ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ವೈ. ವಿಜಯೇಂದ್ರ ದಂಪತಿ ಪೂಜೆ ವಿಚಾರ: ಶಿಕ್ಷೆ ಕೊಡಿಸಿ–ಇಒ ಅಳಲು, ಆಡಿಯೊ ವೈರಲ್

Last Updated 20 ಮೇ 2021, 19:31 IST
ಅಕ್ಷರ ಗಾತ್ರ

ಮೈಸೂರು: ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದಲ್ಲಿ ಮುಖ್ಯಮಂತ್ರಿ ಪುತ್ರ ಬಿ.ವೈ.ವಿಜಯೇಂದ್ರ ದಂಪತಿ ಪೂಜೆ ಸಲ್ಲಿಸಿದ್ದಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನ ವ್ಯಕ್ತಿಯೊಬ್ಬರೊಂದಿಗೆ ದೇಗುಲದ ಕಾರ್ಯ ನಿರ್ವಹಣಾಧಿಕಾರಿ ಮಾತನಾಡಿದ್ದು ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕರೆ ಮಾಡಿದ ವ್ಯಕ್ತಿಯು, ಮುಂದಿನ ವಾರ ತಮಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಅವಕಾಶ ಸಿಗಲಿದೆಯಾ ಎಂದು ಮಾತು ಆರಂಭಿಸುತ್ತಿದ್ದಂತೆಯೇ, ಅಧಿಕಾರಿಯು ತಕ್ಷಣವೇ ‘ಆ ಘಟನೆಗೆ ಸಂಬಂಧಿಸಿದಂತೆ ಕ್ಷಮೆ ಯಾಚಿಸುವೆ’ ಎನ್ನುತ್ತಾರೆ.

ಇಬ್ಬರ ನಡುವಿನ ಮಾತುಕತೆಯಲ್ಲಿ ‘ಪ್ರಜಾವಾಣಿ’ಯಲ್ಲಿ ಸುದ್ದಿ ಪ್ರಕಟವಾಗಿರುವುದೂ ಪ್ರಸ್ತಾಪವಾಗಿದೆ.

‘ಸರ್ಕಾರಿ ಅಧಿಕಾರಿಯಾಗಿ ಲಾಕ್‌ಡೌನ್‌ ನಿಯಮಾವಳಿ ಉಲ್ಲಂಘಿಸಿದ್ದು ಸರಿಯೇ’ ಎಂದು ಕರೆ ಮಾಡಿದ ವ್ಯಕ್ತಿ ಪ್ರಶ್ನಿಸಿದ್ದಕ್ಕೆ, ‘ಅವರು (ವಿಜಯೇಂದ್ರ ದಂಪತಿ) ಅಂತರ ಜಿಲ್ಲಾ ಪ್ರಯಾಣ ಮಾಡಿಕೊಂಡು ಬಂದಿದ್ದಾರೆ. ಅದನ್ನು ಯಾರಾದರೂ ಕೇಳ್ತಿದ್ದಾರಾ? ಕೋವಿಡ್‌–19 ನಿಯಮಾವಳಿಗಳನ್ನು ಅವರು ಕೂಡ ತಿಳಿದುಕೊಳ್ಳಬೇಕಿತ್ತಲ್ಲಾ’ ಎಂದು ಇಒ ಪ್ರತ್ಯುತ್ತರಿಸಿದ್ದಾರೆ.

‘ಅವರನ್ನು ಬಿಡಿ. ನಿಮಗೆ ಪ್ರಜ್ಞೆ ಇರಲಿಲ್ಲವೇ? ಸಂಬಂಧಿಸಿದ ಅಧಿಕಾರಿಯಾಗಿ ನೀವು ಬರಬೇಡಿ ಎಂದು ಹೇಳಬಹುದಿತ್ತು’ ಎಂದು ಕರೆ ಮಾಡಿದ ವ್ಯಕ್ತಿಯು ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಅಧಿಕಾರಿಯು, ‘ನನ್ನಿಂದ ತಪ್ಪಾಗಿದೆ. ಶಿಕ್ಷೆ ಕೊಡಿಸಿ. ನೀವೇ ಏನು ಬೇಕಾದರೂ ಮಾಡಿಸಿ. ಇನ್ನೊಂದು ವರ್ಷ ಸೇವಾ ಅವಧಿಯಿದೆ. ಸ್ವಯಂ ನಿವೃತ್ತಿಯನ್ನಾದರೂ ಪಡೆಯುವೆ. ನಾವೂ ಮನುಷ್ಯರಲ್ವಾ. ತಪ್ಪು ನಡೆದಿದೆ. ನನಗೂ ಸಾಕಾಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇದ್ದಾಗಲೂ ಇದೇ ರೀತಿ ಆಗಿತ್ತು’ ಎಂದೆಲ್ಲ ಅಸಹಾಯಕರಾಗಿ ಮಾತನಾಡಿದ್ದಾರೆ. ವೈರಲ್‌ ಆದ ಆಡಿಯೊಗೆ ಸಂಬಂಧಿಸಿದಂತೆ ಪ್ರತಿಕ್ರಿಯೆಗಾಗಿ ದೇಗುಲದ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ, ಅವರ ಮೊಬೈಲ್‌ ಫೋನ್‌ ಸ್ವಿಚ್‌ ಆಫ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT