ಮಂಗಳವಾರ, ಮಾರ್ಚ್ 28, 2023
31 °C
ಅಮೆರಿಕದ ಕನ್ನಡಿಗರಲ್ಲಿ ಮುಖ್ಯಮಂತ್ರಿ ಮನವಿ

ಶಾಲಾ, ಕಾಲೇಜು ಅಭಿವೃದ್ಧಿಗೆ ಸಹಕರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಶಾಲಾ, ಕಾಲೇಜುಗಳು ಸೇರಿದಂತೆ ಹುಟ್ಟೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಕೈಜೋಡಿಸಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮನವಿ ಮಾಡಿದರು.

ಅಮೆರಿಕದ ಕನ್ನಡ ಕೂಟಗಳ ಆಗರ (ಅಕ್ಕ) ಆಯೋಜಿಸಿರುವ ವರ್ಚುವಲ್‌ ‘ಅಕ್ಕ ವಿಶ್ವ ಸಮ್ಮೇಳನ–2020’ ಅನ್ನು ತಮ್ಮ ಗೃಹ ಕಚೇರಿ ಕೃಷ್ಣಾದಿಂದ ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಕನ್ನಡದ ನೆಲವನ್ನು ಸಮೃದ್ಧಗೊಳಿಸಲು ನಿಮ್ಮ ಶಕ್ತಿಯನ್ನು ಧಾರೆ ಎರೆಯಿರಿ’ ಎಂದು ವಿನಂತಿಸಿಕೊಂಡರು.

‘ರಾಜ್ಯದಲ್ಲಿ ಅತಿವೃಷ್ಟಿ, ಪ್ರವಾಹ, ಭೂಕುಸಿತದಿಂದ ಜನರು ಸಂಕಷ್ಟಕ್ಕೀಡಾದಾಗ ಅಮೆರಿಕದ ಕನ್ನಡಿಗರು ನೆರವಾಗಿದ್ದೀರಿ. ಕೊರೊನಾ ಲಾಕ್‌ಡೌನ್‌ ಅವಧಿಯಲ್ಲೂ ಜನರಿಗೆ ಆರ್ಥಿಕ ನೆರವು ಒದಗಿಸಿದ್ದೀರಿ. ಮುಂದೆಯೂ ಕನ್ನಡದ ಸಾಹಿತ್ಯ, ಸಂಸ್ಕೃತಿಯನ್ನು ವಿದೇಶದಲ್ಲಿ ಜೀವಂತವಾಗಿಡುವ ಕೆಲಸದ ಜತೆಯಲ್ಲೇ ನಾಡಿನ ಅಭಿವೃದ್ಧಿಗೆ ಸಹಕಾರ ನೀಡಬೇಕು’ ಎಂದು ಕೋರಿದರು.

ಅಕ್ಕ ಸಂಘಟನೆಯು ಎರಡು ದಶಕಗಳಿಂದ ಉತ್ತಮ ಕೆಲಸಗಳನ್ನು ಮಾಡಿದೆ. ಕಡಲಾಚೆಯಲ್ಲಿ ಕನ್ನಡ ಕಂಪನ್ನು ಬೀರುವ ಮತ್ತು ನಾಡಿನ ಕಲೆ, ಸಂಸ್ಕೃತಿಯ ಶಾಖೆಗಳನ್ನು ವಿಸ್ತರಿಸುವ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸಿದೆ. ಎರಡು ವರ್ಷಕ್ಕೊಮ್ಮೆ ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸುವ ಮೂಲಕ ಕನ್ನಡದ ಕಹಳೆ ಮೊಳಗಿಸುತ್ತಿರುವುದು ಶ್ಲಾಘನೀಯ ಎಂದರು.

‘ಎಲ್ಲಿದ್ದರೂ, ಎಂತಿದ್ದರೂ ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯಂತೆ ಅಮೆರಿಕದ ಕನ್ನಡಿಗರು ಕೆಲಸ ಮಾಡುತ್ತಿದ್ದಾರೆ. ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ವಿದೇಶಗಳಲ್ಲಿ ಪರಿಚಯಿಸುವ ಮತ್ತು ಇಲ್ಲಿನ ಪ್ರತಿಭೆಗಳಿಗೆ ಅಂತರರಾಷ್ಟ್ರೀಯ ವೇದಿಕೆಯನ್ನು ಒದಗಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಕನ್ನಡಿಗರಲ್ಲಿ ವಿಶ್ವಮಾನವರಾಗುವ ಅಂತಃಶಕ್ತಿ ಇದ್ದು, ಅದನ್ನು ಜಗತ್ತಿಗೆ ಪರಿಚಯಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಹೇಳಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ‌ ಉದಾಸಿ ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಸಚಿವರಾದ ಜಗದೀಶ ಶೆಟ್ಟರ್‌, ಸಿ.ಟಿ.ರವಿ, ‘ಅಕ್ಕ’ ಅಧ್ಯಕ್ಷ ಅಮರನಾಥ ಗೌಡ, ಸಮ್ಮೇಳನದ ಅಧ್ಯಕ್ಷ ತುಮಕೂರು ದಯಾನಂದ್‌ ವರ್ಚುವಲ್‌ ಸಮಾರಂಭದಲ್ಲಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು