ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್‌ ವಿವಾದಕ್ಕೆ ಕಾಂಗ್ರೆಸ್‌, ಎಸ್‌ಡಿಪಿಐ ಕಾರಣ: ನಳಿನ್‌ ಕುಮಾರ್‌ ಕಟೀಲ್‌

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌
Last Updated 21 ಫೆಬ್ರುವರಿ 2022, 16:35 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ಮತ್ತು ಎಸ್‌ಡಿಪಿಐ ಪಕ್ಷಗಳು ಜತೆಗೂಡಿ ಹಿಜಾಬ್‌ ವಿವಾದ ಸೃಷ್ಟಿಸಿವೆ. ಕಾಂಗ್ರೆಸ್‌ನ ಯೋಚನೆಯನ್ನು ಎಸ್‌ಡಿಪಿಐ ಕಾರ್ಯರೂಪಕ್ಕೆ ತಂದಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಸೋಮವಾರ ನಡೆದ ಬಿಜೆಪಿ ರಾಜ್ಯ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲೂ ಕಾಂಗ್ರೆಸ್‌ ಪಾತ್ರವಿತ್ತು. ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆಯಲ್ಲೂ ಕಾಂಗ್ರೆಸ್‌ ಕೈವಾಡ ಇತ್ತು. ಹಿಜಾಬ್‌ ವಿಷಯದಲ್ಲೂ ಎರಡೂ ಪಕ್ಷಗಳು ಕೈಜೋಡಿಸಿವೆ’ ಎಂದು ಆರೋಪಿಸಿದರು.

ಸಂವಿಧಾನದಲ್ಲಿ ನಂಬಿಕೆ ಇಲ್ಲ: ಕಾಂಗ್ರೆಸ್‌ ಪಕ್ಷದವರಿಗೆ ಸಂವಿಧಾನ ಮತ್ತು ಶಾಸನಭೆಯ ಮೇಲೆ ನಂಬಿಕೆ ಇಲ್ಲ. ರಾಜಕಾರಣಕ್ಕಾಗಿ ವಿಧಾನಮಂಡಲದಲ್ಲಿ ಧರಣಿ ನಡೆಸುತ್ತಿದ್ದಾರೆ. ಹಿಜಾಬ್‌ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಯದಂತೆ ತಡೆಯಲು ಧರಣಿ ಮಾಡಲಾಗುತ್ತಿದೆ. ಧರಣಿ ನಡೆಸಿ ಸಚಿವ ಕೆ.ಎಸ್‌. ಈಶ್ವರಪ್ಪ ರಾಜೀನಾಮೆ ಪಡೆಯಲು ಸಾಧ್ಯವಿಲ್ಲ ಎಂದರು.

ಶಿವಮೊಗ್ಗದ ಕಾಲೇಜು ಒಂದರಲ್ಲಿ ರಾಷ್ಟ್ರಧ್ವಜ ಕೆಳಕ್ಕಿಳಿಸಿ ಕೇಸರಿ ಧ್ವಜ ಹಾರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರೇ ಹೇಳಿಕೆ ನೀಡಿದ್ದರು. ಸುಳ್ಳು ಮಾಹಿತಿ ನೀಡುವ ಮೂಲಕ ಗಲಭೆಗೆ ಪ್ರೇರೇಪಿಸಿದ್ದರು. ಕಾಂಗ್ರೆಸ್‌ ಪಕ್ಷದವರು ರಾಷ್ಟ್ರಧ್ವಜ, ರಾಷ್ಟ್ರಗೀತೆಗೆ ಗೌರವ ನೀಡುವವರಲ್ಲ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿಗೆ ಜೈಕಾರ ಕೂಗುತ್ತಾರೆ ಎಂದು ನಳಿನ್‌ ಟೀಕಿಸಿದರು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡುವಾಗಲೂ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಈಗ ಕಾಂಗ್ರೆಸ್‌ನವರು ಸಚಿವರಾದ ಈಶ್ವರಪ್ಪ ಮತ್ತು ಆರಗ ಜ್ಞಾನೇಂದ್ರ ರಾಜೀನಾಮೆ ಕೇಳುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರ ಇದ್ದಾಗ 24 ಮಂದಿ ಹಿಂದೂಗಳ ಹತ್ಯೆ ಆಗಿತ್ತು. ಆಗ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದರೆ’ ಎಂದು ಪ್ರಶ್ನಿಸಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಮತ್ತು ಇತರ ಪದಾಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT