ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭ್ರಷ್ಟೋತ್ಸವ’ದ ಪ್ರಶ್ನೆ ಎದುರಿಸಲಾಗದು ಎಂದು ನಡ್ಡಾ ಬರಲಿಲ್ಲವೇ?: ಕಾಂಗ್ರೆಸ್

Last Updated 10 ಸೆಪ್ಟೆಂಬರ್ 2022, 13:48 IST
ಅಕ್ಷರ ಗಾತ್ರ

ಬೆಂಗಳೂರು: ಜನಸ್ಪಂದನಾ ಸಮಾವೇಶಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆಗಮಿಸದಿರುವ ಬಗ್ಗೆ ಕಾಂಗ್ರೆಸ್ ವ್ಯಂಗ್ಯ ಮಾಡಿದೆ.

ಬಿಜೆಪಿಯ ಸಮಾವೇಶಕ್ಕೆ ಜೆಪಿ ನಡ್ಡಾ ಗೈರಾಗುವ ಮೂಲಕ ಯಾವ ಸಂದೇಶ ಕೊಟ್ಟಿದ್ದಾರೆ. ಬೊಮ್ಮಾಯಿಯವರ ಮೇಲೆ ಪ್ರೀತಿ ಇಲ್ಲವೆಂದೇ? ಬಿಜೆಪಿ ಆಡಳಿತ ಸಮಾಧಾನ ತರಲಿಲ್ಲವೆಂದೇ? ಜನ ನೋವಲ್ಲಿರುವಾಗ ಸಂಭ್ರಮ ನಡೆಸಿದರು ಎಂಬ ಕಳಂಕ ತಪ್ಪಿಸಿಕೊಳ್ಳಲೆಂದೇ? #BJPBrashtotsavaದ ಪ್ರಶ್ನೆಗಳನ್ನ ಎದುರಿಸಲಾಗದು ಎಂದೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಜನರಿಲ್ಲದೆ ಖಾಲಿ ಹೊಡೆಯುತ್ತಿರುವ ಊಟದ ಕೌಂಟರ್‌ಗಳು ಬಿಜೆಪಿಯ ವೈಫಲ್ಯದ ಕತೆ ಹೇಳುತ್ತಿವೆ! ಜನತೆಗೂ ತಿಳಿದಿದೆ. ಬಿಜೆಪಿಯವರು ಅನ್ನಭಾಗ್ಯದವರಲ್ಲ, ಕನ್ನ ಭಾಗ್ಯದವರೆಂದು! ಎಂದು ವ್ಯಂಗ್ಯ ಮಾಡಿದೆ.

ಗಂಗಾ ಕಲ್ಯಾಣ ಯೋಜನೆಯಲ್ಲಿ ಸ್ವಯಂ ಕಲ್ಯಾಣ ಮಾಡಿಕೊಳ್ಳುತ್ತಿರುವ ಬಿಜೆಪಿ ಸರ್ಕಾರ, ಶೋಷಿತರಿಗೆ ಅನ್ಯಾಯವೆಸಗಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.

ಬೋರ್ ವೆಲ್ ಹಗರಣ ನಡೆದಿರುವುದು ಇಲಾಖಾ ತನಿಖೆಯಲ್ಲಿ ಮೇಲ್ನೋಟಕ್ಕೆ ಸಾಬೀತಾಗಿದೆ. ಶೋಷಿತ ಸಮುದಾಯಗಳ ಪಾಲಿನ ಹಣ ಲೂಟಿ ಹೊಡೆದಿದ್ದೇ ಸರ್ಕಾರದ ಸಾಧನೆಯೇ ಬೊಮ್ಮಾಯಿ ಅವರೇ? ಆ ಕಾರಣಕ್ಕಾಗಿ ಸಂಭ್ರಮಾಚರಣೆಯೇ? ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಕುಟುಕಿದೆ.

ಕೋವಿಡ್ ಹೆಸರಲ್ಲಿ ಲೂಟಿ ಹೊಡೆದಿದ್ದು ನಿಮ್ಮ ಸಾಧನೆಯೇ? ಚಾಮರಾಜನಗರದಲ್ಲಿ ಆಕ್ಸಿಜನ್ ಕೊಡದೆ ಜನರನ್ನು ಕೊಂದಿದ್ದು ಸಾಧನೆಯೇ? ಆಕ್ಸಿಜನ್ ಕೊರತೆ & ಕೋವಿಡ್‌ನಿಂದ ಮೃತರ ಸುಳ್ಳು ಸಂಖ್ಯೆ ಹೇಳಿದ್ದು ಸಾಧನೆಯೇ? ರಾಜ್ಯಾದ್ಯಂತ ಆರೋಗ್ಯ ಅವ್ಯವಸ್ಥೆ ನಿರ್ಮಿಸಿದ್ದು ಸಾಧನೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಪಿಎಸ್‌ಐ ಅಕ್ರಮದಲ್ಲಿ ಬಿಜೆಪಿ ಶಾಸಕರ, ಸಚಿವರ ನೇರ ಕೈವಾಡವಿದ್ದರೂ ವಿಚಾರಣೆಯಿಂದ ಅವರಿಗೆ ವಿನಾಯಿತಿ ನೀಡಿದ್ದೀರಿ. ಪಿಎಸ್‌ಐ ಅಭ್ಯರ್ಥಿಯಿಂದ ಬಿಜೆಪಿ ಶಾಸಕ ಹಣ ಪಡೆದಿರುವುದು ಬೆಳಕಿಗೆ ಬಂದರೂ, ಶಾಸಕರೇ ಒಪ್ಪಿಕೊಂಡರೂ ತನಿಖೆ ನಡೆಸದೆ ಭ್ರಷ್ಟಾಚಾರಕ್ಕೆ ಬೆಂಬಲ ಕೊಟ್ಟಿರುವುದೇ ನಿಮ್ಮ ಸಾಧನೆಯೇ ?#BJPBrashtotsava ದಲ್ಲಿ ಅಕ್ರಮವೆಲ್ಲ ಸಕ್ರಮವೇ? ಜನರಿಗೆ ಸರ್ಕಾರದ ಸ್ಪಂದನೆ ಇಲ್ಲದಿರುವಾಗ, ಸಮಾವೇಶಕ್ಕೂ ಜನರ ಸ್ಪಂದನೆ ಇಲ್ಲದಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಭೋವಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರದ ಅಭಿವೃದ್ಧಿಯಾಗುತ್ತಿದೆ ಎಂದು ಆರೋಪಿಸಿದ್ದು ಬೇರೆ ಯಾರೂ ಅಲ್ಲ, ಸ್ವತಃ ಬಿಜೆಪಿ ಶಾಸಕರೇ. ವೇದಿಕೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಗಂಟಲಿನ ಸೈಜ್‌ಗಿಂತ ಹೆಚ್ಚಾಗಿ ಕಿರುಚಿಕೊಳ್ಳುತ್ತಿದ್ದ ಬೊಮ್ಮಾಯಿಯವರೇ, ಜನಪರ ಆಡಳಿತ ನಡೆಸಿ ಎಂದರೆ #BJPBrashtotsava ನಡೆಸಿಕೊಂಡು ಬಂದಿರುವುದು ನೀಜವಲ್ಲವೇ? ಎಂದು ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT