ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಸೇರಿ ಎಲ್ಲರೂ ಭ್ರಷ್ಟರು ಎಂದ ಕೆಂಪಣ್ಣ: ಶೇ 40 ಲಂಚದ ಆರೋಪ ಮತ್ತೆ ಭುಗಿಲು

ಸಿದ್ದರಾಮಯ್ಯ ಜತೆ ಚರ್ಚಿಸಿದ ಕೆಂಪಣ್ಣ l ವಾಕ್ಸಮರಕ್ಕೆ ದಾರಿ
Last Updated 24 ಆಗಸ್ಟ್ 2022, 19:46 IST
ಅಕ್ಷರ ಗಾತ್ರ

ಬೆಂಗಳೂರು: ವರ್ಷದ ಹಿಂದೆ ರಾಜ್ಯದಲ್ಲಿ ಜೋರಾಗಿ ಸದ್ದು ಮಾಡಿದ್ದ ಶೇಕಡ 40 ರಷ್ಟು ಲಂಚದ ಆರೋಪ ಈಗ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂ‍‍ಪಣ್ಣ ಅವರು ಆರೋಪವನ್ನು ಪುನರುಚ್ಚರಿಸುವುದರ ಜತೆಯಲ್ಲೇ ಬಿಬಿ ಎಂಪಿ ಗುತ್ತಿಗೆದಾರರ ಸಂಘ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್‌) ಗುತ್ತಿಗೆದಾರರ ಸಂಘ ಗಳೂ ಆರೋಪಕ್ಕೆ ದನಿಗೂಡಿಸಿವೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿಮಾಡಿದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಮತ್ತು ಪದಾಧಿಕಾರಿಗಳು, ಇದೇ ವಿಚಾರ ಕುರಿತು ಚರ್ಚೆ ನಡೆಸಿ ದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕೆಂಪಣ್ಣ, ‘ಪ್ರಧಾನಿ ನರೇಂದ್ರ ಮೋದಿಯವರಿಗೆ 2021ರ ಜುಲೈನಲ್ಲೇ ಪತ್ರದ ಮೂಲಕ ದೂರು ನೀಡಿದ್ದೆವು. ಆದರೆ, ಈಗಲೂ ಶೇಕಡ 40ರಷ್ಟು ಲಂಚ ನಿಂತಿಲ್ಲ’ ಎಂದು ಆರೋಪಿಸಿದರು. ‘ಗುತ್ತಿಗೆದಾರರಿಂದ ಹಣ ಸಂಗ್ರಹಿಸುವಂತೆ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ’ ಎಂದು ನೇರ ಆರೋಪ ಮಾಡಿದರು.

ಬಳಿಕ ಗುತ್ತಿಗೆದಾರರ ಸಂಘದ ಕಚೇರಿಯಲ್ಲಿ ಸಭೆ ನಡೆಸಿದ ಪದಾಧಿಕಾರಿಗಳು, ಕೆಲವು ಸಚಿವರ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸುವ ಕುರಿತು ಚರ್ಚಿಸಿದ್ದಾರೆ. ಲಭ್ಯವಿರುವ ದಾಖಲೆಗಳನ್ನು ಮುಂದಿಟ್ಟುಕೊಂಡು ಹೋರಾಟ ಕೈಗೆತ್ತಿಕೊಳ್ಳುವ ಕುರಿತೂ ಚರ್ಚಿಸಿದ್ದಾರೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆದಾರರು ಶೇ 50ರಷ್ಟು ಲಂಚ ಕೊಡಬೇಕಿದೆ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪಾಲಿಕೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರಿಗೆ ಮಂಗಳವಾರ ಲಿಖಿತ ದೂರು ಸಲ್ಲಿಸಿದೆ. ಈ ವಿಚಾರ ಬಿಜೆಪಿ– ಕಾಂಗ್ರೆಸ್‌ ನಡುವೆ ತೀವ್ರ ವಾಕ್ಸಮರಕ್ಕೆ ನಾಂದಿಹಾಡಿದೆ. ಬಿಬಿಎಂಪಿ ಗುತ್ತಿಗೆದಾರರ ಸಂಘದ ಆರೋಪದ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲೂ ಚರ್ಚೆಯ ಮುನ್ನೆಲೆಗೆ ಬಂದಿದೆ.

‘ಆತ್ಮಹತ್ಯೆಯ ಒತ್ತಡ’: ‘ಕ್ರೈಸ್‌ಗೆ ಸಂಬಂಧಿಸಿದಂತೆ ರಾಜ್ಯದ ವಿವಿಧೆಡೆ ಕೈಗೊಂಡಿರುವ ಕಾಮಗಾರಿಗಳ ಬಾಬ್ತು ಗುತ್ತಿಗೆದಾರರಿಗೆ ₹ 1,200 ಕೋಟಿ ಬಿಲ್‌ ಬಾಕಿ ಉಳಿದಿದೆ. ಕಟ್ಟಡಗಳು ಹಸ್ತಾಂತರಕ್ಕೆ ಸಿದ್ಧವಾಗಿದ್ದರೂ ಬಿಲ್‌ ಪಾವತಿಸುತ್ತಿಲ್ಲ. ನೂರಾರು ಗುತ್ತಿಗೆದಾರರು ನಿಮ್ಮನ್ನು ಭೇಟಿಮಾಡಿದ್ದರೂ ಕ್ರಮಕೈಗೊಂಡಿಲ್ಲ. ಸಾಲದ ಭಾರ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಕ್ರೈಸ್‌ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶಂಕರಗೌಡ ಎನ್‌. ಹೊಸಮನಿ ಮತ್ತು ಪ್ರಧಾನ ಕಾರ್ಯದರ್ಶಿ ಎಂ.ಬಿ. ಶ್ರೀನಿವಾಸಗೌಡ
ಮುಖ್ಯಮಂತ್ರಿಯವರಿಗೆ ಶುಕ್ರವಾರ ನೀಡಿದ ಪತ್ರದಲ್ಲಿ ದೂರಿದ್ದಾರೆ.

ಬಾಕಿ ಬಿಲ್‌ ಪಾವತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ತಪ್ಪಿದರೆ ಕ್ರೈಸ್‌ ಕಚೇರಿ ಎದುರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗುವುದು ಎಂದು ಸಂಘ ಹೇಳಿದೆ.

ಲೋಕಾಯುಕ್ತಕ್ಕೆ ದೂರು ನೀಡಲಿ: ಸಿ.ಎಂ

‘ಲಂಚದ ಆರೋಪಕ್ಕೆ ಪೂರಕವಾಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬಳಿ ದಾಖಲೆ ಇದ್ದರೆ ಲೋಕಾ ಯುಕ್ತಕ್ಕೆ ದೂರು ನೀಡಲಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಗುತ್ತಿಗೆದಾರರ ಸಂಘದ ಆರೋಪ ಕುರಿತು ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ‘ಅವರ ಆರೋಪದಲ್ಲಿ ಹುರುಳಿಲ್ಲ. ಆಧಾರರಹಿತವಾಗಿಇಂತಹ ಹೇಳಿಕೆ ನೀಡಬಾರದು. ಲೋಕಾಯುಕ್ತವು ಸ್ವತಂತ್ರ ತನಿಖಾ ಸಂಸ್ಥೆ. ಅಲ್ಲಿಯೇ ತನಿಖೆ ನಡೆಯಲಿ’ ಎಂದರು.

‘ಗುತ್ತಿಗೆದಾರರ ಸಂಘದ ಅಧ್ಯಕ್ಷರು ಹಿಂದೆ ಹೇಳಿದ್ದ ವಿಚಾರದಲ್ಲಿ ಎಲ್ಲ ಕ್ರಮಗಳನ್ನೂ ಕೈಗೊಂಡಿದ್ದೆವು. ಈಗ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿದ ಬಳಿಕ ಆರೋಪ ಮಾಡುತ್ತಿದ್ದಾರೆ. ಅದನ್ನೂ ಗಮನಿಸಬೇಕು. ಕೆಂಪಣ್ಣ ಅವರ ಸಂಘವೊಂದೇ ಇಲ್ಲ. ಗುತ್ತಿಗೆದಾರರ ಹಲವು ಸಂಘಗಳಿವೆ. ಅವುಗಳಲ್ಲಿ ಕೆಂಪಣ್ಣ ಅವರ ಸಂಘವೂ ಒಂದು’ ಎಂದು ಮುಖ್ಯಮಂತ್ರಿ ಹೇಳಿದರು.

ಪ್ರಧಾನಿಯವರಿಗೆ ಪತ್ರ ಬರೆಯಲು ಈ ದೇಶದ ಎಲ್ಲ ಪ್ರಜೆಗಳಿಗೂ ಅಧಿಕಾರ ಇದೆ. ಹೈಕೋರ್ಟ್‌ ಆದೇಶದ ಬಳಿಕ ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರವಿದೆ. ನಿರ್ದಿಷ್ಟ ದೂರು ನೀಡಿದರೆ ತನಿಖೆಯಾಗುತ್ತದೆ. ಯಾರೇ ತಪ್ಪು ಮಾಡಿದ್ದರೂ ಸರ್ಕಾರ ಕ್ರಮ ಜರುಗಿಸುತ್ತದೆ ಎಂದರು.

ಸಚಿವರೊಬ್ಬರ ವಿರುದ್ಧ ಮೊಕದ್ದಮೆ’

‘ಅತಿಯಾದ ಭ್ರಷ್ಟಾಚಾರದಲ್ಲಿ ನಿರತರಾಗಿರುವ ಒಬ್ಬ ಸಚಿವರ ವಿರುದ್ಧ ಶೀಘ್ರದಲ್ಲೇ ಕ್ರಿಮಿನಲ್‌ ಮೊಕದ್ದಮೆ ಹೂಡುತ್ತೇವೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ತಿಳಿಸಿದರು.

ಸಂಘದ ಪದಾಧಿಕಾರಿಗಳ ಸಭೆ ಬಳಿಕ ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಕೆಲವು ಸಚಿವರು ಭ್ರಷ್ಟಾಚಾರದಲ್ಲಿ ನಿರತರಾಗಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಲಭಿಸಿವೆ’ ಎಂದರು.

ಸಿಎಂ ಸೇರಿ ಎಲ್ಲರೂ ಭ್ರಷ್ಟರು: ಕೆಂಪಣ್ಣ

ಬೆಂಗಳೂರು: ‘ಇದು ಅತ್ಯಂತ ಭ್ರಷ್ಟ ಸರ್ಕಾರ. ನನ್ನ ಜೀವನದಲ್ಲೇ ಇಂತಹ ಸರ್ಕಾರವನ್ನು ನೋಡಿಲ್ಲ. ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಭ್ರಷ್ಟರಾಗಿದ್ದಾರೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಆರೋಪಿಸಿದರು.

ವಿಧಾನಸಭೆಯ ವಿರೋಧ ಪ‍ಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ‘ಕೆಲವು ಕಡೆ ಶೇ 40 ಮಾತ್ರವಲ್ಲ ಅದಕ್ಕಿಂತಲೂ ಹೆಚ್ಚು ಕಮಿಷನ್ ಕೇಳುತ್ತಿದ್ದಾರೆ. ಈ ಬಗ್ಗೆ 15 ದಿನಗಳಲ್ಲಿ ಮತ್ತೊಮ್ಮೆ ಪ್ರಧಾ‌ನಿಗೆ ಪತ್ರ ಬರೆಯುತ್ತೇನೆ’ ಎಂದರು.

‘ಒಬ್ಬರು, ಇಬ್ಬರು ಎಂದಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಎಲ್ಲರೂ ಭ್ರಷ್ಟರಾಗಿದ್ದಾರೆ. ಎಲ್ಲ ಸಚಿವರು, ಶಾಸಕರು ಶೇ 10ರಿಂದ 15ರಷ್ಟು ಕಮಿಷನ್‌ ಕೇಳುತ್ತಿದ್ದಾರೆ. ಈ ವಿಷಯದಲ್ಲಿ ಯಾರಿಗೂ ರ‍್ಯಾಂಕಿಂಗ್‌ ಕೊಡಲು ಆಗುವುದಿಲ್ಲ. ಕೆಲವು ಕಡೆ ಶೇ 100 ಭ್ರಷ್ಟಾಚಾರ ಇದೆ. ಕೆಲವು ಕಡೆ ಒಂದು ಪೈಸೆಯಷ್ಟೂ ಕೆಲಸ ಮಾಡದೇ ಶೇ 100 ತಿಂದಿಲ್ಲವೇ’ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

‘ಭ್ರಷ್ಟಾಚಾರ ದೇಶಕ್ಕೆ ಮಾರಕವೆಂದು ಸ್ವಾತಂತ್ರ್ಯ ದಿನಾಚರಣೆ ದಿನ ಪ್ರಧಾನಿ ಭಾಷಣ ಮಾಡಿದ್ದಾರೆ. ಇದನ್ನು ನಾವು ಸ್ವಾಗತಿಸುತ್ತೇವೆ. ಆದರೆ, ನಾವು ಕೊಟ್ಟಿದ್ದ ದೂರಿನ ಬಗ್ಗೆ ಇನ್ನೂ ಯಾಕೆ ಕ್ರಮಕೈಗೊಂಡಿಲ್ಲ’ ಎಂದು ಕೆಂಪಣ್ಣ ಪ್ರಶ್ನಿಸಿದರು.

‘ಮುಖ್ಯಮಂತ್ರಿ ಮಾತಿಗೆ ಕವಡೆ ಕಾಸಿನ ಬೆಲೆ ಇಲ್ಲ. ಅವರು ಆದೇಶ ನೀಡಿದರೂ ಹಣ ಬಿಡುಗಡೆ ಆಗುತ್ತಿಲ್ಲ. ಟೆಂಡರ್ ಕರೆಯುವ ಪ್ರಕ್ರಿಯೆ ಬದಲಾಯಿಸಲು ಮುಖ್ಯಮಂತ್ರಿ ಹೇಳಿದ್ದರು. ಆದರೆ, ಅಧಿಕಾರಿಗಳು ಅವರ ಮಾತು ಕೇಳುತ್ತಿಲ್ಲ’ ಎಂದರು.

‘ಜಲಸಂಪನ್ಮೂಲ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳು ಹಾಗೂ ಬಿಬಿಎಂಪಿಯಿಂದ ಸುಮಾರು ₹ 22 ಸಾವಿರ ಕೋಟಿಗೂ ಹೆಚ್ಚು ಹಣ ಗುತ್ತಿಗೆದಾರರಿಗೆ ಬಿಡುಗಡೆ ಆಗಬೇಕಿದೆ. ಮೂರು ವರ್ಷಗಳಿಂದ ಬಿಲ್ ಬಾಕಿ ಇದೆ. ಸಿದ್ದರಾಮಯ್ಯ ಅವರಿಗೆ ಕೆಲವು ಮಾಹಿತಿಗಳನ್ನು ನೀಡಿದ್ದೇವೆ. ಸದನದಲ್ಲಿ ಈ ವಿಚಾರ ಪ್ರಸ್ತಾಪಿಸುತ್ತೇನೆ ಎಂದು ಅವರು ಹೇಳಿದ್ದಾರೆ’ ಎಂದು ತಿಳಿಸಿದರು.

‘ಸಿದ್ದರಾಮಯ್ಯ ಅವರಿಗೆ ನಾವು ಯಾವುದೇ ದಾಖಲೆಗಳನ್ನು ಕೊಟ್ಟಿಲ್ಲ. ದಾಖಲೆ ಯಾರಿಗೆ ಕೊಟ್ಟರೂ ಯಾರು ಕೊಟ್ಟರು ಎಂಬುದು ಗೊತ್ತಾಗುತ್ತದೆ. ತನಿಖೆ ಮಾಡಿದಾಗ ದಾಖಲೆಗಳನ್ನು ಕೊಡುತ್ತೇವೆ. ನ್ಯಾಯಾಂಗ ತನಿಖೆ ನಡೆಸಲಿ’ ಎಂದು ಆಗ್ರಹಿಸಿದರು.

ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ‘ಶೇ 40 ಕಮಿಷನ್‌ ಆರೋಪದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ನಮ್ಮ ಆಗ್ರಹಕ್ಕೆ ಬೆಲೆ ಕೊಡದೆ, ಭಂಡತನ ಪ್ರದರ್ಶಿಸಿದರೆ ಜನರ ಬಳಿಗೆ ಈ ವಿಚಾರವನ್ನು ತೆಗೆದುಕೊಂಡು ಹೋಗುತ್ತೇವೆ. ಜನ ತೀರ್ಮಾನಿಸುತ್ತಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಭೇಟಿಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸರ್ಕಾರದ ಭ್ರಷ್ಟಾಚಾರವನ್ನು ಸಾಬೀತು ಮಾಡುತ್ತೇವೆ. ಸಾಬೀತು ಮಾಡದೇ ಇದ್ದರೆ ನಮ್ಮ ಮೇಲೆ ಕಾನೂನು ಕ್ರಮ ಜರುಗಿಸಿ, ಎದುರಿಸಲು ಸಿದ್ಧರಿದ್ದೇವೆ ಎಂದು ಗುತ್ತಿಗೆದಾರರ ಸಂಘದವರು ಹೇಳುತ್ತಿದ್ದಾರೆ’ ಎಂದರು.

‘ಸಚಿವ ಮುನಿರತ್ನ ಅವರ ಹೆಸರನ್ನು ಕೆಂಪಣ್ಣ ಪ್ರಸ್ತಾಪಿಸಿದ್ದಾರೆ. ನೀರಾವರಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆ, ಬೆಂಗಳೂರು ನಗರಾಭಿವೃದ್ಧಿ ಇಲಾಖೆಗಳಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದಿದ್ದಾರೆ. ಸಿದ್ದರಾಮಯ್ಯ ಅವರದ್ದು ಶೇ 10 ಕಮಿಷನ್‌ ಸರ್ಕಾರ ಎಂದು ಚುನಾವಣಾ ಭಾಷಣದಲ್ಲಿ ನರೇಂದ್ರ ಮೋದಿ ಆರೋಪಿಸಿದಾಗ ಎಲ್ಲರೂ ಅದಕ್ಕೆ ಪ್ರಚಾರ ನೀಡಿದರು. ಯಾರೂ ಅವರ ಬಳಿ ದಾಖಲೆ ಕೇಳಿಲ್ಲ. ಈಗ ಗುತ್ತಿಗೆದಾರರ ಸಂಘದವರು ಸರ್ಕಾರದ ಭ್ರಷ್ಟಾಚಾರವನ್ನು ಸಾಬೀತು ಮಾಡಲು ಸಿದ್ಧರಿದ್ದಾರೆ. ತನಿಖೆ ಆಗಬೇಕೋ ಬೇಡವೋ’ ಎಂದರು.

‘ಲಿಂಗಸುಗೂರು, ದೇವದುರ್ಗದಲ್ಲಿ ಕಾಮಗಾರಿಯನ್ನೇ ಮಾಡದೆ ಬಿಲ್‌ ತೆಗೆದುಕೊಂಡಿದ್ದಾರೆ ಎಂಬ ಆರೋಪ ಇದೆ. ನ್ಯಾಯಾಂಗ ತನಿಖೆ ನಡೆದರೆ ಈ ಎಲ್ಲ ವಿಚಾರ ಹೊರಬರಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT