ಮತ್ತು ಸರಕು ಹಾಗೂ ಸೇವೆಗಳಿಗೆ ಬಾಕಿ ಇರುವ ಅನುದಾನ ಬಿಡುಗಡೆಗೆ ಅನುಮತಿ ನೀಡಲಾಗಿದೆ. ₹ 10 ಕೋಟಿಗಿಂತ ಹೆಚ್ಚಿನ ಮೊತ್ತ ಇದ್ದಲ್ಲಿ ಆರ್ಥಿಕ ಇಲಾಖೆಯಿಂದ ಅನುಮತಿ ಪಡೆಯುವಂತೆ ಸೂಚಿಸಲಾಗಿದೆ.

ಹೊಸದಾಗಿ ಅನುದಾನ ಬಿಡುಗಡೆಗೂ ಮುನ್ನ ಆರಂಭಿಕ ಶಿಲ್ಕು ಮತ್ತು ಪ್ರಸಕ್ತ ವರ್ಷದಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಶೇ 75ರಷ್ಟು ಬಳಕೆ ಆಗಿರುವುದನ್ನು ಖಾತರಿಪಡಿಸಿಕೊಳ್ಳುವುದು ಕಡ್ಡಾಯ. ಬಾಕಿ ಇರುವ ಮೊತ್ತವನ್ನು ನಾಲ್ಕು ತಿಂಗಳ ಅವಧಿಯಲ್ಲಿ ಎರಡು ಕಂತುಗಳಲ್ಲಿ ಬಿಡುಗಡೆ ಮಾಡಬಹುದು. ವಿವಿಧ ಇಲಾಖೆಗಳು, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೂ ಇದೇ ಪ್ರಕಾರ ಅನುದಾನ ಬಿಡುಗಡೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈಗಾಗಲೇ ಬಿಡುಗಡೆಯಾಗಿರುವ ಅನುದಾನದಲ್ಲಿ ಶೇ 75ರಷ್ಟನ್ನು ಬಳಕೆ ಮಾಡದಿದ್ದರೂ ಅನಗತ್ಯವಾಗಿ ಹೊಸದಾಗಿ ಅನುದಾನ ಪಡೆದು ಬ್ಯಾಂಕ್‌ ಅಥವಾ ವೈಯಕ್ತಿಕ ಠೇವಣಿ ಖಾತೆಗಳಲ್ಲಿ ಇಡುವಂತಿಲ್ಲ. ಈ ಬಗ್ಗೆ ಎಲ್ಲ ಇಲಾಖೆಗಳೂ ಎಚ್ಚರಿಕೆ ವಹಿಸಬೇಕು. ಬ್ಯಾಂಕ್‌ ಅಥವಾ ವೈಯಕ್ತಿಕ ಠೇವಣಿ ಖಾತೆಗಳಲ್ಲಿ ಉಳಿದಿರುವ ಶಿಲ್ಕು ಮತ್ತು ನೈಜ ವೆಚ್ಚಗಳನ್ನು ಪರಿಗಣಿಸಿಯೇ ಹಣ ಬಿಡುಗಡೆ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.

ಎಲ್ಲ ಇಲಾಖೆಗಳೂ ಈ ಆದೇಶದ ಅನುಸಾರ ಅನುದಾನ ಬಿಡುಗಡೆ ಮಾಡಬೇಕು ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಬೇಕು. ಆದೇಶವನ್ನು ಗಮನಿಸದೇ ಇಲಾಖೆಗಳು ಸಲ್ಲಿಸುವ ಬಿಲ್ಲುಗಳನ್ನು ಖಜಾನೆ ಇಲಾಖೆಯು ಅಂಗೀಕರಿಸಬಾರದು ಮತ್ತು ಹಣ ಬಿಡುಗಡೆ ಮಾಡಬಾರದು ಎಂದು ಕಾರ್ಯದರ್ಶಿ ಆದೇಶದಲ್ಲಿ ಸೂಚಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು