ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಲ್ಲಿ ಕೋವಿಡ್‌ ಉಲ್ಬಣ: ರಾಜ್ಯಕ್ಕೆ ಬರುವವರಿಗೆ ‘ನೆಗೆಟಿವ್’ ಕಡ್ಡಾಯ

ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗೆ ಅರೋಗ್ಯ ಇಲಾಖೆಯ ಸೂಚನೆ
Last Updated 21 ಫೆಬ್ರುವರಿ 2021, 1:14 IST
ಅಕ್ಷರ ಗಾತ್ರ

ಬೆಂಗಳೂರು: ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರು ಪ್ರಯಾಣಕ್ಕೂ ಮೊದಲಿನ 72 ಗಂಟೆಗಳ ಅವಧಿಯಲ್ಲಿ ನಡೆಸಲಾದ ಕೋವಿಡ್ ಆರ್‌ಟಿ–ಪಿಸಿಆರ್‌ ಪರೀಕ್ಷೆಯ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಅರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಪಡೆದುಕೊಂಡಿದೆ. ಒಂದು ವಾರದಿಂದ ಪ್ರತಿನಿತ್ಯ ಸರಾಸರಿ 645 ಮಂದಿ ಕೋವಿಡ್ ಪೀಡಿತರಾಗುತ್ತಿದ್ದಾರೆ. ಅಮರಾವತಿ, ನಾಗಪುರ, ಪುಣೆ, ಮುಂಬೈ ಸೇರಿದಂತೆ ವಿವಿಧ ನಗರದಲ್ಲಿ ಗಮನಾರ್ಹವಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿವೆ. ಅಲ್ಲಿ ಕೋವಿಡ್‌ ಎರಡಲೇ ಅಲೆ ಪ್ರಾರಂಭವಾಗಿದೆ ಎನ್ನುವ ಸೂಚನೆಗಳು ದೊರೆತಿವೆ. ಹಾಗಾಗಿ, ಹೋಟೆಲ್‌, ರೆಸಾರ್ಟ್‌, ಹಾಸ್ಟೆಲ್‌, ಹೋಂ ಸ್ಟೇಗಳು ಮತ್ತಿತರ ಕಡೆಗಳಲ್ಲಿ ಮಹಾರಾಷ್ಟ್ರದಿಂದ ಹಿಂದಿರುಗಿರುವವರಿಗೆ ಪ್ರವೇಶ ನೀಡುವ ಮುನ್ನ ‘ಕೋವಿಡ್‌ ನೆಗೆಟಿವ್‌’ ವರದಿಯನ್ನು ಖಾತರಿಪಡಿಸಿಕೊಳ್ಳುವುದು ಕಡ್ಡಾಯ ಎಂದು ಇಲಾಖೆ ತಿಳಿಸಿದೆ.

ಮಹಾರಾಷ್ಟ್ರದಿಂದ ಬರುವ ವಿದ್ಯಾರ್ಥಿಗಳ ಮಾಹಿತಿಯನ್ನು ಕಾಲೇಜು ಮತ್ತು ಹಾಸ್ಟೆಲ್‌ಗಳ ಪ್ರತಿನಿಧಿಗಳು ಸಕ್ಷಮ ಪ್ರಾಧಿಕಾರದ ಜತೆ ಹಂಚಿಕೊಳ್ಳಬೇಕು. ನೋಡಲ್‌ ಅಧಿಕಾರಿಯ ಅನುಮತಿ ಇಲ್ಲದೆ ಪೋಷಕರ ಭೇಟಿಗೆ ಅವಕಾಶ ಕಲ್ಪಿಸುವಂತಿಲ್ಲ. ಊಟದ ಕೊಠಡಿಯಲ್ಲಿ ದಟ್ಟಣೆ ತಡೆಯಲು ಊಟದ ಅವಧಿಯನ್ನು ಹೆಚ್ಚಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಕಳೆದ ಎರಡು ವಾರದ ಅವಧಿಯಲ್ಲಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದಿರುವವರು (72 ಗಂಟೆಗಳ ಅವಧಿಯಲ್ಲಿ ಪರೀಕ್ಷೆಗೊಳಗಾದವರ ಹೊರತಾಗಿ) ಆರ್‌ಟಿ–ಪಿಸಿಆರ್‌ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ. ಈ ಸೂಚನೆ ಉಲ್ಲಂಘಿಸಿದವರನ್ನು ತಕ್ಷಣವೇ ಕ್ವಾರಂಟೈನ್‌ನಲ್ಲಿ ಇರಿಸಬೇಕು. ನೆಗೆಟಿವ್‌ ವರದಿ ಲಭ್ಯವಾದ ಬಳಿಕವೇ ಹೊರಹೋಗಲು ಅನುಮತಿ ನೀಡಬೇಕು. ಅಲ್ಪ ಸಮಯದ ಭೇಟಿಗೆ ಬರುವವರು ಕೂಡ ಕೋವಿಡ್‌ ನೆಗೆಟಿವ್ ವರದಿಯನ್ನು ತರಬೇಕು. ಆ ವರದಿಯು ಇಲ್ಲಿ 7 ದಿನಗಳವರೆಗೆ ಮಾತ್ರ ಮಾನ್ಯತೆ ಹೊಂದಿರುತ್ತದೆ ಎಂದು ತಿಳಿಸಲಾಗಿದೆ.

ಇಲ್ಲಿನ ಬಹುರಾಷ್ಟ್ರೀಯ ಕಂಪನಿಗಳು, ಹೋಟೆಲ್‌ಗಳು, ರೆಸಾರ್ಟ್‌ಗಳು, ಲಾಡ್ಜ್‌ಗಳು, ಹೋಂ ಸ್ಟೇಗಳಲ್ಲಿ ಕೆಲಸ ಮಾಡುತ್ತಿರುವ ಮಹಾರಾಷ್ಟ್ರದ ಸಂಪರ್ಕ ಇರುವ ನೌಕರರು ತಮ್ಮ ಸ್ವಂತ ಖರ್ಚಿನಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಐವರು ಸೋಂಕಿತರಿದ್ದರೆ ನಿರ್ಬಂಧಿತ ವಲಯ: ಯಾವುದೇ ಪ್ರದೇಶದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾದರೆ ಆ ಸ್ಥಳವನ್ನು ನಿರ್ಬಂಧಿತ ವಲಯ (ಕಂಟೇನ್‌ಮೆಂಟ್ ಝೋನ್‌) ಎಂದು ಘೋಷಿಸಬೇಕು. ಅಂತಹ ಸ್ಥಳದ ಮೇಲೆ ಸ್ಥಳೀಯ ಆಡಳಿತದಿಂದ ವಿಶೇಷ ನಿಗಾ ಇರಿಸಬೇಕು. ಏಳು ದಿನಗಳ ಬಳಿಕ ಮತ್ತೊಮ್ಮೆ ಕೋವಿಡ್‌ ಪರೀಕ್ಷೆ ನಡೆಸಬೇಕು ಎಂದು ಸುತ್ತೋಲೆಯಲ್ಲಿ ನಿರ್ದೇಶನ ನೀಡಲಾಗಿದೆ.

ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಪರೀಕ್ಷೆ:ರೂಪಾಂತರ ವೈರಾಣು ಕಾಣಿಸಿಕೊಂಡ ಕಾರಣ ಬ್ರಿಟನ್, ಯುರೋಪ್ ಮತ್ತು ಮಧ್ಯಪ್ರಾಚ್ಯದ ದೇಶಗಳಿಂದ ಬರುವ ವಿಮಾನಗಳಲ್ಲಿ ಇಲ್ಲಿಗೆ ಬರುವವರು ಪ್ರಯಾಣಕ್ಕೂ ಮೊದಲಿನ 72 ಗಂಟೆಗಳ ಅವಧಿಯಲ್ಲಿ ನಡೆಸಲಾದ ಕೋವಿಡ್‌ ಆರ್‌ಟಿ–ಪಿಸಿಆರ್ ಪರೀಕ್ಷೆಯ ನೆಗೆಟಿವ್‌ ವರದಿ ತರಬೇಕು. ಅವರಿಗೆ ಇಲ್ಲಿನ ವಿಮಾನ ನಿಲ್ದಾಣಗಳಲ್ಲಿ ಕೂಡ ಆರ್‌ಟಿ–ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಪರೀಕ್ಷೆಯ ವರದಿ ಬಂದ ಬಳಿಕವೇ ವಿಮಾನ ನಿಲ್ದಾಣದಿಂದ ಕಳುಹಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

‘ಸೋಂಕಿತರಾದಲ್ಲಿ ಅವರನ್ನು 14 ದಿನಗಳು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ. ಸೋಂಕಿತರಾಗಿರದವರು 14 ದಿನಗಳು ಮನೆ ಕ್ವಾರಂಟೈನ್‌ಗೆ ಒಳಪಡಬೇಕು. 7ನೇ ದಿನಕ್ಕೆ ಮತ್ತೊಮ್ಮೆ ಆರ್‌ಟಿ–ಪಿಸಿಆರ್ ಪರೀಕ್ಷೆ ಮಾಡಲಾಗುತ್ತದೆ’ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT