ಶುಕ್ರವಾರ, ಮೇ 20, 2022
21 °C
ನೆಗೆಟಿವ್‌ ವರದಿ ಇದ್ದರೆ ಕೊಡಗಿನಲ್ಲಿ ಹೋಂ ಸ್ಟೇ ಪ್ರವೇಶ

ಕೋವಿಡ್‌-19: ಗಡಿಯಲ್ಲಿ ನಡೆಯುತ್ತಿಲ್ಲ ತಪಾಸಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು/ಮಡಿಕೇರಿ/ಚಾಮರಾಜನಗರ: ಕೇರಳ ರಾಜ್ಯದಲ್ಲಿ ಮತ್ತೆ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದು, ಗಡಿ ಭಾಗದ ಜಿಲ್ಲೆಗಳಾದ ಮೈಸೂರು, ಕೊಡಗು ಹಾಗೂ ಚಾಮರಾಜನಗರದಲ್ಲಿ ಆತಂಕ ನೆಲೆಸಿದೆ. ಆದರೆ, ಆ ರಾಜ್ಯದಿಂದ ಬರುವವರಿಗೆ ಕರ್ನಾಟಕದಲ್ಲಿ ಪರೀಕ್ಷೆ ಕಡ್ಡಾಯಗೊಳಿಸಿಲ್ಲ. ಗಡಿಯಲ್ಲಿ ತಪಾಸಣೆಗೆ ವ್ಯವಸ್ಥೆಯನ್ನೂ ಮಾಡಿಲ್ಲ.

‘ಕೇರಳದಿಂದ ಬಂದವರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸುವ ಸಂಬಂಧ ನಮಗೆ ಯಾವುದೇ ಮಾರ್ಗಸೂಚಿ ಬಂದಿಲ್ಲ. ಗಡಿಯಲ್ಲಿ ಕಾದುಕುಳಿತು ಪರೀಕ್ಷೆ ಮಾಡುವುದಾದರೂ ಹೇಗೆ? ಅವರೇ ಬಂದು ಪರೀಕ್ಷೆ ಮಾಡಿಸಿಕೊಂಡರೆ ಒಳ್ಳೆಯದು’ ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಮರನಾಥ್‌ ಪ್ರತಿಕ್ರಿಯಿಸಿದರು.

ವ್ಯಾಸಂಗಕ್ಕಾಗಿ ಕೇರಳದಿಂದ ಮೈಸೂರಿಗೆ ಬರುತ್ತಿದ್ದು, ಅವರಲ್ಲೇ ಸೋಂಕು ಕಾಣಿಸಿಕೊಳ್ಳುತ್ತಿದೆ. ಖಾಸಗಿ ನರ್ಸಿಂಗ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 53 ವಿದ್ಯಾರ್ಥಿಗಳಲ್ಲಿ ಈಚೆಗೆ ಕೋವಿಡ್‌ ಪತ್ತೆಯಾಗಿದೆ. ಹೀಗಾಗಿ, ಮೈಸೂರಿನಲ್ಲಿರುವ ಎಲ್ಲಾ ನರ್ಸಿಂಗ್‌ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. 

ಪರೀಕ್ಷೆ ಮಾಡಿಸಿಕೊಳ್ಳಲು ಸೂಚನೆ: ವ್ಯಾಪಾರ, ಪ್ರವಾಸಕ್ಕೆಂದು ಕೇರಳಕ್ಕೆ ಹೋಗಿ ಬಂದವರು ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ಕೊಡಗು ಜಿಲ್ಲಾಡಳಿತ ಸೂಚಿಸಿದೆ. ಆದರೆ, ಚೆಕ್‌ಪೋಸ್ಟ್‌ಗಳಲ್ಲಿ ಯಾವುದೇ ಉಷ್ಣಾಂಶ ತಪಾಸಣೆ ನಡೆಯುತ್ತಿಲ್ಲ.

ಕೇರಳದಿಂದ ಕೊಡಗಿಗೆ ಬಂದು, ರೆಸಾರ್ಟ್‌ ಹಾಗೂ ಹೋಂಸ್ಟೇಗಳಲ್ಲಿ ವಾಸ್ತವ್ಯ ಮಾಡುವವರಿಗೆ ಕೋವಿಡ್‌ ನೆಗೆಟಿವ್‌ ವರದಿ ಕಡ್ಡಾಯ ಮಾಡಲಾಗಿದೆ.

ನಿರ್ಬಂಧ ಇಲ್ಲ: ಚಾಮರಾಜನಗರ ಗಡಿಯಲ್ಲಿ ಇದುವರೆಗೆ ಯಾವುದೇ ನಿರ್ಬಂಧ ಹೇರಿಲ್ಲ. ತಪಾಸಣೆಯೂ ನಡೆಯುತ್ತಿಲ್ಲ. ಈ ಬಗ್ಗೆ‌ ಸರ್ಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಚಾಮರಾಜನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ.ರವಿ ತಿಳಿಸಿದ್ದಾರೆ.

ವಿದೇಶಿ ಪ್ರಯಾಣಿಕರು: ನೆಗೆಟಿವ್ ವರದಿ ಕಡ್ಡಾಯ
ಬೆಂಗಳೂರು: ವಿದೇಶಗಳಿಂದ ಇಲ್ಲಿಗೆ ಬರುವವರು ಕೋವಿಡ್‌ ಆರ್‌ಟಿ–ಪಿಸಿಆರ್ ಪರೀಕ್ಷೆಯ ನೆಗೆಟಿವ್‌ ವರದಿ ತರಬೇಕು ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕೂಡ ಕೊರೊನಾ ರೂಪಾಂತರ ವೈರಾಣು ಕಾಣಿಸಿಕೊಂಡ ಕಾರಣ ಅಲ್ಲಿಂದ ಬರುವವರು ಸೋಂಕಿತರಾಗಿರದ ಬಗ್ಗೆ ಆರ್‌ಟಿ–ಪಿಸಿಆರ್ ಪರೀಕ್ಷೆ ವರದಿಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಅವರಿಗೆ ಇಲ್ಲಿನ ವಿಮಾನ ನಿಲ್ದಾಣಗಳಲ್ಲಿ ಕೂಡ ಆರ್‌ಟಿ–ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಸೋಂಕಿತರಾದಲ್ಲಿ ಅವರನ್ನು 14 ದಿನಗಳು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿ, ಮಾದರಿಯನ್ನು ಜಿನೋಮ್‍ ಸೀಕ್ವೆನ್ಸಿಂಗ್ ಪರೀಕ್ಷೆಗೆ ನಿಮ್ಹಾನ್ಸ್ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಸೋಂಕಿತರಾಗಿರದವರು 14 ದಿನಗಳು ಮನೆ ಕ್ವಾರಂಟೈನ್‌ಗೆ ಒಳಪಡಬೇಕು. 7ನೇ ದಿನಕ್ಕೆ ಮತ್ತೊಮ್ಮೆ ಆರ್‌ಟಿ–ಪಿಸಿಆರ್ ಪರೀಕ್ಷೆ ಮಾಡಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು