ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಮಕಾತಿಯಲ್ಲಿ ಅಕ್ರಮ, ತನಿಖೆಗೆ ಗಡುವು: ಉಮೇಶ್‌ ಕತ್ತಿ

ವಿಧಾನಪರಿಷತ್‌ನಲ್ಲಿ ಅರಣ್ಯ ಸಚಿವ ಉಮೇಶ ಕತ್ತಿ
Last Updated 21 ಫೆಬ್ರುವರಿ 2022, 16:09 IST
ಅಕ್ಷರ ಗಾತ್ರ

ಬೆಂಗಳೂರು: ‘ಅರಣ್ಯ ಇಲಾಖೆಯ ವಿವಿಧ ಹುದ್ದೆಗಳ ನೇರ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಕುರಿತು ನಡೆಯುತ್ತಿರುವ ತನಿಖೆಯ ಅಂತಿಮ ವರದಿ ಸಲ್ಲಿಕೆಗೆ ಒಂದು ವಾರ ಗಡುವು ನೀಡಲಾಗಿದೆ. ಈ ಅವಧಿಯಲ್ಲಿ ವರದಿ ನೀಡದಿದ್ದರೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ತನಿಖೆ ನಡೆಸುವಂತೆ ಕೋರಲಾಗುವುದು’ ಎಂದು ಅರಣ್ಯ ಸಚಿವ ಉಮೇಶ್‌ ವಿ. ಕತ್ತಿ ತಿಳಿಸಿದರು.

ವಿಧಾನಪರಿಷತ್‌ನಲ್ಲಿ ಸೋಮವಾರ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಆಯನೂರು ಮಂಜುನಾಥ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಪ್ರಕರಣದಲ್ಲಿ ಇಲಾಖಾ ಮುಖ್ಯಸ್ಥರು ಮತ್ತು ಯಾವುದೇ ಸಿಬ್ಬಂದಿಯನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ನೇಮಕಾತಿಯಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಜಾಗೃತ) ಅವರಿಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು) ಸೂಚಿಸಿದ್ದರು. ಅವರು ತನಿಖೆ ನಡೆಸಿ ಪ್ರಾಥಮಿಕ ವರದಿಯನ್ನು 2021 ರ ನ.16ರಂದು ಸಲ್ಲಿಸಿದ್ದರು’ ಎಂದು ಸಚಿವರು ವಿವರಿಸಿದರು.

‘ತನಿಖಾ ವರದಿ ಪರಿಶೀಲಿಸಿ, ಕೆಲವು ಅಂಶಗಳ ಬಗ್ಗೆ ಸ್ಪಷ್ಟನೆ ಕೋರಿ ಹಿಂತಿರುಗಿಸಲಾಗಿತ್ತು. ನಂತರ ಪರಿಷ್ಕೃತ ವರದಿಯನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ 2022ರ ಜನವರಿ 25 ರಂದು ಸಲ್ಲಿಸಲಾಗಿದೆ. ಈ ವರದಿಯು ಪರಿಶೀಲನಾ ಹಂತದಲ್ಲಿದೆ. ಪರಿಶೀಲನೆಯ ನಂತರ ನಿಯಮಾನುಸಾರ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದರು.

‘ಈ ಪ್ರಕರಣದಲ್ಲಿ ಆರೋಪಿಗಳು ಎನ್ನಲಾದ ನೌಕರರನ್ನು ಸಹ ವರ್ಗಾವಣೆ ಮಾಡಲಾಗಿದೆ. ಆಡಳಿತಾಧಿಕಾರಿ ಹುದ್ದೆಯು ಬೇರೆ ಜಿಲ್ಲೆಯ ಕಚೇರಿಗಳಲ್ಲಿ ಲಭ್ಯ ಇಲ್ಲ. ಹೀಗಾಗಿ, ಬೆಂಗಳೂರಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅಭಿವೃದ್ಧಿ) ಕಚೇರಿಗೆ ನಿಯೋಜಿಸಲಾಗಿದೆ’ ಎಂದು ವಿವರಿಸಿದರು.

‘ಆಡಳಿತಾಧಿಕಾರಿಯು ನೇಮಕಾತಿಗೆ ಸಂಬಂಧಿಸಿದ ಕಡತಗಳನ್ನು ನಿರ್ವಹಿಸುತ್ತಿಲ್ಲ. ಸುಗಮ ಆಡಳಿತಾತ್ಮಕ ದೃಷ್ಟಿಯಿಂದ ವೇತನ ಹಾಗೂ ಇತರ ಬಿಲ್‌ಗಳಿಗೆ ಸಹಿ ಮಾಡುವ ಅಧಿಕಾರವನ್ನು ಮಾತ್ರ ನೀಡಲಾಗಿದೆ’ ಎಂದು ತಿಳಿಸಿದರು.

ಅರಣ್ಯ ರಕ್ಷಕರ 339 ಹುದ್ದೆಗಳು ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ 16 ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿತ್ತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT