ಮಂಗಳವಾರ, ಜೂನ್ 22, 2021
24 °C

ಪಿಎಚ್‌ಸಿಗಳಲ್ಲೂ ಕೋವಿಡ್‌ ಕೇರ್‌ ಕೇಂದ್ರ: ಡಿಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ‘ಗ್ರಾಮೀಣ ಭಾಗದಲ್ಲಿ ಕೋವಿಡ್‌ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೋವಿಡ್‌ ಕೇರ್‌ ಕೇಂದ್ರಗಳನ್ನಾಗಿ ಪರಿವರ್ತಿಸಿ ಚಿಕಿತ್ಸೆ ನೀಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಗುರುವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸೋಂಕು ಪತ್ತೆಯಾದ ನಂತರ ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಿ ಇಲ್ಲಿಯವರೆಗೂ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರು ಮನೆಯಲ್ಲಿ ಉಳಿಯದೇ ಹೊರಗೆ ಓಡಾಡುತ್ತಿರುವ ಎಂಬ ದೂರುಗಳು ಬರುತ್ತಿವೆ. ಹೀಗಾಗಿ ಇನ್ನುಮುಂದೆ ಸೋಂಕು ಪತ್ತೆಯಾದ ನಂತರ ರೋಗಿಗಳನ್ನು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುವುದು’ ಎಂದರು.

‘ರೋಗಲಕ್ಷಣ ತೀವ್ರವಾದರೆ ಮಾತ್ರ ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಗುವುದು. ಇಲ್ಲದಿದ್ದರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಆರೈಕೆ ಮಾಡಲಾಗುವುದು. ಅಲ್ಲಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದರು.

‘ಕಪ್ಪು ಶಿಲೀಂದ್ರ ರೋಗ ಕೆಲವೆಡೆ ಪತ್ತೆಯಾಗಿದ್ದು ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಈ ರೋಗಕ್ಕೆ ಔಷಧಿ ಕೊರತೆ ಇದ್ದು ಹೊರದೇಶಗಳಿಂದ ತರಿಸಿಕೊಳ್ಳಲಾಗುತ್ತಿದೆ. ಮುಂದೆ ನಮ್ಮ ದೇಶದಲ್ಲೇ ಔಷಧಿ ಉತ್ಪಾದಿಸುವ ಪ್ರಯತ್ನ ನಡೆಯುತ್ತಿದೆ. ಈ ವರ್ಷಾಂತ್ಯಕ್ಕೆ ಎಲ್ಲರಿಗೂ ಕೋವಿಡ್‌ ಲಸಿಕೆ ದೊರೆಯುವಂತೆ ಮಾಡಲಾಗುವುದು’ ಎಂದರು.

ಸಿದ್ದರಾಮಯ್ಯ ಅವರ ಸಭೆಗೆ ಸರ್ಕಾರ ಅಡ್ಡಿ ಮಾಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ವಿರೋಧ ಪಕ್ಷದ ನಾಯಕರು ಸಭೆ ನಡೆಸಲು ಅವಕಾಶ ಇಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ. ಸದ್ಯ ರಾಜ್ಯದಲ್ಲಿ ಆಮ್ಲಜನಕ ಸಮಸ್ಯೆ ಇಲ್ಲ, ಎಲ್ಲವನ್ನೂ ಸರ್ಕಾರ ನೋಡಿಕೊಳ್ಳಲಿದೆ ಎಂದರು.

ಅಶ್ವತ್ಥನಾರಾಯಣ ಅವರು ಪಿಪಿಇ ಕಿಟ್‌ ಧರಿಸಿ ಕೋವಿಡ್‌ ವಾರ್ಡ್‌ಗೆ ತೆರಳಿ ರೋಗಿಗಳ ಆರೋಗ್ಯ ವಿಚಾರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು