ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಮೃತರಲ್ಲಿ ವೃದ್ಧರೇ ಅಧಿಕ

ನಗರದ 70 ವರ್ಷಗಳು ಮೇಲ್ಪಟ್ಟ ಸೋಂಕಿತರಲ್ಲಿ 5,804 ಮಂದಿ ಮರಣ
Last Updated 23 ಸೆಪ್ಟೆಂಬರ್ 2022, 19:09 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಈವರೆಗೆ ಕೋವಿಡ್‌ ಪೀಡಿತರಾದವರಲ್ಲಿ ವೃದ್ಧರೇ ಅಧಿಕ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ. 70 ವರ್ಷಗಳು ಮೇಲ್ಪಟ್ಟ ಸೋಂಕಿತರಲ್ಲಿ 5,804 ಮಂದಿ ಸಾವಿಗೀಡಾಗಿದ್ದಾರೆ.

ಈವರೆಗೆ 18.70 ಲಕ್ಷಕ್ಕೂ ಅಧಿಕ ಮಂದಿ ನಗರದಲ್ಲಿ ಸೋಂಕಿತರಾಗಿದ್ದಾರೆ. ಅವರಲ್ಲಿ 16,987 ಮಂದಿ ಮೃತಪಟ್ಟಿದ್ದಾರೆ. ಸೋಂಕಿನ ತೀವ್ರತೆಗೆ ಎಲ್ಲ ವಯೋಮಾನದವರೂ ಸಾವಿಗೀಡಾಗಿದ್ದಾರೆ. ಮಧುಮೇಹ, ಅಧಿಕ ರಕ್ತದೊತ್ತಡ ಸೇರಿ ವಿವಿಧ ವಯೋಸಹಜ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದವರಿಗೆ ಸೋಂಕು ಹೆಚ್ಚಿನ ಹಾನಿ ಮಾಡಿದೆ. ಇದರಿಂದಾಗಿ ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗಿದ್ದಾರೆ.

ನಗರದಲ್ಲಿ 2020ರ ಮಾ.8ರಂದು ಮೊದಲ ಕೋವಿಡ್ ಪ್ರಕರಣ ಪತ್ತೆಯಾಗಿತ್ತು. ಮೊದಲೆರಡು ಅಲೆಗಳಲ್ಲಿ ಸೋಂಕು ವೃದ್ಧರಿಗೆ ಹೆಚ್ಚಿನ ಅಪಾಯ ತಂದೊಡ್ಡಿತ್ತು. ತೀವ್ರ ನಿಗಾ ಘಟಕ (ಐಸಿಯು) ಹಾಸಿಗೆ, ವೆಂಟಿಲೇಟರ್ ಸಂಪರ್ಕ ಹೊಂದಿದ ಹಾಸಿಗೆಗಳ ಕೊರತೆಯಿಂದಾಗಿಯೂ ಕೆಲವರಿಗೆ ಚಿಕಿತ್ಸೆಯಲ್ಲಿ ವ್ಯತ್ಯಯವಾಗಿತ್ತು. ಇದರಿಂದಾಗಿ ಎರಡು ಅಲೆಗಳಲ್ಲಿ 16,400 ಮಂದಿ ಮೃತಪಟ್ಟಿದ್ದರು. ಮೂರನೇ ಅಲೆಯಲ್ಲಿ ಸೋಂಕಿನ ತೀವ್ರತೆ ಕಡಿಮೆ ಇದ್ದಿದ್ದರಿಂದ ಆಸ್ಪತ್ರೆ ದಾಖಲಾತಿ ಹೆಚ್ಚಳವಾಗಿರಲಿಲ್ಲ.

ಸದ್ಯ ಸೋಂಕು ದೃಢ ಪ್ರಮಾಣ ಶೇ 1.69 ರಷ್ಟಿದೆ. ಮರಣ ಪ್ರಮಾಣ ದರವೂ ನಿಯಂತ್ರಣದಲ್ಲಿದ್ದು, ಶೇ 0.07 ರಷ್ಟಿದೆ. ನಗರದಲ್ಲಿ ವರದಿಯಾದ ಕೋವಿಡ್ ಮರಣ ಪ್ರಕರಣಗಳನ್ನು ಬಿಬಿಎಂಪಿ ವಾರ್‌ರೂಮ್ ವಿಶ್ಲೇಷಣೆಗೆ ಒಳಪಡಿಸಿದೆ.

ಮಕ್ಕಳ ಸಂಖ್ಯೆ ಕಡಿಮೆ: ಕೋವಿಡ್‌ನಿಂದ ಮೃತಪಟ್ಟವರಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಿದೆ. 10 ವರ್ಷದೊಳಗಿನವರಲ್ಲಿ 27 ಮಕ್ಕಳು ಮೃತಪಟ್ಟಿದ್ದಾರೆ. 10ರಿಂದ 20 ವರ್ಷದೊಳಗಿನವರಲ್ಲಿ 32 ಮಂದಿ ಸಾವಿಗೀಡಾಗಿದ್ದಾರೆ. 20ರಿಂದ 40 ವರ್ಷದೊಳಗಿನವರಲ್ಲಿ 1,253 ಮಂದಿ ಹಾಗೂ 40ರಿಂದ 50 ವರ್ಷದೊಳಗಿನವರಲ್ಲಿ 2,093 ಮಂದಿ ಸೋಂಕಿನ ತೀವ್ರತೆಗೆ ಮರಣ ಹೊಂದಿದ್ದಾರೆ. 50ರಿಂದ 70 ವರ್ಷದೊಳಗಿನವರಲ್ಲಿ 7,764 ಮಂದಿ ಕೊನೆಯುಸಿರೆಳೆದಿದ್ದಾರೆ.

‘ಆಸ್ಪತ್ರೆಗೆ ತಡವಾಗಿ ದಾಖಲು, ಐಸಿಯು ಹಾಸಿಗೆ ಕೊರತೆ ಕೂಡ ಮೊದಲೆರಡು ಅಲೆಯಲ್ಲಿ ಕೆಲವರ ಜೀವಕ್ಕೆ ಅಪಾಯವನ್ನು ತಂದೊಡ್ಡಿತು. ಬೇಜವಾಬ್ದಾರಿಯಿಂದ ಕೆಲವರು ಸಮಸ್ಯೆ ತಂದುಕೊಂಡರು.ಮೊದಲನೇ ಅಲೆಯಲ್ಲಿ ಹಿರಿಯ ನಾಗರಿಕರು ಸೋಂಕಿನ ತೀವ್ರತೆಗೆ ಹೆಚ್ಚಿನ ಪ್ರಮಾಣದಲ್ಲಿ ಅಸ್ವಸ್ಥರಾಗಿದ್ದರು. ಎರಡನೇ ಅಲೆಯಲ್ಲಿ ವೈರಾಣುವು ಅತಿವೇಗವಾಗಿ ವ್ಯಾಪಿಸಿಕೊಂಡಿತು. ತಡವಾಗಿ ಪರೀಕ್ಷೆ, ಮನೆ ಆರೈಕೆ ಸೇರಿ ವಿವಿಧ ಕಾರಣಗಳಿಂದ ಯುವಜನರು ಮತ್ತು ಮಧ್ಯ ವಯಸ್ಸಿನವರೂ ಮೃತಪಟ್ಟರು’ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.

‘ಮನೆ ಆರೈಕೆಯಲ್ಲಿರುವ ಕೆಲವರಿಗೆ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಅರಿವಿಗೆ ಬಾರದೆಯೇ ಶೇ 80ರಿಂದ ಶೇ 70ಕ್ಕೆ ದಿಢೀರ್ ಇಳಿಕೆಯಾಗುತ್ತಿತ್ತು. ಆಗ ಆಸ್ಪತ್ರೆಗೆ ತೆರಳದ ಪರಿಣಾಮ ಸೋಂಕು ಜೀವಕ್ಕೆ ಕುತ್ತಾಯಿತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT