ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ.15ಕ್ಕೆ ಎಲ್ಲ ಶಾಲೆಗಳಿಗೂ ಶೌಚಾಲಯ: ಸಿಎಂ ಬೊಮ್ಮಾಯಿ

Last Updated 20 ಫೆಬ್ರುವರಿ 2023, 22:15 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಎಲ್ಲ ಶಾಲೆಗಳಲ್ಲಿ ಆಗಸ್ಟ್‌ 15 ರೊಳಗೆ ಶೌಚಾಲಯಗಳ ನಿರ್ಮಾಣ ಪೂರ್ಣಗೊಳಿಸಲಾಗು
ವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದರು.

‘ನಮ್ಮ ಸರ್ಕಾರ ಶಿಕ್ಷಣಕ್ಕೆ ಹಿಂದೆಂಗಿಂತಲೂ ಹೆಚ್ಚಿನ ಆದ್ಯತೆ ನೀಡಿದೆ. ಶಾಲಾ ಕಟ್ಟಡಗಳ ದುರಸ್ತಿ ಮತ್ತು ವಿವೇಕ ಯೋಜನೆಯಡಿ ಹೊಸ ಕೊಠಡಿಗಳ ನಿರ್ಮಾಣ ಜೂನ್‌ ಒಳಗೆ ಪೂರ್ಣಗೊಳ್ಳಲಿದ್ದು, ಇದಕ್ಕಾಗಿ ₹1,900 ಕೋಟಿ ಮೀಸಲಿಡಲಾಗಿದೆ. 2015–16 ರ ಬಳಿಕ ಶಾಲಾ ಕೊಠಡಿಗಳೇ ನಿರ್ಮಾಣವಾಗಿರಲಿಲ್ಲ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಮ್ಮ ಸರ್ಕಾರ 8,000
ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ’ ಎಂದರು.

‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 15,000 ಶಿಕ್ಷಕರನ್ನು ನೇಮಕ ಪ್ರಕ್ರಿಯೆ ಆರಂಭವಾಗಿದ್ದು, ಈ ಪೈಕಿ 5,000 ಶಿಕ್ಷಕರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ರಾಜ್ಯದಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ
ಶಿಕ್ಷಣ ಪಡೆಯುತ್ತಿದ್ದಾರೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆಯುತ್ತಿರುವುದು ಸಕಾರಾತ್ಮಕ ಅಂಶ’ ಎಂದು ಬೊಮ್ಮಾಯಿ ಅವರು ತಿಳಿಸಿದರು.

ಮುಖ್ಯಮಂತ್ರಿಯವರ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ, ‘ನಿಮ್ಮ ಮಾಹಿತಿ ಸುಳ್ಳು’ ಎಂದರು. ‘ನಿಮ್ಮ ಅವಧಿಯ ಕಥೆ ನನಗೆ ಗೊತ್ತು. ಯಾರದ್ದೋ ಒತ್ತಡಕ್ಕೆ ಮಣಿದು ಪದವಿ ಪೂರ್ವ(ಪಿಯು) ಕಾಲೇಜುಗಳೇ ಇಲ್ಲದ ಊರುಗಳಿಗೂ ಪದವಿ
ಕಾಲೇಜು ಮಂಜೂರು ಮಾಡಿದ್ದರು’ ಎಂದು ಬೊಮ್ಮಾಯಿ ಅವರು ಕುಟುಕಿದರು.

ಶಾಸಕರ ಗೈರು: ಸಭಾಧ್ಯಕ್ಷ ಕಾಗೇರಿ ಗರಂ

ಸೋಮವಾರ ಬೆಳಿಗ್ಗೆ ಕಲಾಪ ಆರಂಭಗೊಂಡಾಗ ಕೋರಂ ಕೊರತೆಯಿಂದ ಸುಮಾರು ಒಂದು ಗಂಟೆಯಷ್ಟು ತಡವಾಗಿ ಕಲಾಪ ಆರಂಭಗೊಂಡಿತು. ಇದರಿಂದ ಬೇಸರಗೊಂಡಿದ್ದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕರನ್ನು ತರಾಟೆಗೆ ತೆಗೆದುಕೊಂಡರು.

ಚುನಾವಣೆ ಬರುತ್ತಿದೆ ಎಂದು ಸದನಕ್ಕೆ ಹಾಜರಾಗದೇ ಕ್ಷೇತ್ರದಲ್ಲೇ ಉಳಿಯುವುದು ಸರಿಯಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಸಂಸದೀಯ ವ್ಯವಸ್ಥೆಯನ್ನು ಕಡೆಗಣಿಸಬಾರದು. ಚುನಾವಣೆಯಲ್ಲಿ ಸೋಲು–ಗೆಲುವಿನ ಲೆಕ್ಕಾಚಾರದಲ್ಲಿ ಕಲಾಪಕ್ಕೆ ಗೈರಾಗುವುದು ತಪ್ಪು ಎಂದು ಕಾಗೇರಿ ಹೇಳಿದರು.

ಈ ವ್ಯವಸ್ಥೆಯ ಬಗ್ಗೆ ಜನರಲ್ಲಿ ಹೆಚ್ಚು ವಿಶ್ವಾಸ ಮೂಡುವಂತೆ ನಾವೆಲ್ಲ ನಡೆದುಕೊಳ್ಳಬೇಕು. ಜನರ ನಮ್ಮನ್ನು ಆಯ್ಕೆ ಮಾಡಿ ಕಳುಹಿಸುವುದೂ ಸದನಕ್ಕೆ ಹೋಗಿ ಅವರ ವಿಷಯಗಳನ್ನು ಪ್ರಸ್ತಾಪಿಸಲೆಂದು. ಆದ್ದರಿಂದ ಇನ್ನು ಉಳಿದಿರುವ ದಿನಗಳಿಗಾಗದರೂ ಬಂದು ಕಲಾಪದಲ್ಲಿ ಭಾಗವಹಿಸಬೇಕು ಎಂದು ಕಾಗೇರಿ ಮನವಿ ಮಾಡಿದರು.

ರಾಜ್ಯಪಾಲರ ಭಾಷಣದ ಮೇಲೆ ಕೇವಲ 15 ಶಾಸಕರು ಮಾತನಾಡಿದ್ದು, ಈ ಪೈಕಿ ಜೆಡಿಎಸ್‌ನ 7 ಶಾಸಕರು, ಕಾಂಗ್ರೆಸ್‌ನ 5 ಶಾಸಕರು ಮತ್ತು ಆಡಳಿತ ಪಕ್ಷದ ಮೂವರು ಚರ್ಚೆಯಲ್ಲಿ ಭಾಗವಹಿಸಿದ್ದರು.

ಶೌಚಾಲಯಗಳ ಸಮಸ್ಯೆ ಪ್ರಸ್ತಾಪಿಸಿದ ಬಿಎಸ್‌ವೈ

ಮುಖ್ಯಮಂತ್ರಿ ಬೊಮ್ಮಾಯಿ ಅವರ ಉತ್ತರ ಮಧ್ಯೆಯೇ ಸಾರ್ವಜನಿಕ ಶೌಚಾಲಯಗಳ ಸಮಸ್ಯೆಗಳ ಬಗ್ಗೆ ಬಿಜೆಪಿಯ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅವರು ಸದನದ ಗಮನ ಸೆಳೆದರು.

‘ಸಾರ್ವಜನಿಕ ಶೌಚಾಲಯಗಳಿಂದ ಏನೂ ಪ್ರಯೋಜನ ಆಗುತ್ತಿಲ್ಲ. ಇವುಗಳ ನಿರ್ವಹಣೆಗೆ ಅಗತ್ಯವಿರುವ ನೀರಿನ ಲಭ್ಯತೆ ಇಲ್ಲ. ಶೇ 90 ರಷ್ಟು ಸಾರ್ವಜನಿಕ ಶೌಚಾಲಯಗಳ ಉದ್ದೇಶವೇ ಈಡೇರಿಲ್ಲ. ಆದ್ದರಿಂದ ಇನ್ನು ಮುಂದೆ ಸಾರ್ವಜನಿಕ ಶೌಚಾಲಯ ನಿರ್ಮಿಸುವುದನ್ನು ನಿಲ್ಲಿಸುವುದು ಸೂಕ್ತ’ ಎಂದು ಹೇಳಿದರು.

‘ಸಾರ್ವಜನಿಕ ಶೌಚಾಲಯಗಳ ಬದಲಿಗೆ ಮನೆ–ಮನೆಗೆ ಶೌಚಾಲಯಗಳ ನಿರ್ಮಾಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು’ ಎಂದು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಸುಲಭ್‌ ಶೌಚಾಲಯ ಸಂಸ್ಥೆಯ ಮಾದರಿಯಲ್ಲಿ ಇವುಗಳ ನಿರ್ವಹಣೆಗೆ ಸರ್ಕಾರ ಚಿಂತನೆ ನಡೆಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT